ಜೀವನ ಶೈಲಿಸೌಂದರ್ಯ

ಮರೆಯಾಗಿಹಳು ನೀಲವೇಣಿ ..

ನೀಳ ಜಡೆ ಸುಂದರಿ ಎಲ್ಲಿ ಮಾಯವಾದಳು?

ಎಲ್ಲಿಯಾದರೂ ತಾನು ತಲೆ ಬಾಚುವಾಗ ಒಂದೆರಡು ಕೂದಲು ಉದುರಿದ್ದನ್ನು ಕಂಡರೆ ಆಕಾಶವೇ ಅಮ್ಮನ ತಲೆ ಮೇಲೆ ಬಿದ್ದಂತೆ.

ಮಗಳು ಶಾಲೆಗೆ ಹೊರಡುವ ಸಮಯ. ಮನೆಕೆಲಸ, ಮಕ್ಕಳಿಗೆ ಕಾಪಿ, ತಿಂಡಿ, ಮಧ್ಯಾಹ್ನಕ್ಕೆ ಬುತ್ತಿ ಹೀಗೆ ಅಮ್ಮ ಬ್ಯುಸಿಯಾಗಿರುತ್ತಾಳೆ. ಅವಳಿಗೆ ಅದೆಲ್ಲಾ ಮಹಾ ಕೆಲಸ ಎಂದೆನಿಸುವುದಿಲ್ಲ. ಅದೆಲ್ಲಾ ನಿರಂತರವಾಗಿ ಅದರ ಪಾಡಿಗೆ ಸಾಗುತ್ತದೆ. ಆದರೆ ಅದಕ್ಕಿಂತ ಮುಖ್ಯ ಕೆಲಸ ಆಕೆಗೆ ತನ್ನ ಮುದ್ದು ರಾಜಕುಮಾರಿಯನ್ನು ಶಾಲೆಗೆ ಹೊರಡಿಸುವ ಕೆಲಸ. ಮಗಳು ಅಮ್ಮಾ ಕೆಲಸ ಮುಗೀತಾ, ಇಲ್ಲಿ ಬರ್ತೀಯಾ ಎಂದು ಕೂಗಿದಾಗ ಕೈಯ್ಯಲ್ಲಿ ಬಾಚಣಿಗೆ ಹಿಡಿದು ಓಡಿ ಬರುವ ಅಮ್ಮಾ ತನ್ನ ಮಗಳ ತಲೆಯನ್ನು ಒಪ್ಪವಾಗಿ ಬಾಚಿ, ಸುಂದರಚಾದ ಜಡೆ ಹೆಣೆದು, ಕೆಳಗೊಂದು ಮುದ್ದಾದ ರಬ್ಬರ್ ಬ್ಯಾಂಡ್ ಹಾಕಿ, ತನ್ನ ತೋಟದಲ್ಲೇ ಬೆಳೆದ ಹೂವೊಂದನ್ನು ಅವಳ ಮುಡುಗೇರಿಸುತ್ತಾಳೆ. ಥ್ಯಾಂಕ್ಯೂ ಅಮ್ಮಾ ಎಂದು ಅವಳು ಹೇಳಿದಾಗ ಅಮ್ಮನಿಗೆ ಸ್ವರ್ಗಕ್ಕೆ ಮೂರೇ ಗೇಣು.

ಬೆಳೆಯುವ ಮಕ್ಕಳಿಗೆ ಅಮ್ಮಾ ಕಲಿಸುವ ಪಾಠಗಳಲ್ಲಿ ಕೂದಲಿನ ಆರೈಕೆಯು ಸೇರಿದೆ. ಅದನ್ನು ಬೆಳೆಸುವ ರೀತಿ, ಅದನ್ನು ಸದಾ ಕಾಲ ಆರೈಕೆ ಮಾಡುವ ವಿಧಾನಗಳು ಜೊತೆಗೆ ತಲೆಗೆ ಸ್ನಾನ ಮಾಡುವುದು, ಒದ್ದೆ ಕೂದಲನ್ನು ಒಣಗಿಸುವುದು, ನಯವಾಗಿ ಬಾಚುವುದು ಹೀಗೆ ಮಗಳಿಗೆ ಹಂತಹಂತವಾಗಿ ತಿಳಿ ಹೇಳುತ್ತಿದ್ದಳು ಅಮ್ಮಾ. ಎಲ್ಲಿಯಾದರೂ ತಾನು ತಲೆ ಬಾಚುವಾಗ ಒಂದೆರಡು ಕೂದಲು ಉದುರಿದ್ದನ್ನು ಕಂಡರೆ ಆಕಾಶವೇ ಅಮ್ಮನ ತಲೆ ಮೇಲೆ ಬಿದ್ದಂತೆ. ಅದಕ್ಕೆ ಪರಿಹಾರವೇನು ಎಂದು ಸದಾ ಕಾಲ ಯೋಚಿಸುತ್ತಿರುತ್ತಾಳೆ. ಅದು ಕಡಿಮೆಯಾದ ನಂತರವೇ ಅವಳಿಗೆ ಸಮಾಧಾನ. ಉದ್ದ ಜಡೆಯನ್ನೇ ತಮ್ಮ ಸೌಂದರ್ಯದ ಬಂಡವಾಳ ವಾಗಿ ಮೆರೆದಾಡುತ್ತಿದ್ದ ಹುಡುಗಿಯರಿಗೇನು ಕಮ್ಮಿ ಇಲ್ಲ. ಆದರೆ ಅದೆಲ್ಲಾ ಆ ಕಾಲಕ್ಕೆ ಮಾತ್ರ ಸೀಮಿತ.

ಇದು ಈಗ ಫ್ಯಾಷನ್ ಲೋಕ. ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಬರುತ್ತಿದೆ. ಉದ್ದ ಜಡೆಯಲ್ಲೂ ಕೂಡ. ಉದ್ದ ಜಡೆ ಏನಿದ್ದರೂ ಈಗ ಓಲ್ಡ್ ಫ್ಯಾಷನ್ ಗುಂಪಿಗೆ ಸೇರಿ ಬಿಟ್ಟಿದೆ. ಈಗ ಏನಿದ್ದರೂ ಪೋನಿ ಸ್ಟೈಲ್ ಕಾರುಬಾರು. ಅಲ್ಲದೆ ಬಾಬ್ ಕಟ್, ಬ್ಲಂಟ್ ಕಟ್, ರಸ್ನಾ ಕಟ್, ವೆಜ್ ಕಟ್, ಸ್ಟೆಪ್ ಕಟ್, ಲೆಸರ್ ಕಟ್, ಫೆದರ್ ಕಟ್ ಗಳದ್ದೇ ಕಾರುಬಾರು. ಈಗೆಲ್ಲಾ ಹೆಚ್ಚಿನ ಯುವತಿಯರು ನಾನಾ ರೀತಿಯ ಕಟ್ ಗಳ ಮೊರೆಹೋಗುತ್ತಿದ್ದಾರೆ. ಅದಕ್ಕೆ ಕಾರಣ ಅನಿವಾರ್ಯತೆ. ಈಗೆಲ್ಲಾ ಮಹಿಳೆಯರು ಮೊದಲಿನಂತೆ ಬರೀ ನಾಲ್ಕು ಗೋಡೆಯ ಒಳಗೆ ಕುಳಿತು ಕೆಲಸ ಮಾಡುತ್ತಿಲ್ಲ. ಬದಲಿಗೆ ಅವಳು ಈಗ ಪುರುಷರಂತೆ ವ್ಯವಹಾರಸ್ಥಳು. ಬೇಗ ಬೇಗ ಮನೆಗೆಲಸ ಮುಗಿಸಿ ಮನೆಯಿಂದ ಹೊರಡಬೇಕಾದ ಸ್ಥಿತಿ. ಆ ಸಮಯದಲ್ಲಿ ಕನ್ನಡಿ ಮುಂದೆ ಕುಳಿತು ತಲೆ ಬಾಚಿಕೊಳ್ಳುವಷ್ಟು ಪುರುಸೋತ್ತಿಲ್ಲ. ಸಣ್ಣ ಜಡೆಯಾದರೆ ಹೇಗೋ ಬಾಚಿದರೆ ನಡೆಯುತ್ತದೆ. ನೀಳ ಜಡೆಯಾದರೆ ಅದರ ಆರೈಕೆ ಕಷ್ಟ. ಹಾಗಾಗಿ ಶಾರ್ಟ್ ಆಗಿರಲಿ ಎಂದು ಬಯಸುವವರೇ ಹೆಚ್ಚು.

ಬದಲಾಗುವ ಕಾಲಕ್ಕೆ ತಕ್ಕಂತೆ ನಾವು ಕೂಡ ಬದಲಾಗುತ್ತಿದ್ದೇವೆ ಎಂಬುದು ಮಾತ್ರ ಸತ್ಯ.

 

Tags