ಆರೋಗ್ಯಆಹಾರಜೀವನ ಶೈಲಿ

ಬಿರು ಬೇಸಿಗೆಗೆ ಒಳ್ಳೆಯದು ಕರ್ಬೂಜ

ಬೆಂಗಳೂರು, ಮಾ.19:

ಬೇಸಿಗೆ ಕಾಲ ಶುರುವಾಗುತ್ತಿದೆ. ಅನುಭವಿಸದೇ ಬೇರೆ ದಾರಿ ಇಲ್ಲ. ಬಿಸಿಲಿನ ಬೇಗೆಗೆ ಮನೆಯಿಂದ ಹೊರ ಹೋಗುವುದೆಂದರೆ ನಿಜಕ್ಕೂ ಸವಾಲಿನ ಸಂಗತಿ. ಬಿಸಿಲಿನ ಧಗೆಗೆ ಗಂಟಲು ಪಸೆ ಆರಿ ಹೋಗುತ್ತದೆ. ಎಷ್ಟು ನೀರು ಕುಡಿದರೂ ಸಾಕಾಗುವುದಿಲ್ಲ. ಮತ್ತೂ ಮತ್ತೂ ಕುಡಿಯಬೇಕು ಎನಿಸುತ್ತದೆ.

ಇಂತಹ ಸುಡುವ ಬಿಸಿಲಿಗೆ ಕರಬೂಜ ಹಣ್ಣಿನ ಸೇವನೆ ಕೊಂಚ ಮಟ್ಟಿಗೆ ದೇಹವನ್ನು ಹಾಯಾಗಿಡುವಂತೆ ಮಾಡುತ್ತದೆ. ಬರೀ ದೇಹದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದಲೂ ಕರಬೂಜ ಹಣ್ಣು ಪ್ರಯೋಜನಕಾರಿ.

ದಣಿದ ದೇಹಕ್ಕೆ ಹೊಸ ಉತ್ಸಾಹ ನೀಡುವ ನೀಡುವ ಕರಬೂಜ ಹಣ್ಣು ಕುಕರ್ಬಿಟೇಯಿಸಿ ಕುಟುಂಬಕ್ಕೆ ಸೇರಿದೆ. ಶೇ.90 ಕ್ಕೂ ಅಧಿಕ ನೀರಿನ ಅಂಶ ಹೊಂದಿರುವ ಕರಬೂಜ ಹಣ್ಣು ಬಿಸಿಲಿನ ಆಯಾಸ, ಸುಸ್ತು ನಿವಾರಿಸುತ್ತದೆ. ಜೊತೆಗೆ ಸದಾ ಕಾಲ ದೇಹವನ್ನು ತಂಪಾಗಿ ಇಡುತ್ತದೆ.

ತಿನ್ನಲು ರುಚಿರುಚಿಯಾದ ಈ ಹಣ್ಣು ಕೇವಲ ಬಾಯಾರಿಕೆ ನೀಗಿಸುವುದು ಮಾತ್ರವಲ್ಲ, ಹಲವು ರೋಗಗಳಿಗೆ ರಾಮಬಾಣ. ಪೌಷ್ಟಿಕಾಂಶಗಳಿಂದ ಕೂಡಿದ ಕರಬೂಜ ಹಣ್ಣು ಹಲವಾರು ಜೀವಸತ್ವಗಳನ್ನು ಒಳಗೊಂಡಿದೆ. ದೇಹಕ್ಕೆ ಅಗತ್ಯವಿರುವಂತಹ ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂಗಳನ್ನು ಇದು ಒಳಗೊಂಡಿದೆ. ಇದರಲ್ಲಿ ಎ ಜೀವಸತ್ವ ಅಧಿಕ ಪ್ರಮಾಣದಲ್ಲಿರುವುದರಿಂದ ಕಣ್ಣಿನ ದೋಷಗಳು ನಿವಾರಣೆಯಾಗುತ್ತದೆ. ಮತ್ತೆ ಕಣ್ಣಿನ ಪೊರೆ ಸಮಸ್ಯೆ ಬಾರದಂತೆ ಇದು ತಡೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕರಬೂಜ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಅಗತ್ಯವಿರುವಂತಹ ಬಿಳಿರಕ್ತಕಣಗಳ ಸಂಖ್ಯೆಗಳನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಹೊಟ್ಟೆಯುರಿ. ಕರಬೂಜ ಹಣ್ಣಿಗೆ ಹೊಟ್ಟೆಯುರಿ ಕಡಿಮೆ ಮಾಡುವ ಗುಣವಿದೆ. ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಮೂತ್ರಕೋಶ ಸಂಬಂಧಿ ಕಾಯಿಲೆ, ಹೃದ್ರೋಗವನ್ನು ದೂರ ಇಡುವ ಶಕ್ತಿ ಇದಕ್ಕಿದೆ.

ಪ್ರಸ್ತುತ ಕಾಲದಲ್ಲಿ ಡಯಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತಿನ್ನಬೇಕು ಎಂದೆನಿಸಿದರೂ ತಿನ್ನಲು ಭಯ. ಕಾರಣ ತೂಕ ಜಾಸ್ತಿ ಎಂಬ ಚಿಂತೆ! ಹಾಗಿದ್ದವರೂ ಇನ್ನೂ ಭಯಪಡಬೇಕಾಗಿಲ್ಲ. ಕರಬೂಜದಲ್ಲಿ ಕ್ಯಾಲರಿ ಅಂಶ ಕಡಿಮೆಯಿರುವುದರಿಂದ ಇದನ್ನು ನಿರಾಳವಾಗಿ ಸೇವಿಸಬಹುದು. ಇದರಲ್ಲಿ ಅಧಿಕವಾಗಿರುವ ನೀರಿನ ಅಂಶವು ಹೊಟ್ಟೆ ತುಂಬಿಸುತ್ತದೆ. ಮಾತ್ರವಲ್ಲ ಬಾಯಾರಿಕೆಯನ್ನು ನೀಗಿಸುತ್ತದೆ. ಮತ್ತೆ ಹಸಿವಾದಾಗ ಕರಬೂಜ ತಿನ್ನುವುದರಿಂದ ಕೊಬ್ಬಿನ ಅಂಶವಿರುವ ಆಹಾರಗಳಿಂದ ದೂರವಿರಬಹುದು. ಇದರಿಂದಾಗಿ ದೇಹದಲ್ಲಿ ಕೊಬ್ಬು ಶೇಖರಣೆ ಆಗುವುದು ತಪ್ಪುತ್ತದೆ.

ಸೌಂದರ್ಯವರ್ಧಕವೂ ಆಗಿರುವ ಕರಬೂಜವನ್ನು ಸೇವಿಸುವುದರಿಂದ ತ್ವಚೆಯ ತಾಜಾತನವನ್ನು ಕಾಪಾಡಿಕೊಳ್ಳಬಹುದು.

ಎಲ್ಲರೂ ತಿನ್ನಲೇ ಬೇಕಾದ ಈ ಹಣ್ಣು ದೇಹದ ಸುಸ್ತು ಮರೆಮಾಡಿ ಸದಾ ಕಾಲ ದೇಹ ಚೈತನ್ಯದಿಂದ ಇರುವಂತೆ ಮಾಡುತ್ತದೆ.

–  ಅನಿತಾ ಬನಾರಿ

ಬೇಸಿಗೆಯಲ್ಲಿ ಹೀಗಿರಲಿ ತ್ಚಚೆಯ ಆರೈಕೆ

#kharbujafruits #summer #summerjuice #juices #kharbujafruitjuice

Tags