ಜೀವನ ಶೈಲಿಸಂಬಂಧಗಳು

ಎಲ್ಲಿ ಮರೆಯಾಯಿತು ಅವಿಭಕ್ತ ಕುಟುಂಬ?

ಜೀವನದಲ್ಲಿ ಏನೇ ಕಷ್ಟಸುಖಗಳು ಬಂದರೂ ನಮ್ಮ ಕುಟುಂಬವು ನಮ್ಮೊಂದಿಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬದವರು ಮೊದಲ ಆಸರೆಯಾಗಿರುತ್ತಾರೆ.  ಹೇಳಿ ಕೇಳಿ ನಮ್ಮದು ಅವಿಭಕ್ತ ಕುಟುಂಬ. ದೊಡ್ಡ ತುಂಬು ಸಂಸಾರ. ಅಜ್ಜ,ಅಜ್ಜಿ, ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಮಕ್ಕಳು ಹೀಗೆ 10 – 20 ಮಂದಿ ಇರುವ ದೊಡ್ಡ ಕುಟುಂಬವಾಗಿತ್ತು. ಇನ್ನು ನಾವಂತು ಮಕ್ಕಳು ನಮ್ಮದೇ ಸಾಮ್ರಾಜ್ಯ. ಗೌಜಿ, ಗದ್ದಲವೆಲ್ಲ ಇದ್ದದ್ದೆ. ಆದರೂ ಏನೋಂಥರ ಖುಷಿ. ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುತ್ತಿದ್ದರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಅಲ್ಲಿ ಹಿರಿಯರ ಮಾತೇ ಅಂತಿಮ ನಿರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ. ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ.

ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪೂರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಮಜವೇ ಬೇರೆ.                                                                ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ.  ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ.

ಕುಟುಂಬದಲ್ಲಿ ಬದಲಾವಣೆಗಳಾಗುತ್ತಿರುವುದು ಯಾಕೆಂದು ನಾವು ಗಮನಹರಿಸಬೇಕಾಗಿದೆ. ಅವಿಭಕ್ತ ಕುಟುಂಬದಲ್ಲಿ ವಾಸಿಸಿದರೆ ಹಲವಾರು ರೀತಿಯ ಲಾಭಗಳಿವೆ. ಇನ್ನೊಂದು ಕಡೆಯಲ್ಲಿ ಕೆಲವೊಂದು ಅನಾನುಕೂಲಗಳು ಕೂಡ. ಕೂಡು ಕುಟುಂಬಕ್ಕೆ ಬಂದರೆ ಅಲ್ಲಿ ಹಿರಿಯ ವ್ಯಕ್ತಿಯೊಬ್ಬರು ಮನೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಅವರು ಶಿಸ್ತುಬದ್ಧವಾಗಿ ಕುಟುಂಬವನ್ನು ನಿಯಂತ್ರಿಸುತ್ತಿರುತ್ತಾರೆ. ಇಂತಹ ಕುಟುಂಬಗಳಲ್ಲಿ ಸಾಂಪ್ರದಾಯಬದ್ಧ ವರ್ತನೆ ಪ್ರಚಲಿತದಲ್ಲಿರುತ್ತದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ನಮ್ಮ ಹಿರಿಯರು. ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ‍್ಳುವಿಕೆ ಮತ್ತು ಬಾಂಧವ್ಯ ವಿಭಕ್ತ ಕುಟುಂಬದಲ್ಲಿ ಕಂಡು ಬರುವುದಿಲ್ಲ. ಈಗ ಒಂದು ಮನೆಯಲ್ಲಿ ಗಂಡ-ಹೆಂಡತಿಗೆ  ಎರಡು ಮಕ್ಕಳು ಅಥವಾ ಒಂದೇ ಒಂದು ಮಗು. ಎಷ್ಟೋ ಮಕ್ಕಳಿಗೆ ನಮ್ಮ ಸಂಬಂಧಿಕರು ಯಾರು ಎಂಬುದೇ ಗೊತ್ತಿರುವುದಿಲ್ಲ!

ಒಂದೇ ಮನೆಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲು ಈಗೀಗ ಪುರುಸೊತ್ತು ಇರುವುದಿಲ್ಲ. ಶಿಫ್ಟ್ ವರ್ಕ್, ಕೆಲಸದ ಒತ್ತಡ, ಕೆಲಸದ ವಿಷಯದಲ್ಲಿ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ, ಇರುವ ಒಬ್ಬ ಮಗ ಅಥವಾ ಮಗಳು ಮನೆಯಿಂದ ವಿಧ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಎಲ್ಲೋ ಒಂದು ಕಡೆ ಫ್ಯಾಮಿಲಿ ಸೆಂಟಿಮೆಂಟ್ ಕಡಿಮೆಯಾಗುತ್ತಿದೆ ಅಲ್ಲವೇ? ಇದೇ ಕಾರಣದಿಂದ ಎಷ್ಟೋ ಜನರಿಗೆ ಎಲ್ಲರು ಇದ್ದರೂ ತಾನು ಒಂಟಿ ಎಂದು ಅನಿಸುತ್ತಿರುತ್ತದೆ. ಹಾಗಾಗಿ ಒಂಟಿತನವನ್ನು ಕಳೆಯಲು ಸಾಮಾಜಿಕ ಜಾಲಾತಾಣಗಳಲ್ಲಿ ಸಮಯವನ್ನು ಕಳೆಯುತ್ತಾರೆ. ಕೆಲಸದ ಒತ್ತಡ ಅಥವಾ ಮತ್ಯಾವುದೋ ಒಂದು ಕಾರಣದಿಂದ ಕುಟುಂಬಸ್ಥರೇ ನಮಗೆ ಅಪರಿಚಿತರಾಗಬಹುದು.

ಮೊದಲೆಲ್ಲ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿತ್ತು. ಮಕ್ಕಳು ಓದಿ ಕುಣಿದು ನಲಿದು ತಮ್ಮ ಹಿರಿಯರ ಅನ್ಯೋನ್ಯತೆಯನ್ನು ನೋಡಿ ತಾವೂ ಒಟ್ಟಿಗೆ ಇರಬೇಕೆಂಬ ಅಂಶವನ್ನು ಕಲಿಯುತಿದ್ದರು. ಆದರೆ ಈಗಿನ ಕೆಲಸದೊತ್ತಡವೋ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೋ ತಿಳಿಯದು, 2 – 3 ವರ್ಷದಲ್ಲೇ ಮಕ್ಕಳನ್ನು ಸಾವಿರಾರುಪಾಯಿಗಳನ್ನು ಕೊಟ್ಟು ಪ್ಲೇ ಹೋಮ್ ಗೆ ಕಳುಹಿಸಿ ಬಿಡುತ್ತಾರೆ. ಏನನ್ನೂ ಅರಿಯದ ಈ ಪುಟ್ಟ ವಯಸ್ಸಿನಲ್ಲಿ ಮಗು ತಂದೆ ತಾಯಿಯ ಪ್ರೀತಿಯನ್ನು ಕಳೆದುಕೊಂಡು ಬಿಡುತ್ತದೆ. ಅವಿಭಕ್ತ ಕುಟುಂಬದಲ್ಲಾದರೆ ಮಕ್ಕಳನ್ನು ಕಣ‍್ಣಲ್ಲಿ ಕಣ‍್ಣಿಟ್ಟು ನೋಡಿಕೊಳ‍್ಳಲು ಒಬ್ಬರಲ್ಲದಿದ್ದರೆ ಮತ್ತೊಬ್ಬರಿರುತ್ತಿದ್ದರು. ಮನೆಯಲ್ಲೇ ಆಟ ಓದು ಪೂರ ನಡೆಯುತಿತ್ತು. ಆಗೆಲ್ಲ ಪ್ಲೇ ಹೋಮ್ ಬೇಕಲ್ಲವೇ ?

ಇನ್ನು ಕೆಲ ಮನೆಗಳಲ್ಲಿಯಂತೂ ಅಪ್ಪ-ಅಮ್ಮ, ಮಕ್ಕಳು ಜೊತೆಯಲ್ಲಿ ಕೂತು ಊಟ ಮಾಡಿ ತುಂಬಾ ಕಾಲವಾಗಿರುತ್ತದೆ! ಈ ರೀತಿ ಇದ್ದರೆ ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಬೆಳೆದು ಬಿಡುತ್ತದೆ. ಹಾಗೇ ಆಗಲು ಬಿಡಬಾರದು. ಕೆಲಸದ ಒತ್ತಡ ಬದಿಗಿಟ್ಟು ವಾರದಲ್ಲಿ ಕನಿಷ್ಠ 2-3 ಬಾರಿಯಾದರೂ ಮನೆಯಲ್ಲಿ ಎಲ್ಲರು ಕುಳಿತು ಊಟ ಮಾಡುವುದು, ಹಳೆಯ ನೆನೆದು ಖುಷಿ ಪಡುವುದು ಒಬ್ಬರ ಕಷ್ಟ ಸುಖವನ್ನು ಹಂಚಿಕೊಳ‍್ಳುವುದರಿಂದ ಸಂಬಂಧ ಗಟ್ಟಿಯಾಗಿರುತ್ತದೆ.

ಚಿಕ್ಕ ಮಕ್ಕಳಿದ್ದರೆ ಅವರ ಜೊತೆ ಆಟವಾಡಿ, ಇದರಿಂದ ಟೆನ್ಷನ್ ಕಡಿಮೆಯಾಗುತ್ತದೆ, ಅಲ್ಲದೆ ನಿಮ್ಮ ಮತ್ತು ಮಕ್ಕಳ ನಡುವೆ ಬಾಂಧವ್ಯ ಹೆಚ್ಚಾಗುವುದು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತಾಡಿ, ಅವರೊಂದಿಗೆ ಸಮಯ ಕಳೆಯುವಾಗ ನಿಮ್ಮ ಕೆಲಸದೊತ್ತಡವನ್ನು ಮಧ್ಯೆ ತರಬೇಡಿ. ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ಫ್ಯಾಮಿಲಿ ಔಟಿಂಗ್ ಹೋದರೆ ಕುಟುಂಬದವರ ಜೊತೆ ಅನುಬಂಧ ಹೆಚ್ಚುತ್ತದೆ. ಈಗೇನಿದ್ದರೂ ನಾನು ನನ್ನ ಕುಟುಂಬ ಎಂಬ ಭಾವನೆಯಲ್ಲಿ ಜೀವಿಸುವವರೇ ಜಾಸ್ತಿ . ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವಾರ್ಥವೋ ??
ಸುಹಾನಿ ಬಡೆಕ್ಕಿಲ.

 

 

 

 

 

Tags

Related Articles

Leave a Reply

Your email address will not be published. Required fields are marked *