ಆಹಾರಜೀವನ ಶೈಲಿ

‘ಉಡುಪಿ ಮಸಾಲ ದೋಸೆ’ ಮಾಡುವುದು ಹೇಗೆ?

ಸುಪ್ರಸಿದ್ಧ ಕವಿ ಜಾರ್ಜ್ ಬರ್ನಾರ್ಡ್ ಷಾ ಹೇಳುವ ಪ್ರಕಾರ “ನಾವು ಆಹಾರವನ್ನು ಪ್ರಾಮಾಣಿಕವಾಗಿ ಪ್ರೀತಿಸಿದಷ್ಟು ಬೇರೇನನ್ನು ಪ್ರೀತಿಸುವುದಿಲ್ಲ”. ಈಗ್ಯಾಕಪ್ಪ ಈ ಕವಿಯ ಮಾತು ನೆನಪಾಯಿತು ಅಂದ್ರೆ ಇಂದು ನಾವು ಬರೆಯುತ್ತಿರುವುದು ಕೂಡ ಅದೇ ಆಹಾರದ ಕುರಿತು. ಅಂದರೆ ದಕ್ಷಿಣ ಭಾರತದ ಅತಿ ಜನಪ್ರಿಯ ಆಹಾರ, ‘ಬ್ರೇಕ್ ಫಾಸ್ಟ್ ‘ ತಿನಿಸು ಎಂದೇ ಪ್ರಸಿದ್ಧವಾದ ‘ಮಸಾಲೆ ದೋಸೆ’ ಯ ಬಗ್ಗೆ.

‘ಮಸಾಲ ದೋಸೆ’…ಯಾರಿಗೆ ಗೊತ್ತಿಲ್ಲ ಹೇಳಿ ಈ ತಿಂಡಿಯ ಬಗ್ಗೆ, ಪುಟ್ಟ ಮಗುವಿನ ಬಾಯಲ್ಲಿಯೂ ನೀರು ತರಿಸುವಂತಹ ಈ ತಿನಿಸು ನಮ್ಮ ಕರ್ನಾಟಕದ ಆಲ್ ಟೈಮ್ ಫೇವರಿಟ್ ಫುಡ್ . ಹೌದು, ಇದೆಲ್ಲಾ ನಮಗೆ ಗೊತ್ತಿರುವ ವಿಚಾರ, ಇದನ್ಯಾಕೆ ಈಗ ಹೇಳತ್ತಿದ್ದೀರ ಎಂದು ನಿಮಗನಿಸಿರಬೇಕು. ಈಗಿದನ್ನು ಹೇಳಲು ಮುಖ್ಯ ಕಾರಣವೊಂದಿದೆ. ಅದೇನಪ್ಪಾ ಅಂದ್ರೆ ಸಿಎನ್ಎನ್ ಟ್ರಾವೆಲ್ ವರದಿಯ ಪ್ರಕಾರ ನಮ್ಮೆಲ್ಲರ ನೆಚ್ಚಿನ ದೈನಂದಿನ ತಿನಿಸು ‘ಮಸಾಲ ದೋಸೆ’ ವಿಶ್ವದ ಟಾಪ್ 50 ಟೇಸ್ಟಿ ಹಾಗೂ ಬೆಸ್ಟ್ ಫುಡ್ ಗಳಲ್ಲಿ 49 ನೇ ಸ್ಥಾನದಲ್ಲಿದೆ.

Image result for udupi dosa recipe

ಈವರೆಗೂ ಕೂಡ ನಮ್ಮ ಮಸಾಲ ದೋಸೆ ಕರ್ನಾಟಕ ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಹೆಸರು ಮಾಡುತ್ತಿದ್ದು, ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ನಿಜಕ್ಕೂ ಖುಷಿಯ ವಿಚಾರವೇ ಸರಿ. ಅಂದಹಾಗೆ ಮಸಾಲ ದೋಸೆ ಕಂಡು ಹಿಡಿದ ಮೊದಲ ಕ್ರೆಡಿಟ್ಟು ಮಂಗಳೂರಿಗರಿಗೆ ಸಲ್ಲುತ್ತದೆ. ಇಷ್ಟು ರುಚಿಯಾದ ಮಸಾಲ ದೋಸೆ ಅದರಲ್ಲೂ ಕರ್ನಾಟಕದ ಗರಿ ಗರಿಯಾದ ಮಸಾಲ ದೋಸೆಯನ್ನು ನೀವು ಇನ್ನೆಲ್ಲೂ ತಿನ್ನಲು ಸಾಧ್ಯವಿಲ್ಲ!

ಇನ್ನೊಂದು ಮಾತು ಹೇಳಲೇಬೇಕು ನೀವು ದೇಶದ ಯಾವುದೇ ‘ಉಡುಪಿ ಹೋಟೆಲ್’ ಗಳಿಗೆ ಹೋದರೆ ಅಲ್ಲಿ ನಿಮಗೆ ಮೆನುವಿನಲ್ಲಿ ಮೊದಲು ಕಾಣಸಿಗುವುದೇ ತುಳುವರು ಕಂಡುಹಿಡಿದ ಈ ಮಸಾಲ ದೋಸೆ. ಮಸಾಲೆ ದೋಸೆಯಲ್ಲಿಯೂ ಮೈಸೂರು ಮಸಾಲ ದೋಸೆ, ಮುಂಬೈ ಮೈಸೂರು ಮಸಾಲ ದೋಸೆ, ಚೆಟ್ಟಿನಾಡು ಚಿಕನ್ ಮಸಾಲ ಥೋಸಾಯ್, ಸ್ಕೀಝ್ವಾನ್ ಮಸಾಲ ದೋಸಾದಂತಹ ವೆರೈಟಿಗಳಿದ್ದರೂ ಜನ ಇಷ್ಟಪಡೋದು ಅದೇ ಹಳೇ ಸ್ವಾದವಿರುವ ಉಡುಪಿ ಮಸಾಲೆ ದೋಸೆ ಹಾಗೂ ಮೈಸೂರು ಮಸಾಲೆ ದೋಸೆ.

ಮೊದಲೆಲ್ಲಾ ಮಸಾಲೆ ದೋಸೆ ಎಂದರೆ ಎಲ್ಲ ಕಡೆ ಒಂದೇ ತರಹದ ಸ್ವಾದ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಗರದಿಂದ ನಗರಕ್ಕೆ ಈ ಸ್ವಾದ ಬದಲಾಗುತ್ತಲೇ ಇದೆ. ಆದರೇನಂತೆ ವಿಶ್ವವೇ ಮೆಚ್ಚಿಕೊಂಡ, ಅದೇ ಹಳೇ ಸ್ವಾದವಿರುವ ನಮ್ಮೆಲ್ಲರ ನೆಚ್ಚಿನ ಈ ತಿನಿಸನ್ನು ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ಕೊಡುತ್ತಿದ್ದೇವೆ.

ದೋಸೆಯ ಇತಿಹಾಸ ತೆಗೆದುಕೊಂಡರೆ ಮೊದಲೆಲ್ಲಾ ದೋಸೆಗೆ ಅಕ್ಕಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ರುಚಿಗೆಂದು ಅಕ್ಕಿಯ ಜೊತೆಗೆ ಉದ್ದಿನ ಬೇಳೆ, ಕಡಲೆ ಬೇಳೆ ಯನ್ನು ಮಿಶ್ರಣ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹಿಂದೆ ಒರಳುಗಲ್ಲಿನಲ್ಲಿ ರುಬ್ಬಿ ದೋಸೆ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ದೋಸೆ ಹೆಚ್ಚು ಸ್ವಾದಿಷ್ಟವಾಗಿರುತ್ತಿತ್ತು, ಅಲ್ಲದೇ ದೋಸೆಯ ಹಿಟ್ಟು ಬಹಳ ಬೇಗ ಹುಳಿ ಬರುತ್ತಿರಲಿಲ್ಲ. ಆದರೆ ಈಗ ಒರಳುಗಲ್ಲುಗಳ ಸಂಖ್ಯೆ ಕಡಿಮೆ. ಈಗೇನಿದ್ದರೂ ಮಿಕ್ಸಿಗಳದ್ದೇ ಹಾವಳಿ. ಹಾಗಾಗಿ ನಾವೂ ಮಿಕ್ಸಿಯ ಮೂಲಕ ಮಸಾಲೆ ದೋಸೆ ಹಿಟ್ಟಿನ ಮಿಶ್ರಣದ ಹದ ಮಾಡುವುದು ಹೇಗೆ ಎಂಬುದನ್ನು ಮೊದಲು ನೋಡೋಣ.

Image result for udupi masala dosa recipe

 

ಈ ರೆಸಿಪಿಗೆ 5 ಪದಾರ್ಥಗಳು ಮುಖ್ಯವಾಗಿ ಬೇಕು.

1. ಅರ್ಧ ಕಪ್-ಉದ್ದಿನಬೇಳೆ

2. ಒಂದು ಟೇಬಲ್ ಸ್ಪೂನ್ –ಕಡಲೆ ಬೇಳೆ

3. ಎರಡು ಟೇಬಲ್ ಸ್ಪೂನ್ ಅವಲಕ್ಕಿ

4. ಒಂದುವರೆ ಕಪ್ ಸೋನಾ ಮಸೂರಿ ಅಕ್ಕಿ. ಮಾರುಕಟ್ಟೆಯಲ್ಲಿ ಈಗ ವಿವಿಧ ತಳಿಯ ಅಕ್ಕಿಗಳು ಸಿಗುತ್ತಿದ್ದು, ಮಸಾಲ ದೋಸೆ ಮಾಡುವುದಕ್ಕೆ ಸೋನಾ ಮಸೂರಿ ಹೆಚ್ಚು ಸೂಕ್ತ.

5. ಅರ್ಧ ಕಪ್ ಇಡ್ಲಿ ರವೆ, ಉಪ್ಪು ರುಚಿಗೆ ತಕ್ಕಷ್ಟು, ನೀರು ಹದಕ್ಕೆ ಅನುಗುಣವಾಗಿ ಬೇಕಾಗುತ್ತದೆ.

ಮಾಡುವ ವಿಧಾನ:

* ಮೊದಲಿಗೆ ಅಕ್ಕಿ, ಉದ್ದಿನ ಬೇಳೆ ಮತ್ತು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಎರಡನ್ನೂ ಪ್ರತ್ಯೇಕವಾಗಿ 4-5 ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು.

* ಅವಲಕ್ಕಿಯನ್ನು ಸಹ 30 ನಿಮಿಷಗಳ ಕಾಲ ನೆನೆಸಿಡಬೇಕು. ಆದರೆ ಇದನ್ನು ರುಬ್ಬುವುದಕ್ಕೆ ಇನ್ನೇನು ಅರ್ಧಗಂಟೆ ಇರುವಾಗ ನೆನೆಸಿಟ್ಟರೆ ಸಾಕು.

*ನಂತರ ಇಡ್ಲಿ ರವೆಯನ್ನು ಚೆನ್ನಾಗಿ ತೊಳೆದು ಅರ್ಧ ಕಪ್ ಗೂ ಸ್ವಲ್ಪ ಕಡಿಮೆ ನೀರಿನಲ್ಲಿ ಬೇಯಿಸಿ. ನೀರು ಚೆನ್ನಾಗಿ ಇಂಗಿದ ಮೇಲೆ ಇಳಿಸಿ, ಆರಿಸಿ.

* ಈಗ ಮಿಕ್ಸಿ ಜಾರ್ ಗೆ ನೆನೆಸಿಟ್ಟುಕೊಂಡ ಉದ್ದಿನಬೇಳೆ, ಉಪ್ಪು, ಅವಲಕ್ಕಿ, ನೀರು ಹಾಕಿ ರುಬ್ಬಿಕೊಳ್ಳಿ. (ಬಿಸಿಲು ತಾಪಮಾನ ಹೆಚ್ಚಿರುವ ಕಡೆ ರುಬ್ಬಿಕೊಳ್ಳುವಾಗಲೇ ಉಪ್ಪು ಹಾಕಬಾರದು)ರುಬ್ಬಿಕೊಂಡ ಮಿಶ್ರಣ ಹೆಚ್ಚು ಗಟ್ಟಿಯಾಗದಂತೆ, ನೀರು ನೀರಾಗಿ ಇರದಂತೆ ನೋಡಿಕೊಳ್ಳಿ.

*ನಂತರ ಈ ಮಿಶ್ರಣಕ್ಕೆ ಆರಿದ ರವೆಯ ಮಿಶ್ರಣ ಸೇರಿಸಿ, ಒಂದೆರೆಡು ಹನಿಯಷ್ಟು ನೀರು ಚಿಮುಕಿಸಿ ರುಬ್ಬಿಕೊಳ್ಳಿ. (ಹೆಚ್ಚು ರುಬ್ಬಿಕೊಳ್ಳುವುದು ಬೇಡ) ರುಬ್ಬಿದ ಮಿಶ್ರಣವನ್ನು ಒಂದು ಕಡೆ ಇಡಿ.

* ಈಗ ಅಕ್ಕಿಯನ್ನು ನೀರಿನ ಜೊತೆ ರುಬ್ಬಿಕೊಂಡು ಈಗಾಗಲೇ ರುಬ್ಬಿಟ್ಟುಕೊಂಡಿರುವ ಬೇಳೆಯ ಮಿಶ್ರಣದ ಜೊತೆ ಸೇರಿಸಿ.

*6 ಗಂಟೆಗಳ ನಂತರ ಈ ಮಿಶ್ರಣವನ್ನು ಬಿಸಿಯಾಗಿ ಕಾದ, ಎಣ್ಣೆ ಹಚ್ಚಿದ ತವಾದ ಮೇಲೆ ಹುಯ್ಯಿರಿ.ದೋಸೆ ಬೆಂದ ಮೇಲೆ, ತಿರುವಿ ಹಾಕಿ ಮತ್ತೆ ಬೇಯಿಸಿ. ಎರಡು ಕಡೆ ದೋಸೆ ಚೆನ್ನಾಗಿ ಬೆಂದ ನಂತರ ಒಂದು ಭಾಗದ ಮೇಲೆ ಆಲುಗಡ್ಡೆ ಮಸಾಲ ಹಾಕಿ, ಮಡಚಿದರೆ ಬಿಸಿ ಬಿಸಿಯಾದ , ಗರಿ ಗರಿಯಾದ ಮಸಾಲ ದೋಸೆ ಸವಿಯಲು ಸಿದ್ಧ.

ಅಕ್ಕಿ ವಡೆ ಮಾಡುವುದು ಈಗ ಬಹಳ ಸುಲಭ

#balkaninews #food #masaladosa #recipe #dosa #udupidosa

Tags