ಜೀವನ ಶೈಲಿಫ್ಯಾಷನ್ಸೌಂದರ್ಯ

ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್

ಬೆಂಗಳೂರು, ಮಾ.24:

ಸಾಗುತ್ತಿರುವ ವೇಗದ ಬದುಕಿನಲ್ಲಿ ಮಹಿಳೆ ಯಾವಾಗಲೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಮನೆ, ಗಂಡ, ಮಕ್ಕಳು ಎಂದು ನಿರಂತರವಾಗಿ ಕೆಲಸ ಮಾಡುವ ಆಕೆಗೆ ತನ್ನ ಸೌಂದರ್ಯದ ಬಗ್ಗೆ ಗಮನಕೊಡಲು ಪುರುಸೊತ್ತೇ ಇರುವುದಿಲ್ಲ. ಮುಖ, ಕಾಲುಗಳಷ್ಟೇ, ಕೈಗಳಿಗೆ ಉಗುರುಗಳಿಗೆ ಪ್ರಾಮುಖ್ಯತೆ ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಕೈ ಉಗುರುಗಳತ್ತ ಗಮನಹರಿಸಬೇಕಾದುದು ಅಗತ್ಯ. ಕಾಲುಗಳ ಅಂದಕ್ಕೆ ಪೆಡಿಕ್ಯೂರ್ ಇದ್ದ ಹಾಗೆ ಕೈಗಳ ಅಂದಕ್ಕೆ ಮೆನಿಕ್ಯೂರ್ ಮಾಡಿ ಉಗುರುಗಳ ಅಂದ ಹೆಚ್ಚಿಸಬಹುದು. ಅದಕ್ಕಾಗಿ ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೇ ಕೂರಬೇಕು ಎಂದೇನಿಲ್ಲ. ಬದಲಿಗೆ ತಮಗೆ ಪುರುಸೊತ್ತಾದಾಗ ಮನೆಯಲ್ಲಿ ಆರಾಮವಾಗಿ ಮಾಡಬಹುದು.

ಸದಾ ಕಾಲ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕೋಮಲ  ಕೈಗಳಿಗೆ ಪ್ರೀತಿಯ ಆರೈಕೆ ಮುಖ್ಯ. ನಿರಂತರ ಕೆಲಸಗಳಿಂದ ಸೊರಗಿರುವ ಬೆರಳುಗಳಿಗೆ ಮೆನಿಕ್ಯೂರ್ ನಿಂದ ಚೈತನ್ಯ ದೊರೆಯುತ್ತದೆ.

ಮೆನಿಕ್ಯೂರ್ ಮಾಡಲು ಕಷ್ಟವಿಲ್ಲ. ಇದು ಕೂಡಾ ಪೆಡಿಕ್ಯೂರ್ ನ ಹಾಗೆ ಸರಳವಾದುದು

ಮೊದಲಿಗೆ ಉಗುರುಗಳಲ್ಲಿರುವ ನೈಲ್ ಪಾಲಿಶ್ ಅನ್ನು ತೆಗೆಯಬೇಕು. ನಂತರ ಉಗುರುಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಕೊನೆಗೆ ಶಾರ್ಪನರ್ ಮೂಲಕ ಶೇಪ್ ಕೊಡಬೇಕು. ನಂತರ ಕೈ ಮಸಾಜ್ ಮಾಡುವ ಕ್ರೀಮ್ ಬಳಸಿ ಕೈಗಳನ್ನು ಚೆನ್ನಾಗಿ ಮಸಾಜ್ ಮಾಡಬೇಕು ಇನ್ನು ಒಂದು ಸಣ್ಣ ಟಬ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಉಪ್ಪು, ಸ್ವಲ್ಪ ಲಿಕ್ವಿಡ್ ಸೋಪ್ ಹಾಕಿ ಹತ್ತು ನಿಮಿಷಗಳ ಕಾಲ ಕೈಗಳನ್ನು ಅದರಲ್ಲಿ ಅದ್ದಿಡಬೇಕು. ಬಳಿಕ ಕ್ಯುಟಿಕಲ್ ರಿಮೂವರ್ ಬಳಸಿ ದಡ್ಡುಕಟ್ಟಿದ ಚರ್ಮವನ್ನು ತೆಗೆಯಬೇಕು. ನಂತರ ಟವೆಲ್ ನಲ್ಲಿ ಚೆನ್ನಾಗಿ ಕೈಗಳನ್ನು ಒತ್ತಬೇಕು. ಆಮೇಲೆ ಬೇಕಿದ್ದರೆ ನೈಲ್ ಪಾಲಿಶ್ ಹಾಕಬಹುದು.

ನಿರಂತರವಾಗಿ ಮೆನಿಕ್ಯೂರ್ ಮಾಡುವುದರಿಂದ ಉಗುರು ಸುತ್ತು ಆಗುವುದನ್ನು ತಡೆಯಬಹುದು. ಕೈಗಳನ್ನು ಮಸಾಜ್ ಮಾಡುವುದರಿಂದ ಕೈ ಚರ್ಮ ಮೃದುವಾಗುತ್ತದೆ ಮತ್ತು ಬೆರಳುಗಳ ರಕ್ತ ಸಂಚಲನಕ್ಕೆ ಸಹಾಯವಾಗುತ್ತದೆ. ಜೊತೆಗೆ ಆರೋಗ್ಯದಿಂದ ಕೈ, ಉಗುರುಗಳು ಕಂಗೊಳಿಸುತ್ತವೆ. ನೈಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಆದುದರಿಂದ ಉತ್ತಮ ಗುಣಮಟ್ಟದ ನೈಲ್ ಪಾಲಿಶ್ ಬಳಸುವುದು ಅಗತ್ಯ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಮೂಲಕ ಕೂಡ ಉಗುರುಗಳ ಅಂದ ಹೆಚ್ಚಿಸಬಹುದು.

ಸೌಂದರ್ಯದ ಸಂಕೇತಗಳಾಗಿರುವ ಉಗುರುಗಳನ್ನು ಸುಂದರವಾಗಿ ಇಟ್ಟುಕೊಳ್ಳುವುದು ಮುಖ್ಯ. ಮೆನಿಕ್ಯೂರ್ ಸಹಾಯದಿಂದ ಸೊರಗಿ ಹೋದ ಕೈಗಳಿಗೆ ಚೈತನ್ಯ ನೀಡಲು ಮರೆಯದಿರಿ. ಇದು ಕೈಗಳ, ಉಗುರುಗಳ ಅಂದ ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ.

–  ಅನಿತಾ ಬನಾರಿ

ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!

#manicure #beautytips #healthytips #balkaninews #manicuretreatment

Tags