ಜೀವನ ಶೈಲಿಫ್ಯಾಷನ್

ಫ್ಯಾಶನ್ ಲೋಕದಲ್ಲಿ ಬಣ್ಣ ಬಣ್ಣಗಳ ರಾಖಿ..

ರಕ್ಷಾ ಬಂಧನ್" ಎನ್ನುವ ಹೆಸರೇ ಸೂಚಿಸುವಂತೆ ಇದು "ರಕ್ಷಣೆಯನ್ನು ನೀಡುವ ಬಂಧನ

ಸಹೋದರ-ಸಹೋದರಿಯರಿಯರ ಸಂಬಂಧವನ್ನು ಕೊಂಡಾಡುವ ಮತ್ತು ಅದರ ಸ್ವಾದವನ್ನು ಸವಿಯುವ ಹಬ್ಬವೇ ರಕ್ಷಾ-ಬಂಧನ…

ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳ ಸುಗ್ಗಿ! ಇಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಗಣೆಶ ಚತುರ್ಥಿ, ಕೃಷ್ಣಾಷ್ಟಮಿ ಹೀಗೆ ಹಲವಾರು ಹಬ್ಬಗಳಂತೂ ಸಂತೋಷವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಾ ಹೋಗುತ್ತವೆ, ಅದರಲ್ಲೂ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ‘ರಕ್ಷಾಬಂಧನ ಹಬ್ಬ’. ರಕ್ಷಾ ಬಂಧನ ಬಂತೆಂದರೆ ಸಾಕು ಅದೇನೋ ಖುಷಿ . ಅಣ‍್ಣ ತಂಗಿಯ ಪವಿತ್ರ ಬಂಧನವನ್ನು ಮತ್ತಷ್ಟು ಗಟ್ಟಿಗೊಳ‍್ಳಿಸುತ್ತದೆ. ರಕ್ಷಾ ಬಂಧನಕ್ಕೆ ತಯಾರಿ ಸುಮಾರು ಒಂದು ವಾರದಿಂದಲೇ ನಡೆಯುತ್ತದೆ.

 ಎಲ್ಲರ ಕೈಗಳೂ ಕೇಸರೀಮಯ

ಈಗ ರಕ್ಷೆ ವಿವಿಧ ರೀತೀಯ ಬಣ‍್ಣ ಹಾಗೂ ಆಕೃತಿಯಲ್ಲಿ ದೊರೆಯುತ್ತದೆ. 50 ಪೈಸೆಯಿಂದ ಹಿಡಿದು ಸಾವಿರ ರೂಪಾಯಿಯುಳ‍್ಳ ಬೆಲೆವರೆಗೂ ರಕ್ಷೆ ದೊರೆಯುತ್ತವೆ. ರಕ್ಷಾ ಬಂಧನ ಶಾಲಾ ಕಾಲೇಜು ದಿನಗಳಲ್ಲಿ ಇದ್ದರೆ ಕೇಳಬೇಕಿಲ್ಲ, ಎಲ್ಲರ ಕೈಗಳೂ ಕೇಸರೀಮಯ ಅಥವಾ ವಿವಿಧ ಬಣ‍್ಣಗಳ ರಕ್ಷೆ ತುಂಬಿ ತುಳಿಕುತ್ತಿರುತ್ತದೆ. ಆಮೇಲೆ ಹೆಚ್ಚು ರಕ್ಷೆ ಯಾರ ಕೈಯಲ್ಲಿದೆ ಎಂದು ಲೆಕ್ಕ ಹಾಕುವ ಮಕ್ಕಳ ಖುಷಿ ನೋಡಲು ಎರಡು ಕಣ‍್ಣೇ ಸಾಲದು. ಕಾಲೇಜಿನಲ್ಲಂತೂ ರಕ್ಷೆ ಕಟ್ಟಿಸಿಕೊಂಡ ಹುಡುಗರ ಕಥೆ ಕೇಳುವುದೇ ಬೇಡ. ರಕ್ಷೆ ಕಟ್ಟಿದವರಿಗೆ ಚಾಕ್ಲೇಟ್ ಕಡ್ಡಾಯ. ಇಲ್ಲಾ ಅಂದರೆ ಹುಡುಗಿಯರು ಬಿಡಬೇಕೆ? ಅದು ಅಂತಿಂಥ ಸಾಮಾನ್ಯ ಚಾಕ್ಲೇಟ್ ಅಲ್ಲ ಭಾರೀ ಬೆಲೆ ಬಾಳುವ ಚಾಕ್ಲೇಟ್ ಬೇಕು. ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ಅದರಲ್ಲೂ ತಂಗಿಗೆ ಅಣ‍್ಣ ಪ್ರೀತಿಯಿಂದ ಏನಾದರೂ ಉಡುಗೊರೆ ನೀಡಿ ಶುಭಾಶಯ ಹೇಳುತ್ತಾನೆ. ರಕ್ಷೆ ಕಟ್ಟಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯಿತೇ? ವಾಸ್ತವದಲ್ಲಿ ಜವಾಬ್ದಾರಿ ಅಲ್ಲಿಂದಲೇ ಹೆಚ್ಚುವುದು. ಇತ್ತೀಚಿನ ಕಾಲದಲ್ಲಿ ರಾಖಿ ಕಟ್ಟಲು ಬಂದರೆ ಹುಡುಗರು ಓಡುವುದನ್ನು ನೋಡಿದ್ದೀರಿ..

ಸಹೋದರ-ಸಹೋದರಿಯರಿಯರ ಸಂಬಂಧ

ಹೌದು, ಸಹೋದರ-ಸಹೋದರಿಯರ ಸಂಬಂಧವನ್ನು ಕೊಂಡಾಡುವ ಮತ್ತು ಅದರ ಸ್ವಾದವನ್ನು ಸವಿಯುವ ಹಬ್ಬವೇ ರಕ್ಷಾ-ಬಂಧನ. ಇದನ್ನು ಭಾರತದಲ್ಲಿ ಅಂತೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಅಣ್ಣ-ತಂಗಿಯರ ಮತ್ತು ಅಕ್ಕ-ತಮ್ಮಂದಿರ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡುವ ಹಬ್ಬವಾಗಿರುವುದರಿಂದ, ಈ ಹಬ್ಬದಂದು ಸಹೋದರ-ಸಹೋದರಿಯರು ಪರಸ್ಪರರ ಏಳಿಗೆಯನ್ನು, ಸಂತೋಷವನ್ನು ವ್ಯಕ್ತಪಡಿಸುತ್ತ ಈ ಹಬ್ಬವನ್ನು ಆಚರಿಸುತ್ತಾರೆ.

Related image

‘ರಕ್ಷಣೆಯನ್ನು ನೀಡುವ ಬಂಧನ’

ರಕ್ಷಾ ಬಂಧನ್” ಎನ್ನುವ ಹೆಸರೇ ಸೂಚಿಸುವಂತೆ ಇದು “ರಕ್ಷಣೆಯನ್ನು ನೀಡುವ ಬಂಧನ”. ಈ ಹಬ್ಬದಂದು ಸಹೋದರರು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರೂ ಸರಿ ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಈ ಹಬ್ಬವು ಶ್ರಾವಣ ಪೂರ್ಣಿಮೆಯ ದಿನದಂದು ಬರುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ

ಸಂಸ್ಕೃತಿ, ಆಧ್ಯಾತ್ಮಿಕ ಮೌಲ್ಯ ಮತ್ತು ನೈತಿಕತೆ..

ಪುರಾಣದಲ್ಲಿರುವ ಕಥೆಯೊಂದರ ಪ್ರಕಾರ ರಾಕ್ಷಸರ ವಿರುದ್ಧ ಎಲ್ಲಾ ಯುದ್ಧಗಳನ್ನು ಸೋತು ಬಂದ ಇಂದ್ರ ತನ್ನ ಆತ್ಮವಿಶ್ವಾಸ ಕಳಕೊಂಡು ಖಿನ್ನತೆಗೆ ಒಳಗಾಗಿ ತನ್ನ ಅರಮನೆಗೆ ಬಂದಿದ್ದ. ಈ ವೇಳೆ ಆತನ ಪತ್ನಿ, ತನ್ನ ಗುರುವಿನ ಸಲಹೆಯಂತೆ ಒಂದು ದಾರವನ್ನು ತೆಗೆದುಕೊಂಡು ಅದನ್ನು ಪವಿತ್ರಗೊಳಿಸಿ ಇಂದ್ರನ ಕೈಗೆ ಕಟ್ಟುತ್ತಾಳೆ. ಇದರಿಂದ ಇಂದ್ರನು ಖಿನ್ನತೆಯಿಂದ ಹೊರಬಂದು ರಾಕ್ಷಸರನ್ನು ಸೋಲಿಸುತ್ತಾನೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು.

ಐಕ್ಯತೆ ಮತ್ತು ಬದ್ಧತೆಯನ್ನು ತರುವ ಮೂಲಕ ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಪರಸ್ಪರ ರಕ್ಷಿಸಿಕೊಳ್ಳುವಂತೆ ಮತ್ತು ಸಹಬಾಳ್ವೆಯನ್ನು ನಡೆಸಲು ಪ್ರೇರೇಪಿಸುವ ಸಲುವಾಗಿ ಇದನ್ನು ಅವರು ಆಚರಣೆಗೆ ತಂದರು. ಇಂದಿನ ದಿನಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಈ ಸಂದರ್ಭವು ಈಗಿನ ಕಾಲದಲ್ಲಿ ನೈತಿಕತೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಈ ಹಬ್ಬದಲ್ಲಿ ಆಚರಿಸಲಾಗುವ ಮೌಲ್ಯಗಳು ಮತ್ತು ಆಚರಣೆಗಳು ಮಾನವನಿಗೆ ಅತ್ಯಂತ ಅವಶ್ಯಕವಾಗಿವೆ. ಶಾಂತಿ ಮತ್ತು ಸಹಬಾಳ್ವೆಯ ಮೌಲ್ಯವು ಮನುಷ್ಯನಿಗೆ ತೀರಾ ಅಗತ್ಯ. ರಕ್ಷಾ ಬಂಧನವು ಅದನ್ನು ಸಾರಿ ಹೇಳುತ್ತದೆ. ಇದು ಪಾಪಗಳನ್ನು ತೊಡೆದು ಹಾಕುವುದರ ಮೂಲಕ ರಕ್ಷಣೆಯ ಭರವಸೆಯನ್ನು ನೀಡುತ್ತದೆ. ರಕ್ಷಾ ಬಂಧನದ ನೆಪದಲ್ಲಾದರೂ ದೂರ ದೂರ ಇರುವ ಸಹೋದರ-ಸಹೋದರಿಯರು ಪರಸ್ಪರ ಒಟ್ಟಿಗೆ ಒಂದು ಆಚರಣೆಗಾಗಿ ಸೇರುವ ನೆಪ ದೊರೆಯುತ್ತದೆ.

   ಸುಹಾನಿ.ಬಡೆಕ್ಕಿಲ

 

Tags