ಜೀವನ ಶೈಲಿಫ್ಯಾಷನ್ಸೌಂದರ್ಯ

ಹೆಣ್ಮಕ್ಕಳ ಮನ ಕದ್ದ ಆ್ಯಂಟಿಕ್ ಜ್ಯುವೆಲ್ಲರಿ

ಬೆಂಗಳೂರು, ಮಾ.15:

ಹಳೆಯ ವಸ್ತುಗಳೇ ಹಾಗೆ… ಆಗ ಕಣ್ಣಿಗೆ ಕೇವಲ ಸಾಮಾನ್ಯ ಎಂದು ಕಂಡವು ಈಗ ಅಸಾಮಾನ್ಯ ಎಂದು ತೋರುವ ಕಾಲ. ಅಂದು ಅಯ್ಯೋ ಎಂದು ಮೂಗು ಮುರಿದವರು ಇಂದು ವ್ಹಾವ್ ಎಂದು ಉದ್ಘರಿಸುವಂತಾಗಿದೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿ ಬಿಟ್ಟಿದೆ ಆ್ಯಂಟಿಕ್ ಜ್ಯುವೆಲ್ಲರಿ. ವಿಶಿಷ್ಟ ಮನಮೋಹಕ ವಿನ್ಯಾಸಗಳಿಂದ ನಾರಿಯರ ಮನ ಕದ್ದು ಬಿಟ್ಟಿದೆ. ಆಭರಣದ ವಿನ್ಯಾಸ ಹಳತಾದರೂ ಅದನ್ನು ಧರಿಸಿ ಮೆರೆದಾಡುವವರು ಮಾತ್ರ ಮಾಡರ್ನ್ ಬೆಡಗಿಯರು ಎಂದರೆ ತಪ್ಪಾಗಲಾರದು. ಎತ್ತಣ ಮಾಮರ ಎತ್ತಣ ಕೋಗಿಲೆ ಏನಿದೇನಿ ಸಂಬಂಧ ಎಂಬುದು ಇದಕ್ಕೆ ಇರಬಹುದೇನೋ?

ಸುಮಾರು 100 ವರುಷಗಳ ಇತಿಹಾಸ ಇರುವ ಆ್ಯಂಟಿಕ್ ಜ್ಯುವೆಲ್ಲರಿ ಇಂದು ಮಾರುಕಟ್ಟೆಯಲ್ಲಿ ವೈಭವದಿಂದ ರಾರಾಜಿಸುತ್ತಿದೆ. ಹೆಣ್ಮಕ್ಕಳ ಮೈಮೇಲೆ ಮೆರೆದಾಡುತ್ತಿದೆ. ಮಾಡರ್ನ್ ಕಾಲದ ಲಲನೆಯರು ಕೂಡಾ ಆ್ಯಂಟಿಕ್ ಜ್ಯುವೆಲ್ಲರಿಯನ್ನು ಧರಿಸಿ ಸಂಭ್ರಮ ಪಡುತ್ತಿದ್ದಾರೆ. ಆಕೆ ಎಷ್ಟೇ ಮಾರ್ಡನ್ ಆಗಿದ್ದರೂ ಸರಿ, ಆ್ಯಂಟಿಕ್ ಜ್ಯುವೆಲ್ಲರಿ ಮೋಹದಿಂದ ಅಷ್ಟು ಬೇಗ ಹೊರ ಬರಲು ಸಾಧ್ಯವಾಗದು. ಅದರ ವಿನ್ಯಾಸವೇ ಅಂಥದ್ದು. ನೋಡಿದ ಕೂಡಲೇ ತೆಗೆದು ಬಿಡೋಣ ಎಂಬಷ್ಟು ಸುಂದರವಾಗಿವೆ.ಆ್ಯಂಟಿಕ್ ಜ್ಯುವೆಲ್ಲರಿ ಎಂದು ಕರೆಸಿಕೊಳ್ಳಲು ನೂರಾರು ವರುಷದ ಹಿಂದಿನ ಆಭರಣಗಳೇ ಆಗಬೇಕೆಂದೇನಿಲ್ಲ. ಬದಲಿಗೆ ಬರೀ 20 ವರುಷದಷ್ಟು ಹಳೆಯದಾದರೂ ಸಾಕು, ಅದು ಆ್ಯಂಟಿಕ್ ಜ್ಯುವೆಲ್ಲರಿ ಪಟ್ಟಿಗೆ ಸೇರಿ ಬಿಡುತ್ತದೆ. ಆ್ಯಂಟಿಕ್ ಜ್ಯುವೆಲ್ಲರಿ ಎಂದರೆ ಹಿಂದಿನ ಕಾಲದ ಒಡವೆಗಳು ಎಂಬುದು ಹಲವರ ಆಲೋಚನೆ. ಅಂದರೆ ಅಜ್ಜಿ, ಮುತ್ತಜ್ಜಿಯರ ಕಾಲದ ಆಭರಣವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದು ಧರಿಸಿದರೆ ಅದು ಆ್ಯಂಟಿಕ್ ಜ್ಯುವೆಲ್ಲರಿ ಪಟ್ಟಿಗೆ ಸೇರುವುದಿಲ್ಲ. ನಿಜವಾದ ಸಂಗತಿಯೆಂದರೆ ಹಳೆಯ ಮಾದರಿಯ ಆಭರಣದ ವಿನ್ಯಾಸವನ್ನು ಮಾಡಿಕೊಡುವುದಕ್ಕೆ ಆ್ಯಂಟಿಕ್ ಎನ್ನುತ್ತಾರೆ.

ಆ್ಯಂಟಿಕ್ ಜ್ಯುವೆಲ್ಲರಿಗೆ ತುಂಬಾ ಹಳೆಯದಾದ ಇತಿಹಾಸವಿದೆ. 1920 – 1980ರ ಸಮಯದಲ್ಲಿ ಆ್ಯಂಟಿಕ್ ಜ್ಯುವೆಲ್ಲರಿ ಟ್ರೆಂಡ್ ಗಳು ಆರಂಭವಾದವು ಎಂದು ಹೇಳಲಾಗುತ್ತವೆ. ಆ ಕಾಲದಲ್ಲಿ ಫ್ಯಾಷನೇಬಲ್ ಜ್ಯುವೆಲ್ಲರಿಗಳ ಬಳಕೆಯೂ ಹೆಚ್ಚಿತ್ತು. ತನ್ನದೇ ಆದ ಗ್ರ್ಯಾಂಡ್ ಲುಕ್ ನಿಂದ ನೋಡುಗರ ಮನ ಸೆಳೆಯುವ ಆ್ಯಂಟಿಕ್ ಜ್ಯುವೆಲ್ಲರಿಯ ಅಂದಕ್ಕೆ ಅದುವೇ ಸಾಟಿ. ಜೊತೆಗೆ ಅದಕ್ಕೆ ಮತ್ತಷ್ಟು ಮೆರುಗು ನೀಡಲು ಕ್ವಾಲಿಟಿ ಡೈಮಂಡ್ಸ್, ಪಚ್ಚೆ ಮತ್ತು ರೂಬಿಯನ್ನು ಉಪಯೋಗಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಬರೀ ಶ್ರೀಮಂತರು ತಮ್ಮ ಮನೆಗಳಲ್ಲಿ ಅಕ್ಕಸಾಲಿಗರನ್ನು ಕೆಲಸಕ್ಕೆ ಇರಿಸಿಕೊಳ್ಳುತ್ತಿದ್ದರು. ನಂತರ ಅವರ ಕೈಚಳಕದಿಂದ ಮೂಡಿ ಬಂದ ಸುಂದರವಾದ ಆಭರಣಗಳನ್ನು ಜೋಪಾನವಾಗಿ ಇಟ್ಟುಕೊಂಡು ಕಾಲಕ್ರಮೇಣವಾಗಿ ಮುಂದಿನ ತಲೆಮಾರಿಗೆ ನೀಡುತ್ತಿದ್ದರು. ಹೀಗೆ ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದ ಆಭರಣಗಳೇ ಆ್ಯಂಟಿಕ್ ಜ್ಯುವೆಲ್ಲರಿ ಎಂಬುದು ಇತಿಹಾಸದ ಪುಟದಲ್ಲಿ ಕಾಣುವ ವ್ಯಾಖ್ಯಾನ.ದಕ್ಷಿಣ ಭಾರತದಲ್ಲಿ ದೇವರ ಚಿತ್ರ ಇರುವ ಪೆಂಡೆಂಟ್, ನೆಕ್ಲೇಸ್, ಬಳೆಗಳು ಆ್ಯಂಟಿಕ್ ಜ್ಯುವೆಲ್ಲರಿಯ ಪಾಲಿಗೆ ಸೇರಿವೆ. ಇನ್ನು ಉತ್ತರ ಭಾರತದಲ್ಲಿ ಕುಂದನ್, ಮೀನಾಕರಿ ಸ್ಟೈಲ್ ನ ಜ್ಯುವೆಲ್ಲರಿಗಳಿಗೆ ಅದರದೇ ಆದ ಸ್ಥಾನವಿದೆ. ಮೊಘಲ್ ಆರ್ಟ್ ನಿಂದ ಸ್ಫೂರ್ತಿ ಪಡೆದ ಉತ್ತರ ಭಾರತದ ಆಭರಣಗಳಾದ ಮೀನಾಕರಿ, ಕುಂದನ್ ನಲ್ಲಿ ದುಬಾರಿ ಬೆಲೆಯ ಸ್ಟೋನ್ ಗಳಾದ ಪಚ್ಚೆ, ಹವಳ, ನೀಲಮಣಿ, ರೂಬಿಗಳನ್ನು ಬಳಸಲಾಗುತ್ತದೆ. ಇದರಲ್ಲಿರುವ ರತ್ನದ ಹೊಳಪು ಆಭರಣಕ್ಕೆ ಮೆರುಗು ತರುವುದಲ್ಲದೇ ಅಂದವನ್ನು ಹೆಚ್ಚಿಸುತ್ತದೆ. ಆ್ಯಂಟಿಕ್ ಜ್ಯುವೆಲ್ಲರಿ ಆಭರಣಗಳು 22 ಕ್ಯಾರೆಟ್ ಗೋಲ್ಡ್ ಲೇಪಿತವಾಗಿದ್ದು ಇದರಲ್ಲಿ ಸಾಂಪ್ರದಾಯಿಕ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚು. ಆಭರಣಕಾರರ ಸೂಚನೆ ಮೇರೆಗೆ ತಮ್ಮ ಬಳಿ ಇರುವ ಜ್ಯುವೆಲ್ಲರಿಗಳನ್ನು ಆ್ಯಂಟಿಕ್ ಜ್ಯುವೆಲ್ಲರಿ ರೂಪಾಂತರಿಸಬಹುದು. ಇಲ್ಲವಾದಲ್ಲಿ ಇನ್ನು ಮುಂದೆ ಆಭರಣ ಮಾಡಿಸುವುದಾದಲ್ಲಿ ಮನಕ್ಕೊಪ್ಪುವ ವಿನ್ಯಾಸದ ಆ್ಯಂಟಿಕ್ ಜ್ಯುವೆಲ್ಲರಿ ಮಾಡಿಸಿ, ಮೆರೆದಾಡಿದರೆ ಆಯಿತು.

–  ಅನಿತಾ ಬನಾರಿ

ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಅಸಲಿ ಕಾರಣವೇನು ಗೊತ್ತೆ…?

#antiquejewellery #balkaninews #lifestyle #bridal #antiquejewellerydesign # #antiquejewellerycollection # #antiquejewelleryvarietydesigns

Tags