ಚಿತ್ರ ವಿಮರ್ಶೆಗಳುಸಂಬಂಧಗಳುಸುದ್ದಿಗಳು

ಎದೆ ಝಲ್ಲೆನಿಸುವ …ಆ ಎಂಟು ಬುಲೆಟ್ ಗಳು..!?! ..ಓ… ಸ್ಸಾರಿ..! “8 ಎಂಎಂ’ ಪಿಸ್ತೂಲು..!!

ವಿಭಿನ್ನ ಪಾತ್ರದಲ್ಲಿ 'ಸೈ' ಎನಿಸಿಕೊಂಡಿರುವ  ನವರಸ ನಾಯಕ ಜಗ್ಗೇಶ್‌

 

ಬೆಂಗಳೂರು, ನ-20: ಸದಾ ಜನಸಾಮಾನ್ಯರೊಡನೆ, ಸಮಾಜದ ಸಮಸ್ಯೆಗಳೊಡನೆ ಗುರುತಿಸಿಕೊಳ್ಳುವ ಚಂದನವನದ ನಟ ಜಗ್ಗೇಶ್ ತಮ್ಮ ಬೆಳ್ಳಿಬದುಕಿನಲ್ಲಿ ಅಂತೂ ತೀವ್ರ ತಿರುವು ಪಡೆದುಕೊಂಡಿದ್ದಾರೆ. ‘ನೀರ್‌ ದೋಸೆ’ ಚಿತ್ರದ ನಂತರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ  ನವರಸ ನಾಯಕ ಜಗ್ಗೇಶ್‌ ಮೊನ್ನೆ ಬಿಡುಗಡೆಯಾಗಿರುವ  ಕನ್ನಡ ಚಿತ್ರ  ‘8 ಎಂಎಂ’ ಮೂಲಕ ಕ್ರೈಂ ಥ್ರಿಲ್ಲರ್ ನ ಹೊಸ ಜೋನರ್ ನಲ್ಲಿ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕಳೆದ ಶುಕ್ರವಾರ ತೆರೆಕಂಡ  ಜಗ್ಗೇಶ ರ ‘8 ಎಂಎಂ’ ಕನ್ನಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ದಿನಗಳೆರಡೇ ಬೇಕಾಯ್ತು. ಭಾನುವಾರದ  ಹೊತ್ತಿಗೆ  ರಾಜಧಾನಿ ಮೊದಲ್ಗೊಂಡು  ಬಿ,ಸಿ, ಕೇಂದ್ರಗಳಲ್ಲೂ ಸಾವಕಾಶವಾಗಿ  ‘ಬಿಸಿ’ ಏರತೊಡಗಿದ್ದು ಜಗ್ಗೇಶ್  ರ ಮನಸ್ಸು  ಕೊಂಚ  ನಿರಾಳವಾಯ್ತೇನೋ ..!

“8 ಎಂಎಂ’ ತಮಿಳಿನ 8 ತೋಟಕಳ್’  ಚಿತ್ರದ ಕನ್ನಡ ಅವತರಣಿಕೆ..! ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು  ನಿರ್ದೇಶಕ  ಹರಿಕೃಷ್ಣ ರವರು ಚಿತ್ರಕ್ಕೆ ‘ಆಕ್ಷನ್ ಕಟ್’ ಹೇಳಿದ್ದಾರೆ. ನಾರಾಯಣ ಸ್ವಾಮಿ- ಸಲೀಮ್‌ ಶಾ -ಇನ್ಪೆಂಟ್ ಪ್ರದೀಪ್‌,  ಎಂಬ ಅಮರ್-ಅಕ್ಬರ್-ಆಂಟೊನಿ , ಕೂಡಿಕೊಂಡು  ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ಮಯೂರಿ, ರಾಕ್‍ಲೈನ್ ವೆಂಕಟೇಶ್  ಸೇರಿದಂತೆ ಬಹುದೊಡ್ಡ ತಾರಾಗಣವೇ ‘8 ಎಂ.ಎಂ’ ನೊಳಗಿದೆ.

ತಮಿಳು-ಮಲಯಾಳಂ-ಕೊಡವ  ಮುಂತಾದ ದ್ರಾವಿಡ ಭಾಷೆಗಳಲ್ಲಿ ‘ತೋಟಕಳ್’  ಅಥವಾ ‘ತೋಟ’ ಅಂದರೆ ಗುಂಡು…ತುಫಾಕಿಯೊಳಗಿನ ಗುಂಡು…ಬುಲೆಟ್!  ನೂರಾರು ಸಿನೆಮಾಗಳಲ್ಲಿ  ತನ್ನ ಮೋಜು-ಮಜಾಕು ಗಳಿಂದ ಪ್ರೇಕ್ಷಕರನ್ನು ನಕ್ಕುನಗಿಸಿರುವ  ಕಾಮೆಡಿ ಕಿಂಗ್ ಜಗ್ಗೇಶ್ ಇದೀಗ  ಥ್ರಿಲ್ಲರ್ ಜೋನರ್ ನಲ್ಲಿ ಸೈ ಎನಿಸಿಕೊಳ್ಳುವಷ್ಟು ತಮ್ಮ ಅಭಿನಯ ಪ್ರದರ್ಶನವನ್ನಿತ್ತಿದ್ದಾರೆ! ಕುತೂಹಲಕಾರಿಯಾಗಿಯೇ, ‘8 ಎಂಎಂ’ನಲ್ಲಿ ಜಗ್ಗೇಶ್ ಪಾತ್ರಕ್ಕೆ ಸ್ತ್ರೀಜೋಡಿಯೇ ಇಲ್ಲ!  ಒಂದೆಡೆ ವಸಿಷ್ಠ-ಮಯೂರಿ  ನಾಯಕ-ನಾಯಕಿಯಾಗಿ  ತಮ್ಮ ಜೋಡಿಯನ್ನು ನಿಭಾಯಿಸಿದ್ದರೆ ಅವರ ಅಪ್ಪನಾಗಿ ಈ ಪೋಲೀಸ್ ಪ್ಯಾದೆ ಭೂಮಿಕೆ ಪಡೆದುಕೊಳ್ತಾರೆ!

ಒಮ್ಮೆ ಹೆಂಡತಿಯಿಲ್ಲದ  ಇವಗೆ ಚಿಂತೆಯೊಂದು ಕಾಡಲಾರಂಭಿಸಿ ಮಕ್ಕಳಿಗೆ ಆಸ್ತಿಮಾಡಿಹೋಗದ ತಂದೆಯ ತಿಥಿಯನ್ನೂ ಮಾಡಲಾರರೇನೋ ಎಂಬ ಭಯದಿಂದ ಬ್ಯಾಂಕೊಂದರ ತಿಜೋರಿಯನ್ನು ಲೂಟಿಮಾಡಿಯಾದರೂ ಮಕ್ಕಳಿಗೆ ಆಸ್ತಿ-ಪಾಸ್ತಿ ಕೊಡುವ ಸಂದರ್ಭ..! ಅತ್ತ ಪೊಲೀಸ್ ಇಲಾಖೆಯಿಂದ ವಜಾ ಆದ ಇನ್ಸ್ಪೆಕ್ಟರ್ ನ  ಕಳುವಾದ  ಪಿಸ್ಟಲ್ ..!? ಹೇಗಾಯ್ತು..? ಏನಾಯ್ತು..? ಇದನ್ನು ತಿಳಿಯಲು ನೀವು ‘8 ಎಂಎಂ’ ಸಿನೆಮಾ ನೋಡಲೇ ಬೇಕು. ಜಗ್ಗೇಶ್ ರವರ ಕ್ರೈಂ-ಥ್ರಿಲ್ಲರ್ ನ್ನು ಸವಿಯಲೇಬೇಕು..!

ಸದ್ಯ ಭಾಜಪದ ರಾಜ್ಯಾಧ್ಯಕ್ಷ  ಯಡಿಯೂರಪ್ಪನವರೂ ಇಂದು  ರಾಜಧಾನಿಯ ರಾಜಾಜಿನಗರದ ಒರಾಯಿನ್ ಮಾಲ್ ನಲ್ಲಿ ‘8 ಎಂಎಂ’ ನೋಡುತ್ತಿದ್ದಾರೆ. ಅದೇ ಪಕ್ಷದಲ್ಲಿ ದಶಕಗಳಿಂದ  ಗುರುತಿಸಿಕೊಂಡಿರುವ ಜಗ್ಗೇಶ್ ರಿಗೂ ಇದೊಂದು ಹೆಗ್ಗಳಿಕೆಯೇ ಸರಿ!

-ಡಾ. ಪಿ.ವಿ. ಸುದರ್ಶನ್ ಭಾರತೀಯ, 7022274686, editor@balkani.com

 

Tags

Related Articles