ಜೀವನ ಶೈಲಿಫ್ಯಾಷನ್ಸೌಂದರ್ಯ

ಮಲೆಯಾಳಿ ಹುಡುಗಿ ಸೀರೆ ಚೆಂದ…

ಬೆಂಗಳೂರು, ಮಾ.16:

ಫ್ಯಾಷನ್ ಲೋಕದಲ್ಲಿ ಬದಲಾವಣೆ ಸಹಜ. ಇಂದು ಇದ್ದ ಫ್ಯಾಷನ್ ನಾಳೆ ಮಾಯ. ಯಾವಾಗ ಯಾವ ತರಹದ ಬದಲಾವಣೆ ಆಗುತ್ತದೆ ಎಂದು ಊಹಿಸಲು ಅಸಾಧ್ಯ. ಆದರೆ ಫ್ಯಾಷನ್ ಎಂಬುದು ಸೀರೆಗೆ ಸೀಮಿತವಾಗಿಲ್ಲ. ಯಾಕೆಂದರೆ ಸೀರೆ ಎಂದೂ ಔಟ್​ ಡೇಟೆಡ್ ಆಗುವುದಿಲ್ಲ. ಆಗಲಿಕ್ಕೂ ಇಲ್ಲ. ನೀರೆಯರಿಗೆ ಸರಿಹೊಂದುವ ಸೀರೆಯಷ್ಟು ಗ್ಲಾಮರಸ್ ಉಡುಗೆ ಇನ್ನೊಂದಿಲ್ಲ ಎಂದರೆ ತಪ್ಪಾಗಲಾರದು.

ಹೆಣ್ಮಕ್ಕಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಸೀರೆಯಲ್ಲಿ ಹತ್ತಾರು ಬಗೆಯಿದೆ. ರೇಷ್ಮೆ ಸೀರೆ, ಜರಿ ಸೀರೆ, ಸಿಲ್ಕ್ ಸೀರೆ, ಶಿಫಾನ್ ಸೀರೆ, ಜೂಟ್ ಸೀರೆ, ಕಾಟನ್ ಸೀರೆ, ಪಾಲಿಸ್ಟರ್ ಸೀರೆ ಒಂದೇ ಎರಡೇ!! ಗ್ರಾಂಡ್ ಲುಕ್ ನೀಡುವ ರೇಷ್ಮೆ ಸೀರೆ, ಮನಸೂರೆಗೊಳ್ಳುವ ಎಂಬ್ರಾಯಿಡರಿ ಇರುವ ಸೀರೆ ಕೆಲವರು ಇಷ್ಟಪಟ್ಟರೆ ಇನ್ನು ಕೆಲವರಿಗೆ ಕಾಟನ್ ಸೀರೆಯತ್ತ ಒಲವು ಜಾಸ್ತಿ. ಯಾಕೆಂದರೆ ಕಾಟನ್ ಸೀರೆಯಲ್ಲೂ ಹತ್ತಾರು ವೈವಿಧ್ಯ. ಖಾದಿ, ಧಾರವಾಡ ಕಾಟನ್, ಬೆಂಗಾಲಿ ಕಾಟನ್, ಕೋಲ್ಕತ ಕಾಟನ್, ಫ್ಯಾಬ್ರಿಕ್ ಕಾಟನ್, ಕೋಟಾ, ಜಮದಾನಿ, ಪೋಚಂಪಲ್ಲಿ, ಬೂಮ್ಕಾಯ, ಕೊಟಿ, ಸಂಬಾಲ್ಪುರಿ, ಚಂದೇರಿ, ಪಾಲಿಕಾಟನ್ ಹೀಗೆ ನಾನಾ ನಮೂನೆಯ ವೆರೈಟಿಗಳು ನಾರಿಯರ ಮನ ಕದ್ದಿದೆ.ಮುಖ್ಯವಾದ ವಿಚಾರವೆಂದರೆ ಸೀರೆಗಳಲ್ಲಿ ಅದೆಷ್ಟೇ ವೆರೈಟಿಗಳಿರಲಿ, ಕೇರಳದ ಕಾಟನ್ ಸೀರೆಗಾಗಿ ನೀರೆಯ ಮನ ಬಯಸದೇ ಇರುವುದಿಲ್ಲ. ಒಮ್ಮೆಯಾದರೂ ಆ ಸೀರೆ ಉಟ್ಟು ಮಲ್ಲು ಬೆಡಗಿಯಂತೆ ಕಂಗೊಳಿಸಬೇಕು ಎಂಬ ಬಯಕೆ ಕೆಲವರಿಗಂತೂ ಇದ್ದೇ ಇರುತ್ತದೆ.

ಕೇರಳ ಕಾಟನ್ ಸೀರೆ!! ಶ್ವೇತ ವರ್ಣದ ಕಾಟನ್ ಸೀರೆಗೆ ಮನ ಸೋಲದವರಾರು ಹೇಳಿ?  ತನ್ನದೇ ಆದ ಒಂದು ವಿಶಿಷ್ಟತೆ ಮತ್ತು ಸೊಬಗು ಕೇರಳದ ಶುಭ್ರ ಬಣ್ಣದ ಕಾಟನ್ ಸೀರೆಗೆ ಇರುವುದಂತೂ ಸತ್ಯ.  ಬಿಳಿಯ ಬಣ್ಣದ ಸೀರೆಗೆ ಜರಿ ಬಾರ್ಡರ್ ಇದ್ದರೆ ಆ ಸೀರೆಯ ಅಂದವೇ ಇಮ್ಮಡಿಯಾದಂತೆ. ಇನ್ನು ಸೀರೆ ಧರಿಸಿದ ನಾರಿಯ ಬಗ್ಗೆ ಹೇಳಬೇಕೆಂದಿಲ್ಲ. “ಸೀರೆಲಿ ಹುಡುಗಿಯ ನೋಡಲೇ ಬಾರದು, ನಿಲ್ಲಲ್ಲ ಟೆಂಪರೇಚರ್ ” ಎಂಬ ರನ್ನ ಚಿತ್ರದ ಹಾಡು ಒಂದು ಕ್ಷಣ ನೆನಪಾದರೂ ಅಚ್ಚರಿಯೇನಿಲ್ಲ ಕೇರಳದ ಸಾಂಪ್ರದಾಯಿಕ ಸೀರೆಯಾದ ಇದರಲ್ಲಿ ಬಿಳಿ, ನಸು ಹಳದಿ, ಗೋಲ್ಡನ್, ಗಾಢ ಕೆಂಪು, ಹಸಿರು ಮುಂತಾದ ಜರಿಯ ಈ ಸೀರೆ ಆಕರ್ಷಕವಾಗಿರುತ್ತದೆ.

ಕೇರಳಿಗರಿಗೆ ಈ ಸೀರೆ ತಮ್ಮ ಸಂಪ್ರದಾಯದ ಒಂದು ಭಾಗವಾಗಿದೆ. ಹಬ್ಬ, ಮದುವೆ ಸಂದರ್ಭಗಳಲ್ಲಿ ಅವರು ಈ ಸೀರೆಯನ್ನು ಧರಿಸದೇ ಇರುವುದಿಲ್ಲ. ಇಂತಿಪ್ಪ ಕೇರಳದ ಕಾಟನ್ ಸೀರೆ ಕೇವಲ ಕೇರಳದ ಸ್ತ್ರೀಯರು ಮಾತ್ರ ಮೆಚ್ಚುಗೆಯಲ್ಲ, ಬದಲಿಗೆ ಎಲ್ಲ ಮಹಿಳೆಯರ ಅಚ್ಚುಮೆಚ್ಚಿನ ಸೀರೆಗಳಲ್ಲಿ ಇದು ಸ್ಥಾನ ಪಡೆದಿದೆ. ಜೊತೆಗೆ ವಾರ್ಡ್ ರೋಬ್ ನಲ್ಲೂ ಕೂಡಾ!!!!

– ಅನಿತಾ ಬನಾರಿ

ಹಾಲಿನ ಸ್ನಾನದಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತೇ?

#balkaninews #malayaleesaree #sarees #keralasaree

Tags

Related Articles