ಜೀವನ ಶೈಲಿಫ್ಯಾಷನ್

ರೈನ್ ಕೋಟ್, ಜಾಕೆಟ್ ಗಳಲ್ಲಿ ಮಳೆಹನಿಗಳ ಲೀಲೆ

ಬೆಂಗಳೂರು, ಏ.12:

ಹೇಳದೆ ಕೇಳದೆ ಸುರಿಯುವ ಮಳೆಗೆ ರಕ್ಷಣೆ ಪಡೆಯಲು ಹತ್ತು ಹಲವು ವಿನ್ಯಾಸದ, ಮನಸೆಳೆವ ಬಣ್ಣಗಳಿಂದ ಕೂಡಿದ, ಮನಕೊಪ್ಪುವ ಡಿಸೈನ್ ಗಳಿರುವ ಕೊಡೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆಯೇನೋ ನಿಜ. ಆದರೆ ನಯನ ಮನೋಹರವಾಗಿರುವಂತಹ ಕೊಡೆಗಳು ಎಲ್ಲಾ ಕಾಲಕ್ಕೂ ಉಪಯೋಗವಾಗುವುದಿಲ್ಲ. ಬೈಕ್ ನಲ್ಲಿ, ಸ್ಕೂಟರ್, ಸ್ಕೂಟಿಯಲ್ಲಿ ಹೋಗುವವರಿಗೆ ಕೊಡೆ ಹಿಡಿದುಕೊಂಡು ಪ್ರಯಾಣ ಮಾಡಲಾಗುವುದಿಲ್ಲ ಎಂಬುದು ತಿಳಿದಿರುವ ವಿಚಾರ. ಅಂತೆಯೇ ಸೈಕಲ್ ನಲ್ಲಿ ಶಾಲೆಗೆ ತೆರಳುವ ಮಕ್ಕಳು, ಹತ್ತಿರದ ಶಾಲೆಗೆ ಮಣ ಭಾರದ ಬ್ಯಾಗ್ ಹೊತ್ತು ನಡೆಯುವ ಮಕ್ಕಳಿಗೆ ಧಾರಾಕಾರವಾಗಿ ಸುರಿಯುವ ಮಳೆಗೆ ಕೊಡೆ ಹಿಡಿದುಕೊಂಡು ನಡೆಯಲು ಕಷ್ಟ. ಹಾಗಾಗಿ ಹೆಚ್ಚಿನವರು ಇದೀಗ ಜಾಕೆಟ್ ಅಥವಾ ರೈನ್ ಕೋಟ್ ನನ್ನು ಬಳಸುತ್ತಿದ್ದಾರೆ.

ಪಾಲಿಸ್ಟರ್, ನೈಲಾನ್, ಪಾರದರ್ಶಕ ಪ್ಲಾಸ್ಟಿಕ್ ಹೀಗೆ ವಿಭಿನ್ನ ಬಣ್ಣದ ಮನಮೋಹಕವಾದ ರೈನ್ ಕೋಟ್ ಗಳು ಇದೀಗ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಸುರಿಯುವ ಮಳೆಯಿಂದ ಒದ್ದೆಯಾಗುವುದನ್ನು ತಡೆಯುವ ರೈನ್ ಕೋಟ್ ನ್ನು ತಲೆಯು ಒದ್ದೆಯಾಗದಂತೆ ಮುಚ್ಚಿಕೊಳ್ಳಬಹುದು. ರೈನ್ ಕೋಟಿನಲ್ಲಿ ಕಿಸೆಗಳು ಇದ್ದು ಅದಕ್ಕೆ ಝಿಪ್ ಇರುವುದರಿಂದ ಮೊಬೈಲ್ , ಕಾಯಿನ್ ಗಳನ್ನು ಹಾಕಬಹುದು.

ಇತ್ತೀಚಿನ ದಿನಗಳಲ್ಲಿ ಪಾರದರ್ಶಕ ರೈನ್ ಕೋಟ್ ಗಳು ದೊರೆಯುತ್ತಿದ್ದು ಅದರಲ್ಲಿ ಜನರು ಯಾವ ರೀತಿಯ ಬಟ್ಟೆ ಧರಿಸಿದ್ದಾರೆ ಎಂಬುದು ತಿಳಿಯುತ್ತದೆ.

ಇನ್ನು ರೈನ್ ಕೋಟಿನ ಹೊರತಾಗಿ ಫ್ಯಾಷನ್ ದೃಷ್ಟಿಯಿಂದ ಯುವಕ ಯುವತಿಯರು ಜಾಕೆಟ್ ನ್ನು ಖರೀದಿಸುವುದು ಸಾಮಾನ್ಯವಾಗಿದೆ. ಯುವಜನರ ಅಭಿರುಚಿಗೆ ತಕ್ಕಂತ ಜಾಕೆಟ್ ಗಳು ಇದೀಗ ಲಭ್ಯವಿರುವುದರಿಂದ ಅದನ್ನೇ ಕೊಂಡುಕೊಳ್ಳುವವರು ಜಾಸ್ತಿ. ಕೆಲವರಿಗೆ ಬ್ರಾಂಡೆಡ್ ಬಗ್ಗೆ ಯೋಚನೆ ಜಾಸ್ತಿ. ಅಂತವರೂ ಯೋಚಿಸುವ ಅಗತ್ಯವೇ ಇಲ್ಲ. ಅವರ ಅನುಕೂಲಕ್ಕೆ ತಕ್ಕಂತ ವುಡ್ ಲಾಂಡ್, ಪೀಟರ್ ಇಂಗ್ಲೆಂಡ್, ಪಾರ್ಕ್ ಅವೆನ್ಯೂ, ಬ್ಲಾಕ್ ಬರ್ಡ್ ಹೀಗೆ ತರತರದ ಕಂಪೆನಿಗಳ ಉತ್ಪನ್ನಗಳು ದೊರೆಯುತ್ತದೆ. ಮಹಿಳೆಯರಿಗೂ ಬೇಕಾದಂತಹ ಬೇಬಿ ಪಿಂಕ್, ನೀಲಿ, ಹಸಿರು, ಮುಂತಾದ ಕಲರ್ ಫುಲ್ ಆಗಿರುವ ಜಾಕೆಟ್ ಗಳು ಸಿಗುತ್ತದೆ.

ನೂರು ರೂಪಾಯಿಗಳಿಂದ ಹಿಡಿದು ಸಾವಿರಾರು ರೂಪಾಯಿಗಳ ವರೆಗಿನ ರೈನ್ ಕೋಟ್ ಮತ್ತು ಜಾಕೆಟ್ ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಆದರೆ ಆಯ್ಕೆ ಮಾಡುವಾಗ ಬೆಲೆಗಿಂತ ಜಾಸ್ತಿ ಗುಣಮಟ್ಟ ಮುಖ್ಯವಾಗುತ್ತದೆ. ಕಡಿಮೆ ಬೆಲೆಗೆ ದೊರೆಯುವ ರೈನ್ ಕೋಟ್ ಗಳು ಬೇಗ ಹರಿದು ಹೋಗುತ್ತದೆ ಮಾತ್ರವಲ್ಲ ಮಳೆ ನೀರು ಒಳ ಬಂದು ಒದ್ದೆಯಾಗುವ ಸಾಧ್ಯತೆ ತುಂಬಾ ಇದೆ.  ಗುಣಮಟ್ಟ ಇದ್ದರೆ ಸ್ಪಲ್ಪ ಜಾಸ್ತಿ ಹಣ ಕೊಟ್ಟರೆ ತೊಂದರೆಯಿಲ್ಲ, ಯಾಕೆಂದರೆ ಅದು ತುಂಬಾ ಸಮಯ ಬಾಳಿಕೆ ಬರುತ್ತದೆ. ಮಳೆಗಾಲ ಮುಗಿದ ನಂತರ ಒಣಗಿಸಿ ಮಡಿಚಿಟ್ಟರೆ ಮತ್ತೆ ಮುಂದಿನ ಮಳೆಗಾಲದಲ್ಲಿ ಉಪಯೋಗಿಸಬಹುದು.

ಅನಿತಾ ಬನಾರಿ

ಉತ್ತಮ ಆರೋಗ್ಯಕ್ಕೆ ಪುದೀನಾ

#raincoat #balkaninews #raincoatimages #jackets #raincoatandjackets

Tags