ಜೀವನ ಶೈಲಿಫ್ಯಾಷನ್ಸೌಂದರ್ಯ

ಘಲ್ ಘಲ್ ಎನುತಾವ ಗೆಜ್ಜೆ

ಬೆಂಗಳೂರು, ಮಾ.26:

ಹಿಂದಿನ ಕಾಲದಲ್ಲಿ ಗೆಜ್ಜೆ ಹಾಕುವುದು ಸಂಪ್ರದಾಯ. ಹಣೆಗೆ ಕುಂಕುಮ, ಕಿವಿಗೆ ಓಲೆ, ಕತ್ತಿಗೆ ಸರ, ಕೈಗಳಿಗೆ ಬಳೆ ಹೇಗೆ ಭೂಷಣವೋ, ಹಾಗೆ ಕಾಲಿಗೆ ಮುದ್ದಾದ ಗೆಜ್ಜೆಗಳು. ಘಲ್ ಘಲ್ ಎನ್ನುತ್ತಾ ಶಬ್ಧ ಮಾಡುತ್ತಾ ಹೆಣ್ ಮಗಳು ಮನೆಯಿಡೀ ಓಡಾಡುತ್ತಿದ್ದರೆ ಅದನ್ನು ನೋಡುವುದೇ ಸಂಭ್ರಮ. ಗಿಜಿಗಿಜಿ ಎಂದು ಕೇಳುವ ಶಬ್ಧವೇ ತುಂಬಾ ಸೊಬಗು. ಅಲ್ಲದೆ ಗೆಜ್ಜೆಯ ಮೇಲೆ ಹೆಣ್ ಮಕ್ಕಳಿಗೆ ಹೇಳಲಾರದ ಭಾವನಾತ್ಮಕ ಸಂಬಂಧ.

ಹೇಳಿ ಕೇಳಿ ಇದು ಫ್ಯಾಷನ್ ಯುಗ. ಎಲ್ಲಾ ವಿಷಯದಲ್ಲಿ ಫ್ಯಾಷನ್ ಲಗ್ಗೆಯಿಟ್ಟಿದೆ. ಗೆಜ್ಜೆಯಲ್ಲೂ ಅಷ್ಟೇ. ತರತರದ ಗೆಜ್ಜೆಯೇನೋ ಇದೆ, ಅದೆ ಮರೆಯಾಗಿರುವುದು ಘಲ್ ಘಲ್ ಎಂಬ ನಾದ. ಸಾವಿರಾರು ಮೌಲ್ಯದ ಬೆಳ್ಳಿ ಗೆಜ್ಜೆಯ ಸ್ಥಾನವನ್ನು ಇದೀಗ ಫ್ಯಾನ್ಸಿ ಗೆಜ್ಜೆಗಳು ಸಂಪೂರ್ಣ ಆವರಿಸಿದೆ. ಗೆಜ್ಜೆ ಧರಿಸುವುದು ಈಗ ಬರೀ ಸಾಂಪ್ರದಾಯಿಕವಾಗಿಲ್ಲ. ಬದಲಿಗೆ ಗೆಜ್ಜೆ ಧರಿಸುವುದು ಫ್ಯಾಷನ್ ಆಗಿ ಮಾರ್ಪಾಟಾಗಿದೆ. ಅದರಲ್ಲೂ ಒಂದು ಕಾಲಿಗೆ ಗೆಜ್ಜೆ ಹಾಕುವುದು ಹೊಸ ಕಾಲದ ಟ್ರೆಂಡ್. ಇತ್ತೀಚಿನ ದಿನಗಳಲ್ಲಿ ಶಬ್ಧ ಮಾಡುವ ಗೆಜ್ಜೆ ನೋಡಬೇಕೆಂದರೆ ಯಾವುದಾದರೂ ಮಳಿಗೆಗಳಿಗೆ ಹೋಗಬೇಕಷ್ಟೇ ಹೊರತು ಹೊರಗಡೆ ಕಾಣ ಸಿಗುವುದು ಅಪರೂಪ. ಬೆಳ್ಳಿ ಗೆಜ್ಜೆ ಓಲ್ಡ್ ಫ್ಯಾಷನ್ ಪಾಲಿಗೆ ಸೇರಿಬಿಟ್ಡಿದೆ. ಈಗ ಏನಿದ್ದರೂ ಫ್ಯಾನ್ಸಿ ಗೆಜ್ಜೆಗಳ ಜಾಯಮಾನ. ಕಡಿಮೆ ದರದಲ್ಲಿ ಸಿಗುವ ಫ್ಯಾನ್ಸಿ ಗೆಜ್ಜೆಗಳು ಭಾರವಿರುವುದಿಲ್ಲ. ಜೊತೆಗೆ ಮನಮೋಹಕವಾದ ಬಣ್ಣಬಣ್ಣದ ಮಣಿಗಳಿಂದ ತಯಾರಾಗಿರುವ ಈ ಗೆಜ್ಜೆಗಳು ಲೇಟೆಸ್ಟ್ ಡಿಸೈನ್ ಗಳಲ್ಲಿ ದೊರೆಯುತ್ತದೆ. ಅಲ್ಲದೆ ತಾವು ತೊಡುವ ಡ್ರೆಸ್ ಗೆ ಸರಿಹೊಂದುವಂಥ ಗೆಜ್ಜೆಗಳು ಕೂಡ ದೊರೆಯುವ ಕಾಲ.

ಬೆಳ್ಳಿ ಗೆಜ್ಜೆಗಳಲ್ಲಿ ಬೇಕಾದ ಡಿಸೈನ್ ಗಳಿರುವುದಿಲ್ಲ. ಆದರೆ ಫ್ಯಾನ್ಸಿ ಗೆಜ್ಜೆಗಳ ಲೋಕದಲ್ಲಿ ಹಾಗಲ್ಲ. ಬಣ್ಣಬಣ್ಣದ ಮುತ್ತುಗಳು, ಕಣ್ಮನ ಸೆಳೆಯುವ ಹವಳದಿಂದ ಮಾಡಿದ ಗೆಜ್ಜೆಗಳು ಯುವತಿಯರ ಮನ ಸೆಳೆಯುತ್ತಿದೆ. ಕಾಣಲು ಸುಂದರವಾದ, ತೀರ ಹಗುರವಾದ ಈ ಗೆಜ್ಜೆಗಳಲ್ಲಿ ನಾನಾ ವಿನ್ಯಾಸಗಳಿವೆ. ಕಣ್ಮನ ಸೆಳೆಯುವ ಕುಂದನ್ ಸ್ಟೋನ್ ಗಳಿಂದ ತಯಾರಿಸಾದ ಕಾಲ್ಗೆಜ್ಜೆಗಳು ಇದೀಗ ಮಾರುಕಟ್ಟೆಯನ್ನು ಆಳುತ್ತಿವೆ. ಮುದ್ದಾದ ಕಾಲುಗಳಿಗೆ ರಿಚ್ ಲುಕ್ ನೀಡುವ ಈ ಗೆಜ್ಜೆಗಳು ಒಂದೆಡೆಯಾದರೆ, ಕೇವಲ ಮುತ್ತುಗಳನ್ನು ಪೋಣಿಸಿ ತಯಾರು ಮಾಡಿದ ಗೆಜ್ಜೆ ಇನ್ನೊಂಡೆದೆ. ಕಡಿಮೆ ದರದಲ್ಲಿ, ಮನಸ್ಸಿಗೆ ಮುದ ನೀಡುವಂತಹ ಡಿಸೈನ್ ಗಳಲ್ಲಿ ದೊರೆಯುತ್ತದೆ.

ಮುಖ್ಯವಾದ ವಿಷಯವೆಂದರೆ ಬಂಗಾರ ಅಥವಾ ಬೆಳ್ಳಿಯ ಕಾಲು ಗೆಜ್ಜೆಗಳನ್ನು ನಾವು ಸ್ವತಃ ತಯಾರಿಸುವುದು ಸಾಧ್ಯವಿಲ್ಲ. ಆದರೆ ಫ್ಯಾನ್ಸಿ ಗೆಜ್ಜೆಗಳಲ್ಲಿ ಆ ಸಾಧ್ಯತೆ ಹೆಚ್ಚು. ಹೇಗಂತೀರಾ? ಮೊದಲು ಗೆಜ್ಜೆ ತಯಾರು ಮಾಡಲು ಬೇಕಾದಂತಹ ತರತರದ ವಿನ್ಯಾಸದ ಮಣಿಗಳನ್ನು ಸೇರಿಸಿ. ನಂತರ ಒಂದು ದಾರದಲ್ಲಿ ಅದನ್ನು ಚೊಕ್ಕವಾಗಿ ಸುರಿದರಾಯಿತು. ಬೇಕಾದ ಕಲರ್ ಗಳನ್ನು ಹಾಕಿ ಪೋಣಿಸಿದರೆ ನಿಮ್ಮ ಇಷ್ಟದ ಗೆಜ್ಜೆ ರೆಡಿ. ಅದು ಧರಿಸಿ ಬೇಜಾರಾದಾಗ ಮತ್ತೊಂದು. ಹೀಗೆ ಮನಮೋಹಕ ಗೆಜ್ಜೆಗಳನ್ನು ಧರಿಸಿ ಕಾಲುಗಳ ಅಂದ ಹೆಚ್ಚಿಸಬಹುದು.

ದುಬಾರಿಯಾದ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ನೋಡಿ ಬೇಸರಪಟ್ಟುಕೊಳ್ಳುವ ಕಾಲ ಇದಲ್ಲ. ಬದಲಿಗೆ ಬೇಕಾದ ಅಂಗಡಿಗೆ ಹೋಗಿ ಬೇಕಾದ ರೀತಿಯ ಗೆಜ್ಜೆ ತೆಗೆದುಕೊಂಡ ಹೋಗಿ ಸಂಭ್ರಮ ಪಡುವ ಸಮಯ. ಹಾಗಾದರೆ ಇನ್ನೇನು ಯೋಚಿಸುತ್ತಿದ್ದೀರಾ? ಹಗುರವಾದ, ಕಾಣಲು ಸುಂದರವಾದ ಪ್ಯಾನ್ಸಿ ಗೆಜ್ಜೆಗಳನ್ನು ಹಾಕಿ ನೀವು ಕೂಡ ಖುಷಿಪಡಿ.

ಅನಿತಾ ಬನಾರಿ

ಹಾಲಿನ ಸ್ನಾನದಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತೇ?

#kalgejje #lifestyle #kalgejjedesigns #kalgejjeimages

Tags