ಆರೋಗ್ಯಆಹಾರಜೀವನ ಶೈಲಿ

ರೋಗಿಗಳಲ್ಲಿ ರೋಗ ನಿವಾರಣೆ ಮಾಡುವ ವಿಶಿಷ್ಟ ಪದ್ಧತಿಯೇ “ಪಂಚಕರ್ಮ”

ಬೆಂಗಳೂರು, ಜ.13: ಸಾಮಾನ್ಯವಾಗಿ ಹೇಳುವುದಾದರೆ, ನಮ್ಮ ದೇಹವನ್ನು ಶುದ್ಧಿ ಮಾಡುವ ಚಿಕಿತ್ಸಾ ಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಷಗಳಾದ ವಾತ, ಪಿತ್ತ, ಕಫ ಪ್ರಕೋಪಗೊಂಡು ವ್ಯಾಧಿ ಉತ್ಪನ್ನವಾದಾಗ ದುಷ್ಟ ದೋಷಗಳನ್ನು ಕ್ರಮಬದ್ಧವಾಗಿ ನಿವಾರಣೆ ಮಾಡುವ ವೈದ್ಯ ಪದ್ಧತಿ.

ಅಷ್ಟೇ ಈ ವೈದ್ಯ ಪದ್ಧತಿಯಲ್ಲಿ ಸುಲಭವಾಗಿ, ಸುರಕ್ಷಿತವಾಗಿ ದೇಹದಿಂದ ಹೊರಹಾಕಲು ಮತ್ತು ರಸ, ರಕ್ತ, ಮಾಂಸ, ಮೇದ, ಅಸ್ತಿ, ಮಜ್ಜಾ, ಶುಕ್ರ  ಧಾತುಗಳನ್ನು ಬಲಿಷ್ಟಪಡಿಸಲು ಆಯುರ್ವೇದದಲ್ಲಿ ಹೇಳಲ್ಪಡುವ ವಿಶಿಷ್ಟ ಚಿಕಿತ್ಸಾ ಪರಂಪರೆ ಈ ಪಂಚಕರ್ಮ ಚಿಕಿತ್ಸೆ.

ಆರೋಗ್ಯವಂತರು ಕೂಡ ಋತುವಿಗೆ ಅನುಗುಣವಾಗಿ ಆಯಾ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು. ಆಯಾ ದೋಷಗಳಿಂದ ಉಂಟಾಗುವ ಕಾಯಿಲೆಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಹಾಗೂ ಶಮನ ಚಿಕಿತ್ಸೆಯಿಂದ ಗುಣಮುಖರಾಗದವರು ವೈದ್ಯರ ಸಲಹೆ ಮೇರೆಗೆ ಪಂಚಕರ್ಮ ಚಿಕಿತ್ಸೆ ಮಾಡಿಸಿದರೆ ಕಾಯಿಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಇದಕ್ಕೆ ತಾಳ್ಮೆ ಮತ್ತು ನಂಬಿಕೆ ಅಗತ್ಯ.

ಅಭ್ಯಂಗ, ಸ್ವೇದನ, ಶಿರೋಧಾರಾ ಪದ್ಧತಿಗಳು ಪಂಚಕರ್ಮ ಪದ್ಧತಿಗಳಲ್ಲಿ ಒಂದಾಗಿದೆ. ಆಚಾರ್ಯ ಚರಕ ಹೇಳುವಂತೆ ಪಂಚಕರ್ಮ ಎಂದರೆ:

ವಮನ ಕರ್ಮ: ವಸಂತ ಋತುವಿನಲ್ಲಿ ಕಫಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟಲು ಈ ಕರ್ಮ ಉಪಯುಕ್ತ. ಈ ಕ್ರಮದಲ್ಲಿ ಚಿಕಿತ್ಸಾರ್ಥಿಗೆ ಔಷಧಿ ನೀಡಿ ವಾಂತಿ ಮಾಡಿಸಲಾಗುತ್ತದೆ. ಇದಕ್ಕೆ 8-15 ದಿನಗಳ ಕಾಲಾವಕಾಶ, ಪಥ್ಯ ಅಗತ್ಯ.

ವಿರೇಚನ ಕರ್ಮ: ಪಿತ್ತಕ್ಕೆ ಸಂಬಂಧಪಟ್ಟ ಕಾಯೆಲೆಗಳಲ್ಲಿ ಔಷಧಿ ಸೇವಿಸಿ ಬೇಧಿ ಮಾಡಿಸುವುದು. ಅರೋಗ್ಯವಂತರಲ್ಲಿ ಶರದ್‍ ಋತುವಿನಲ್ಲಿ ಈ ಕ್ರಮ ಅನುಸರಿಸಲಾಗುತ್ತದೆ. ಹೀಗಾಗಿ ಪಿತ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟಲು ವಿರೇಚನ ಕರ್ಮ ಹೆಚ್ಚು ಉಪಯುಕ್ತ.

ಬಸ್ತಿ ಕರ್ಮ: ಯಾವುದೇ ದೋಷಗಳಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಅದರಲ್ಲಿ ಪ್ರಮುಖವಾಗಿ ವಾತ ರೋಗಗಳಿಗೆ ಗುದ ಮಾರ್ಗದ ಮೂಲಕ ಔಷಧವನ್ನು ಕೊಡುವ ಚಿಕಿತ್ಸಾ ಕ್ರಮ ಸಾಮಾನ್ಯವಾಗಿ ವರ್ಷ ಋತುವಿನಲ್ಲಿ ವಾತ ಪ್ರಕೋಪ ತಡೆಯಲು ಈ ಚಿಕತ್ಸೆ ಉಪಯುಕ್ತವಾಗಿದೆ.

ಬಸ್ತಿ ಕರ್ಮವನ್ನು 2 ಕ್ರಮಗಳ ಮೂಲಕ ಚಿಕಿತ್ಸಾರ್ಥಿಗೆ ನೀಡಲಾಗುತ್ತದೆ.

ಆಸ್ಥಾಪಕ ಬಸ್ತಿ: ಔಷಧಿಯುಕ್ತ ಕಷಾಯ, ಕಲ್ಕ, ಜೇನುತುಪ್ಪ, ಸೈಂಧವ, ಲವಣ, ಸ್ನೇಹ ದ್ರವ್ಯ, ಹಾಲು, ಗೋಮೂತ್ರ ಇತ್ಯಾದಿಗಳನ್ನು ವಿಶಿಷ್ಟ ರೀತಿಯಲ್ಲಿ ಸಮ್ಮಿಲನ ಮಾಡಿ ನೀಡುವುದು.

ಅನುವಾಸನ ಬಸ್ತಿ: ಔಷಧಿಯುಕ್ತ ಸ್ನೇಹದ್ರವ್ಯ ಹಾಗೂ ಸೈಂಧವ ಲವಣವನ್ನು ಗುದ ಮಾರ್ಗದ ಮೂಲಕ ಕೊಡುವುದು.

ನಸ್ಯ ಕರ್ಮ: ಔಷಧಿಯುಕ್ತ ತೈಲ, ತುಪ್ಪ, ಸ್ವರಸ, ಚೂರ್ಣ ಇವುಗಳನ್ನು ಕಾಯಿಲೆಗೆ ಅನುಗುಣವಾಗಿ ನಿಗಧಿಪಡಿಸಿದ ಪ್ರಮಾಣದಲ್ಲಿ ಮೂಗಿನ ರಂಧ್ರದ ಮೂಲಕ ಕೊಡುವ ಚಿಕಿತ್ಸಾ ಕ್ರಮ. ಸಾಮಾನ್ಯವಾಗಿ ಕುತ್ತಿಗೆ ಹಾಗೂ ಕುತ್ತಿಗೆಯ ಮೇಲ್ಭಾಗಕ್ಕೆ ಸಂಬಂಧಪಟ್ಟ ಕಾಯಿಲೆಗೆ ಸನ್ಯಕರ್ಮ ತುಂಬಾ ಉಪಯುಕ್ತ.

ರಕ್ತಮೋಕ್ಷಣ: ಸಾಮಾನ್ಯವಾಗಿ ರಕ್ತದಿಂದ ಉಂಟಾಗುವ ಕಾಯಿಲೆಗಳು ಹಾಗೂ ಚರ್ಮದ ಸಮಸ್ಯೆಗಳು, ದೂಷಿತ ರಕ್ತ ಹೆಚ್ಚಾದ ಸ್ಥಿತಿಯಲ್ಲಿ ದೇಹದಿಂದ ಜಿಗಣೆ ಸೂಜಿಯನ್ನು ಬಳಸಿ ಕೆಟ್ಟ ರಕ್ತವನ್ನು ಹೊರತೆಗೆಯುವ ವಿಧಾನವೇ ರಕ್ತಮೋಕ್ಷಣ.

#healthytips #healthyfoods #panchakarma #balkaninews

Tags