ಜೀವನ ಶೈಲಿಫ್ಯಾಷನ್ಸೌಂದರ್ಯ

ಕನ್ನಡಿಯೊಳಗಿಂದ ಕಾಣ್ತಿದೆ ನಿನ್ನಂದ

ಬೆಂಗಳೂರು, ಮಾ.25:

ಆಕೆ ಎಷ್ಟೇ ಬ್ಯುಸಿಯಾಗಿರಲಿ, ಕನ್ನಡಿ ಕಂಡ ತಕ್ಷಣ ತನ್ನ ಕೆಲಸಗಳನ್ನು ಪಕ್ಕಕ್ಕಿಟ್ಟು ಒಂದು ಅರ್ಧ ಗಂಟೆಯಾದರೂ ತನ್ನ ಸೌಂದರ್ಯವನ್ನು ಆಸ್ವಾದಿಸುತ್ತಾಳೆ. ಹೊಸದಾಗಿ ಮಾಡಿದ ಹೇರ್ ಕಟ್, ಕೂದಲು ಕಟ್ಟಿದರೆ ಚೆಂದವೋ ಅಥವಾ ಹಾಗೆ ಬಿಟ್ಟರೆ ಚೆಂದವೋ, ಕ್ಲಿಪ್ ಹಾಕಲೇ ಅಥವಾ ರಬ್ಬರ್ ಬ್ಯಾಂಡ್ ಹಾಕಲೇ, ತಿಂಗಳ ಹಿಂದೆ ಐ ಬ್ರೋಸ್ ಮತ್ತೆ ಬಂದಿದೆ, ಯಾವಾಗ ಬ್ಯೂಟಿಪಾರ್ಲರ್ ಗೆ ಹೋಗೋದಪ್ಪ? ಕಿವಿಯೋಲೆ ಬದಲಾಯಿಸದೆ ವಾರವಾಯ್ತು ಮತ್ತೆ ಕೆಲಸ ಆದ ಮೇಲೆ ಬದಲಾಯಿಸಬೇಕು, ಹೋ ದೇವರೇ ಕೆನ್ನೆಯ ಬಳಿ ಒಂದು ಮೊಡವೆ. ನಾಡಿದ್ದು ಒಂದು ಫಂಕ್ಷನ್ ಬೇರೆ ಇದೆ, ಅಷ್ಟರಲ್ಲಿ ಹೋದರೆ ಸಾಕು ಎಂದು ಎಡೆಬಿಡದೆ ಆಲೋಚನೆ ಮಾಡುತ್ತಿದ್ದ ಆಕೆಗೆ ಏನೋ ಹೊಳೆದು ಕಪಾಟಿನತ್ತ ಹೋದಳು. ಹಿಂದಿನ ದಿನವಷ್ಟೇ ಇಷ್ಟ ಪಟ್ಟು ತೆಗೆದ ಹರಳಿನ ನೆಕ್ಲೇಸ್ ನಿಂದ ತನ್ನ ಕೊರಳನ್ನು ಅಲಂಕರಿಸಿಕೊಂಡು ಕನ್ನಡಿಯತ್ತ ನೋಡಿ ಸಂತಸಪಟ್ಟಳು.

ಕನ್ನಡಿಯ ಮುಂದೆ ಕುಳಿತರೆಂದರೆ ಆಯಿತು, ಹೊರ ಪ್ರಪಂಚದ ಅರಿವೇ ಇರುವುದಿಲ್ಲ. ಕನ್ನಡಿಯ ಹುಚ್ಚು ಕೆಲವರಿಗೆ ಅದೆಷ್ಟು ಇರುತ್ತದೆ ಎಂದರೆ ಮೊಬೈಲ್ ಸ್ಕ್ರೀನ್ ನಲ್ಲಿ, ಆಫೀಸ್ ಕಂಪ್ಯೂಟರ್ ಪರದೆ ಮೇಲೆ, ವೆಹಿಕಲ್ ಕನ್ನಡಿಯಲ್ಲಿ ತಮ್ಮ ಅಂದವನ್ನು ನೋಡುವುದಲ್ಲದೇ ವ್ಯಾನಿಟಿ ಬ್ಯಾಗ್ ನಲ್ಲಿ ಸಣ್ಣ ಕನ್ನಡಿ ಇರುತ್ತದೆ. ಒಟ್ಟಿನಲ್ಲಿ ಕನ್ನಡಿ ಇಲ್ಲದೇನೇ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ಅಷ್ಟೇ ಯಾಕೆ, ಇನ್ನು ಕೆಲವರು ಅದೆಷ್ಟು ಕನ್ನಡಿ ಪ್ರಿಯರು ಎಂದರೆ ಕನ್ನಡಿ ನೋಡದೆ ಮನೆಯಿಂದ ಹೊರಗೆ ಬಿಡಿ, ತಮ್ಮ ಕೋಣೆಯಿಂದ ಹೊರಗೆ ಬರುವುದಿಲ್ಲ. ಎದ್ದ ತಕ್ಷಣ ಮುಖ ತೊಳೆಯದಿದ್ದರೂ ಪರವಾಗಿಲ್ಲ, ಕನ್ನಡಿಯತ್ತ ಮುಗುಳುನಕ್ಕು ದಿನ ಆರಂಭಿಸುವ ಕಾಲ. ಮೊದಲೆಲ್ಲಾ ನಾರಿ ಮಣಿಯರು ಎದ್ದ ತಕ್ಷಣ ದೇವರ ಚಿತ್ರವನ್ನೋ, ತಮ್ಮ ಪತಿದೇವರ ಮುಖವನ್ನೋ ನೋಡಿ ಏಳುತ್ತಿದ್ದರು. ಆದರೆ ಈಗ ಎದ್ದ ತಕ್ಷಣ ಕನ್ನಡಿ ಇದ್ದರೆ ಸಾಕು, ಬೇರೇನೂ ಬೇಡ, ಬೇಕಾಗೂ ಇಲ್ಲ.

ಹೆಣ್ಣು ಮಕ್ಕಳು ತಮ್ಮಷ್ಟಕ್ಕೆ ತಾವೇ ತಲೆ ಕೆಡಿಸಿಕೊಳ್ಳಲು ಏನು ಮಾಡಬೇಕು? ಅದಕ್ಕೆ ಕಷ್ಟ ಪಡಬೇಕು ಎಂದೇನಿಲ್ಲ. ಅವರ ಕೈಯ್ಯಲ್ಲಿ ಒಂದು ಮೇಕಪ್ ಕಿಟ್ ಕೊಟ್ಟು ಒಂದು ಕೋಣೆಯಲ್ಲಿ ಬಾಗಿಲು ಹಾಕಿ ಬಿಡಬೇಕು. ಅಷ್ಟಕ್ಕೆ ತಲೆ ಕೆಡಿಸಿಕೊಳ್ಳೋದು ಯಾಕೆ ಅಂಥ ಆಲೋಚಿಸುತ್ತಿದ್ದೀರಾ? ಆ ಕೋಣೆಯಲ್ಲಿ ಕನ್ನಡಿ ಇರಬಾರದು. ಮೇಕಪ್ ಇಲ್ಲದೇನೇ ಬೇಕಾದರೂ ಇರಬಹುದು, ಆದರೆ ಕನ್ನಡಿ ನೋಡದೆ ಇರಲಾರೆ ಎಂಬ ಕಾಲವಿದು.

ಹಿಂದಿನ ಕಾಲದ ಜನರ ಮನಸ್ಸಿನಲ್ಲೂ ಕನ್ನಡಿಯ ಪರಿಕಲ್ಪನೆ ಇತ್ತು ಎಂದರೆ ನಂಬಲೂ ಸಾಧ್ಯವೇ? ಆದರೆ ನಂಬಲೇ ಬೇಕು. ಅವರು ಮೊದಲ ಬಾರಿಗೆ ಬಳಸಿದ ಕನ್ನಡಿ ಎಂದರೆ ನೀರು. ನೀರಿನಲ್ಲಿ ತಮ್ಮ ಮುಖವನ್ನು ನೋಡುತ್ತಿದ್ದರು. ಮೊದಲ ಬಾರಿಗೆ ನೀರಿನಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡು ಅವರಿಗೆ ಆಶ್ಚರ್ಯ ಏನಿಸಿದರೂ ಮತ್ತೆ ಅದನ್ನು ರೂಢಿ ಮಾಡಿಕೊಂಡರು. ನಂತರದ ದಿನಗಳಲ್ಲಿ ಕ್ರಮೇಣವಾಗಿ ಕನ್ನಡಿಯ ಆವಿಷ್ಕಾರವಾಯಿತು.

ಬರೀ ಹುಡುಗಿಯರು ಮಾತ್ರ ಕನ್ನಡಿ ಮುಂದೆ ನಿಂತುಕೊಳ್ಳುವುದಿಲ್ಲ. ಹುಡುಗರು ಕೂಡಾ ಅಷ್ಟೇ! ಆಗ ತಾನೇ ತೆಗೆದ ಗಡ್ಡ, ಚಿಗುರೊಡೆಯುತ್ತಿರುವ ಮೀಸೆ, ಬದಲಾಯಿಸುತ್ತಿರುವ ಹೇರ್ ಸ್ಟೈಲ್ ಹೀಗೆ ಕನ್ನಡಿ ನೋಡುತ್ತಾ ಕಾಲ ಕಳೆಯುತ್ತಾರೆ.

ಪಕ್ಕದ ಮನೆಯಲ್ಲಿ ಸದಾ ಕಾಲ ನೆಲೆಸಿರುತ್ತಿದ್ದ ನಿಶ್ಯಬ್ಧ ಬೆಳಗ್ಗಿನ ಹೊತ್ತು ಮಾಯ. ಬೆಳಗ್ಗೆ ಆದರೆ ಸಾಕು, ಒಂದೇ ಸಮನೆ ಗಲಾಟೆ. ನನಗೆ ಆಶ್ವರ್ಯ. ಒಂದು ದಿನ ಕೇಳಿಯೇ ಬಿಟ್ಟೆ “ ಅದ್ಯಾಕೆ ನಿಮ್ಮ ಮನೆಯಲ್ಲಿ ಬೆಳಗ್ಗಿನ ಹೊತ್ತು ಅಷ್ಟೊಂದು ಗಲಾಟೆ ಕೇಳುತ್ತಿದೆ’? ಅದಕ್ಕೆ ಅವರು ನಗುತ್ತಾ ಹೋ ಅದಾ, ನನ್ನ ಮಗ ಮತ್ತು ಮಗಳು ಮನೆ ಬಿಡುವ ಸಮಯ ಅದು. ಮಗಳು ಕೆಲಸಕ್ಕೆ ಹೊರಟು ನಿಂತರೆ, ಮಗ ಕಾಲೇಜಿಗೆ ರೆಡಿ ಆಗುತ್ತಿರುತ್ತಾನೆ. ಕನ್ನಡಿ ಮುಂದೆ ನಿಂತುಕೊಳ್ಳೋದು ಯಾರು ಎಂಬ ವಿಷಯಕ್ಕೆ ಜಗಳ. ಒಂದೊಂದು ಸಲ ಕನ್ನಡಿ ಇಲ್ಲದೇ ಇದ್ದರೆ ಒಳ್ಳೆಯದಿತ್ತು ಅಂಥ ಅನ್ನಿಸೊತ್ತೆ ಎಂದರು.

ಕನ್ನಡಿ ಇಲ್ಲದ ಊರು ಬಿಡಿ, ಕನ್ನಡಿ ಇಲ್ಲದ ಮನೆಯನ್ನು ಕೂಡ ಹುಡುಕುವುದು ತುಂಬಾ ಕಷ್ಟ. ಕನಸಿನಲ್ಲಿಯೂ ಕೂಡ ಕನ್ನಡಿ ಇಲ್ಲ ಎಂದು ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕನ್ನಡಿ ಎಲ್ಲರನ್ನು ಮೋಡಿ ಮಾಡಿ ಬಿಟ್ಟಿದೆ.

ಅನಿತಾ ಬನಾರಿ

ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

#mirror #girls #girlsandmirror #lifestyle #beautytips

Tags