ಆರೋಗ್ಯಆಹಾರಜೀವನ ಶೈಲಿ

ಪ್ರತಿದಿನ ನಡಿಗೆ ಆರೋಗ್ಯದೆಡೆಗೆ

ಬೆಂಗಳೂರು, ಮಾ.25:

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ನಿಸರ್ಗದ ನಿಯಮ. ಆದರೆ ಇಂದಿನ ಜನ ಅದಕ್ಕೆ ತದ್ವಿರುದ್ದ. ತಡ ರಾತ್ರಿವರೆಗೆ ಟಿವಿ, ಕಂಪ್ಯೂಟರ್ ನಲ್ಲಿ ಸಿನಿಮಾ ನೋಡುತ್ತಲೋ, ಮೊಬೈಲ್ ನಲ್ಲಿ ವಾಟ್ಸಾಪ್, ಫೇಸ್ ಬುಕ್, ಹೈಕ್ ನಲ್ಲಿ ಚಾಟಿಂಗ್ ಮಾಡುತ್ತಾ ಸಮಯ ಕಳೆದು ನಿದ್ದೆ ಬರುವುದೇ ಗೊತ್ತಾಗುವುದಿಲ್ಲ. ಮತ್ತೆ ಬೆಳಗ್ಗೆ ಏಳುವುದು ಸೂರ್ಯೋದಯದ ನಂತರ. ಬೇಗ ಎದ್ದು ಒಂದು ರೌಂಡ್ ವಾಕಿಂಗ್ ಹೋಗೋಣ ಎಂದರೆ ಉದಾಸೀನ. ಮನೆಯಲ್ಲಿ ಸರಿಯಾಗಿ ತಿಂಡಿ ತಿನ್ನದೇ ಮತ್ತೆ ಅದೆಷ್ಟೋ ಹೊತ್ತಿಗೋ  ಆಫೀಸ್ ಕ್ಯಾಂಟೀನ್ ನಲ್ಲಿ ತಿಂಡಿ. ಆಹಾರ ಕ್ರಮದಲ್ಲಿ ವ್ಯತ್ಯಾಸದಿಂದ ಕಾಡುವ ಆರೋಗ್ಯದ ಸಮಸ್ಯೆ. ಮತ್ತೆ ಜಿಮ್ ಗೆ ಹೋಗಿ ಗಂಟೆಗಟ್ಟಲೇ ಸಮಯ ಅದರ ಜೊತೆಗೆ ಹಣವನ್ನು ಕಳೆದುಕೊಳ್ಳಲು ಸಿದ್ಧ. ಜೊತೆಗೆ ಹತ್ತು ಜನರ ಎದುರು ಜಿಮ್ ಗೆ ಹೋಗುತ್ತಿದ್ದೇನೆ ಎಂದು ಹೇಳಿಕೊಳ್ಳುವುದೇ ಹೆಮ್ಮೆ.ಬದಲಿಗೆ ಬೆಳಗ್ಗೆ ಬೇಗ ಎದ್ದು ಹಕ್ಕಿಗಳ ಕಲರವದ ಮಧ್ಯೆ ವಾಕಿಂಗ್ ಹೊರಟರೆ ಮನಸ್ಸಿಗೆ ಏನೋ ಒಂಥರಾ ಖುಷಿ. ಆರೋಗ್ಯಕರವಾದ ಈ ವಾಕಿಂಗ್ ನಿಂದ ಮನಸ್ಸು ಮತ್ತು ದೇಹ ಎರಡೂ ಸದಾ ಉಲ್ಲಾಸದಿಂದ ಇರುತ್ತದೆ. ಜೊತೆಗೆ ನಿರಂತರವಾದ ವಾಕಿಂಗ್ ನಿಂದ ದೇಹದ ತೂಕ ಇಳಿಸಬಹುದು.

 

ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಹೃದಯಕ್ಕೆ ತಗಲುವ ರೋಗವನ್ನು ತಡೆಯಬಹುದು. ಅಷ್ಟೇ ಅಲ್ಲದೆ ಪ್ರತಿದಿನ ವಾಕಿಂಗ್ ಮಾಡುವುದರಿಂದ ಬೈಪಾಸ್ ಚಿಕಿತ್ಸೆ ಆದವರಿಗೆ ಮತ್ತು ಹೃದಯಾಘಾತ ಆದವರು ಬಹು ಬೇಗ ಚೇತರಿಸಿಕೊಳ್ಳುತ್ತಾರೆ. ಜೊತೆಗೆ ದೇಹಕ್ಕೆ ಹೊರಗಿನ ವ್ಯಾಯಾಮ ಇಲ್ಲದಿದ್ದರೆ ದೇಹ ಜಡವಾಗುತ್ತದೆ. ವಾಕಿಂಗ್ ನಿಂದ ದೇಹ ಜಡವಾಗುವುದನ್ನು ತಪ್ಪಿಸಬಹುದು. ವಾಕಿಂಗ್ ನಿಂದ ಬರೀ ದೈಹಿಕ ಆರೋಗ್ಯ ವೃದ್ಧಿಯಾಗುವುದಲ್ಲದೇ ಇದರಿಂದ ಮಾನಸಿಕ ಆರೋಗ್ಯವು ಹೆಚ್ಚುತ್ತದೆ.

ಪ್ರತಿದಿನ ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನ ಹಲವು. ವಾಕಿಂಗ್ ಮಾಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಇದರಿಂದ ಮನಸ್ಸಿನ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ವಾಕಿಂಗ್ ನಿಂದ ದೇಹದ ತೂಕ ಮತ್ತು ಕೊಬ್ಬು ಕಡಿಮೆಯಾಗುವಲ್ಲಿ ಸಹಾಯ ಮಾಡುತ್ತದೆ.

ಸದಾ ಕಾಲ ಆರೋಗ್ಯವಂತರಾಗಿರಲು ವಾಕಿಂಗ್ ಮಾಡುವುದಕ್ಕಿಂತ ಬೇರೆ ಯಾವ ರೀತಿಯ ವ್ಯಾಯಾಮಗಳಿಲ್ಲ. ಅಷ್ಟೇ ಅಲ್ಲದೇ ವಾಕಿಂಗ್ ಮಾಡುವುದು ತುಂಬಾ ಸರಳ ಮತ್ತು ಸುಲಭ. ವಾಕಿಂಗ್ ಮಾಡಲು ವಯಸ್ಸಿನ ಇತಿಮಿತಿಯಿಲ್ಲ.

ಮುಖ್ಯವಾದ ವಿಚಾರವೆಂದರೆ ಬೆಳಗಿನ ನಡಿಗೆಯಿಂದ ಆರೋಗ್ಯ ವೃದ್ಧಿಸುವುದಲ್ಲದೇ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯ.

ಅನಿತಾ ಬನಾರಿ

ನಟನಾ ಕ್ಷೇತ್ರದಲ್ಲಿ ‘ಮಿಂಚು’ತ್ತಿರುವ ರಾಧಿಕಾ!!

#balkaninews #healthytips #morningwalking #walkingisthebestexercise

Tags