ಜೀವನ ಶೈಲಿಸಂಬಂಧಗಳು

ಪ್ರೀತಿ ಹೂವು ಬಾಡದಿರಲಿ!!

ಮನುಷ್ಯನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಇರುವುದು ಸಂಬಂಧಗಳಿಗೆ. ಸ್ನೇಹ ಸಂಬಂಧ, ಪ್ರೀತಿ ಸಂಬಂಧ, ಪೋಷಕರ ಮತ್ತು ಮಕ್ಕಳ ಸಂಬಂಧ, ಗಂಡ ಹೆಂಡತಿಯರ ಸಂಬಂಧ ಹೀಗೆ ಸಂಬಂಧಗಳು ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಸಂಬಂಧವನ್ನು ಬೆಳೆಸುವುದು ದೊಡ್ಡ ಸಂಗತಿಯಲ್ಲ, ಬದಲಿಗೆ ಅದನ್ನು ಉಳಿಸಿಕೊಂಡು, ಸುಂದರವಾದ ಜೀವನ ಸಾಗಿಸುವುದರೆ ಅಂತಹ ಸಂಬಂಧಕ್ಕೆ ಒಂದು ಅರ್ಥ ಇರುವುದಲ್ಲದೆ ಆ ಸಂಬಂಧಕ್ಕೆ ಒಂದು ಮೌಲ್ಯವೂ ಇರುತ್ತದೆ.

ಹಲವು ವರುಷಗಳಿಂದ ಪ್ರೀತಿಸಿ, ಮೆಚ್ಚಿ ಮದುವೆಯಾದ ಜೋಡಿಗಳು ಕೊನೆಗೆ ಬಂದು ನಿಂತಿರುವುದು ವಿಚ್ಛೇದನ ಎಂಬ ಮೆಟ್ಟಿಲ ಮೇಲೆ. ಅಂದ ಮೇಲೆ ಇಷ್ಟು ವರುಷ ಇಷ್ಟ ಪಟ್ಟ ಪ್ರೀತಿ ಕ್ಷಣ ಮಾತ್ರದಲ್ಲೇ ಮಾಯವಾಯಿತೇ? ಎರಡು ಹೃದಯಗಳ ನಡುವಿರುವ ಉತ್ತಮ ಬಾಂಧವ್ಯವೇ ಕೆಲವೊಮ್ಮೆ ಮುಳುವಾಗಿ ಸಂಸಾರವನ್ನೇ ಅಲುಗಿಸುವಂತೆ ಮಾಡಬಹುದು. ಸಾವಿರಾರು ಸುಖದ ಕ್ಷಣಕ್ಕಿಂತ ಒಂದೆರಡು ಬಾರಿ ಕಾಡಿದ ಕಹಿ ನೆನಪುಗಳೇ ದೊಡ್ಡದಾಗಿ ಬಿಡುತ್ತವೆ. ಸಣ್ಣ ಸಣ್ಣ ವಿಚಾರಗಳೂ ಕೂಡ ಮನಸ್ಸನ್ನು ಘಾಸಿಗೊಳಿಸುತ್ತವೆ. ಇಂತಹ ಸಮಸ್ಯೆಯಿಂದ ಸದಾ ಕಾಲ ನೆಮ್ಮದಿ ಕಳೆದುಕೊಳ್ಳುವದರ ಬದಲು ಅಂತಹ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದು ನಿಜಕ್ಕೂ ಜಾಣತನ.

ಗಂಡ ಹೆಂಡತಿಯರ ಮಧ್ಯೆ ಮನಸ್ತಾಪ ಮೂಡಲು ಮೊದಲ ಕಾರಣ ಸಂವಹನ ಕೊರತೆ. ಸಂವಹನ ಕೊರತೆಯಿಂದಾಗಿ ಮನಸ್ಸಿನ ಭಾವನೆಗಳನ್ನಾಗಲೀ, ಮನದ ಮಾತುಗಳನ್ನಾಗಲೀ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಂದರ್ಭ ಮಾಯವಾಗಿಬಿಡುತ್ತದೆ. ಇದರಿಂದ ಸಂಬಂಧ ಹಳಸುತ್ತದೆ ಮತ್ತು ಮತ್ತೆ ಅದನ್ನು ಸರಿ ದಾರಿಗೆ ತರಲು ಹರಸಾಹಸ ಮಾಡಬೇಕಾಗುತ್ತದೆ. ಬದಲಿಗೆ ಸಂವಹನಕ್ಕೆ ಹೆಚ್ಚಿನ ಸಮಯ ನೀಡಿ. ಕಡೇ ಪಕ್ಷ ದಿನಕ್ಕೆ ಅರ್ಧ ಗಂಟೆಯಾದರೂ ಗಂಡ ಹೆಂಡತಿ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಾ, ಆ ದಿನದ ಆಗು ಹೋಗುಗಳನ್ನು ಮಾತನಾಡುತ್ತಾ ಸಮಯ ಕಳೆದರೆ ಸಂಸಾರ ಹಾಲು ಜೇನಿನಂತೆ ಸೊಗಸಾಗಿರುತ್ತದೆ.

ಕೆಲವೊಂದು ಗುಟ್ಟಿನ ವಿಚಾರಗಳು ಕೂಡ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಬಹುದು. ಯಾವುದಾದರೂ ಗುಟ್ಟಿನ ವಿಚಾರಗಳನ್ನು ಈಗಾಗಲೇ ಮುಚ್ಚಿಟ್ಟಿದ್ದರೆ ಅದನ್ನು ಹೇಳಬಹುದಾದ ಸಮಯ ನೋಡಿ, ತಿಳಿಸಿ ಬಿಡುವುದು ಒಳ್ಳೆಯದು. ಮುಂದೆ ಅದು ಬೇರೆಯವರಿಂದ ಗೊತ್ತಾದರೆ ನಿಮ್ಮ ಮೇಲಿರುವ ನಂಬಿಕೆ ಕರಗಿಹೋಗುತ್ತದೆ. ಆದುದರಿಂದ ಅಂತಹ ಗುಟ್ಟುಗಳನ್ನು ಮನಸ್ಸಿನಲ್ಲಿ ಬಂಧಿಸುವುದಕ್ಕಿಂತ ಬಹಿರಂಗಪಡಿಸುವುದೇ ಒಳ್ಳೆಯದು. ಇದರಿಂದ ನಂಬಿಕೆ ಉಳಿಯುತ್ತದೆ.

ಯಾವುದೇ ವಿಚಾರವಾಗಿರಲೀ, ಗಂಡ ಹೆಂಡತಿ ಕುಳಿತು ಮಾತನಾಡಿ ನಿರ್ಧಾರ ತೆಗೆದುಕೊಂಡರೆ ಮುಂದೆ ಯಾವುದೇ ಸಮಸ್ಯೆ ಬರುವುದಿಲ್ಲ. ಬದಲಿಗೆ ನಾನೇನು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕಡಿಮೆ ಇಲ್ಲ ಎಂದು ಅವಸರದ ನಿರ್ಧಾರ ತೆಗೆದುಕೊಂಡರೆ ಮುಂದೆ ಪಶ್ಚಾತ್ತಾಪ ಪಡುವ ಸಂಭವ ಬರಬಹುದು. ಆದುದರಿಂದ ಆಲೋಚಿಸಿ ಹೆಜ್ಜೆ ಇಟ್ಟರೆ ಉತ್ತಮ. ಮದುವೆ ಎನ್ನುವುದು ಎರಡು ಹೃದಯಗಳ, ಮನಸ್ಸುಗಳ ನಡುವಿನ ಸಂಬಂಧ. ಅವರಿಬ್ಬರೂ ಜೊತೆಜೊತೆಯಲಿ ಹೊಂದಿಕೊಂಡು ಹೋಗಬೇಕಾದುದು ಅನಿವಾರ್ಯ. ಆದರೆ ಇಬ್ಬರಲ್ಲಿ ಯಾರಾದರೂ ಒಬ್ಬರೂ ಹೊಂದಾಣಿಕೆ ಮಾಡಿಕೊಳ್ಳದೆ ತನಗೆ ಬೇಕಾದ ಹಾಗೆ ನಡೆದರೆ ಸಮಸ್ಯೆಗಳ ಸರಮಾಲೆ ಎದುರಿಸಬೇಕಾಗಬಹುದು. ಅದರ ಬದಲಿಗೆ ಹೊಂದಾಣಿಕೆಯಾದರೆ ಬೇರೆ ಯಾವ ಚಿಂತೆಯೂ ಇಲ್ಲ.

ಸಂಸಾರ ಬಂಧನಗಳು ಕಡಿದು ಬೀಳುತ್ತವೆ ಎನ್ನುವ ಸೂಚನೆಯನ್ನು ನಾವು ಮೊದಲೇ ತಿಳಿದುಕೊಂಡರೆ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಇದರಿಂದ ಸಂಸಾರ ಸುಖಮಯವಾಗಿರುವುದಲ್ಲದೇ ಪ್ರೀತಿಯು ಉಳಿಯುತ್ತದೆ.

  • ಅನಿತಾ ಬನಾರಿ

 

Tags