ಜೀವನ ಶೈಲಿಫ್ಯಾಷನ್

ಬಣ್ಣಬಣ್ಣದ ಕೊಡೆಗಳ ಮೇಲೆ ಮಳೆಹನಿಗಳ ಚಿತ್ತಾರ

ಬೆಂಗಳೂರು, ಏ.11:

ಮಳೆ ಬಂತೆಂದರೆ ಏನೋ ಒಂದು ರೀತಿಯ ಸಂಭ್ರಮ. ಮಳೆ ಬರುವ ಮೊದಲೇ ಮೋಡ ಆವರಿಸುವುದು, ನಂತರ ಗಾಳಿ, ಧೂಳು ಮತ್ತೆ ಹಾಯಾಗಿ ಬೀಸುವ ತಂಗಾಳಿ…ಕಡೆಗೆ ಹಂಚಿನ ಮೇಲಿನಿಂದ ನೀರು ಪಿಟಿಪಿಟಿಯಾಗಿ ಇಳಿಯುತ್ತಿದ್ದರೆ ಲೈಫೇ ರಿಫ್ರೆಶ್ ಆದಂತೆ ಅನಿಸುತ್ತದೆ.

ಮಳೆಗಾಲ ಎಂದ ಕೂಡಲೇ ಮೊದಲು ನೆನಪಾಗುವುದು ಕೊಡೆ. ಮೋಡ ಕವಿದೊಡನೆ ಕೊಡೆ ಎಲ್ಲಿಟ್ಟೆಪ್ಪಾ ಎಂದು ಆಲೋಚಿಸುವವರೇ ಹೆಚ್ಚು. ಮೂರು ನಾಲ್ಕು ತಿಂಗಳ ಕಾಲ ಕಪಾಟಿನ ಒಳಗೆ ಮುದುಟಿ ಕುಳಿತಿರುವ ಕೊಡೆಗಳಿಗೂ ಈಗ ಸಂಭ್ರಮಿಸುವ ಕಾಲ. ಮಳೆಯ ಸಿಂಚನದಿಂದ ಅವುಗಳ ಮೇಲೆ ಆವರಿಸಿರುವ ಧೂಳು ಕೂಡಾ ಮಾಯವಾಗುತ್ತದೆ. ಇನ್ನೂ ಮಾಲ್, ಫ್ಯಾನ್ಸಿ ಸ್ಟೋರ್ ಗಳಲ್ಲೂ ಕೊಡೆಗಳದ್ದೇ ಕಾರುಬಾರು. ಅಷ್ಟೇ ಏಕೆ, ರಸ್ತೆ ಬದಿಯಲ್ಲೂ ವ್ಯಾಪಾರಸ್ಥರು ತಮ್ಮ ಗ್ರಾಹಕರಿಗೆ ಬೇಕಾದ ಬಣ್ಣ ಬಣ್ಣದ, ನಾನಾ ತರದ ಕೊಡೆಗಳನ್ನು ಮಾರಾಟ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ.

ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆಯಿಂದ ರಕ್ಷಣೆ ಪಡೆಯುವ ಸದುದ್ದೇಶಕ್ಕಾಗಿ ಕೊಡೆಯನ್ನು ಉಪಯೋಗಿಸುತ್ತೇವೆಯೇನೋ ನಿಜ. ಆದರೆ ಇದೀಗ ಕೊಡೆಯಲ್ಲೂ ಫ್ಯಾಷನ್ ಹಂಗಾಮ ಆರಂಭವಾಗಿದೆ ಎಂಬುದು ಸುಳ್ಳಲ್ಲ. ಹಿಂದಿನ ಕಾಲದಲ್ಲಿ ಅಜ್ಜಂದಿರು, ವಯಸ್ಸಾದವರು ಹಿಡಿಯುತ್ತಿದ್ದ ಉದ್ದದ ಕೊಡೆ ಮತ್ತೊಮ್ಮೆ ಪ್ಯಾಷನ್ ನ ರೂಪದಲ್ಲಿ ಮರಳಿ ಬಂದಿದೆ. ನಾಲ್ಕೈದು ವರುಷಗಳ ಹಿಂದೆ ಬಂದ ಈ ಕೊಡೆ ಈಗಿರುವುದು ಕಾಲೇಜು ಲಲನೆಯರ ಕೈಯ್ಯಲ್ಲಿ. ಹಿಡಿದುಕೊಳ್ಳಲು ಕಷ್ಟವಾದರೂ ಸರಿ, ಅದನ್ನು ಹಿಡಿದು ನಡೆಯುವ ಗತ್ತೇ ಬೇರೆ. ಕೆಂಪು, ಪಿಂಕ್, ನೀಲಿ, ನೇರಳೆ ಬಣ್ಣಗಳೊಂದಿಗೆ ನಾನಾ ನಮೂನೆಯ ಡಿಸೈನ್ ಗಳಿರುವ ಕೊಡೆಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

ಇದರ ಹೊರತಾಗಿ ಥ್ರೀ ಪೋಲ್ಡ್, ಟು ಪೋಲ್ಡ್ ಕೊಡೆಗಳು ಕೂಡಾ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಟು ಫೋಲ್ಡ್ ಕೊಡೆಗಳನ್ನು ಹೆಚ್ಚಾಗಿ ವಯಸ್ಸಾದವರು ಮತ್ತು ಹುಡುಗರು ಹಿಡಿಯುವ ಕಾರಣ ಅದರಲ್ಲಿ ಕಪ್ಪು ಬಣ್ಣದ ಕೊಡೆಗಳಿಗೆ ಬೇಡಿಕೆ ಜಾಸ್ತಿ. ಯಾಕೆಂದರೆ ಅವರು ಬಣ್ಣಗಳನ್ನು ಇಷ್ಟಪಡುವುದು ಕಡಿಮೆ.

ಹೇಳಿ ಕೇಳಿ ಇದು ಶಾಲೆ ಆರಂಭವಾಗುವ ಸಮಯ. ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಗೆ ಹೋಗುವ ಸಂಭ್ರಮ ಒಂದೆಡೆಯಾದರೆ ಪಿಟಿಪಿಟಿ ಎಂದು ಧುಮ್ಮಿಕ್ಕುವ ಮಳೆಗೆ ಕೊಡೆ ಹಿಡಿದುಕೊಂಡು ಹೋಗುವ ಖುಷಿಯೇ ಬೇರೆ. ಮಕ್ಕಳ ಕೊಡೆಯಲ್ಲೂ ಅಷ್ಟೇ. ಇದೀಗ ತರತರದ ವಿನ್ಯಾಸದ ಕೊಡೆಗಳು ಲಭ್ಯ. ಡೊರೆಮಾನ್, ಮಿಕ್ಕಿ ಮೌಸ್, ಪ್ರಾಣಿ, ಪಕ್ಷಿ ಹೀಗೆ ಮಕ್ಕಳ ಮನ ಸೂರೆಗೊಳ್ಳುವಂತಹ ಕೊಡೆಗಳು ಇದೀಗ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಇದರ ಜೊತೆಗೆ ಬೆಕ್ಕು, ಸಿನಿಮಾ ಚಿತ್ರ ಹೊಂದಿದ ಕೊಡೆಗಳ ಮೇಲೆ ಕಿವಿಗಳಂತೆ ವಿನ್ಯಾಸ ಬಂದು ಮಕ್ಕಳನ್ನು ಮೋಡಿ ಮಾಡಿಬಿಟ್ಟಿರುವುದು ಸುಳ್ಳಲ್ಲ.ಹೆಚ್ಚಿನವರು ಕೊಡೆಯನ್ನು ಮಳೆಗಾಲದಲ್ಲಿ ಉಪಯೋಗಿಸಿ ಮತ್ತೆ ಮೂಲೆಗುಂಪು ಮಾಡಿಬಿಡುತ್ತಾರೆ. ಮತ್ತೆ ಅವರಿಗೆ ತಮ್ಮ ಕೊಡೆಯ ನೆನಪಾಗುವುದು ಮಗದೊಮ್ಮೆ ಮಳೆ ಸುರಿದಾಗ. ಕೊಡೆಯು ಬರೀ ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ಸಹಾಯಕ್ಕೆ ಬರುತ್ತದೆ. ಸುಡುವ ಬಿಸಿಲಿನಿಂದ ರಕ್ಷಿಸುವ ಕೊಡೆಯನ್ನು ನಿರ್ಲಕ್ಷಿಸುವವರೇ ಹೆಚ್ಚು. ಬದಲಿಗೆ ಅದನ್ನು ಜಗ್ರತೆಯಿಂದ ನೋಡಿಕೊಂಡರೆ ಕಡ್ಡಿಗಳು ತುಕ್ಕು ಹಿಡಿಯದಂತೆ, ಕೊಡೆಯ ಬಟ್ಟೆ ಹರಿಯದಂತೆ ಕಾಪಾಡಿಕೊಳ್ಳಬಹುದು.

–  ಅನಿತಾ ಬನಾರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾಲಿವುಡ್ ನಟ ಸನ್ನಿ!!

#balkaninews #umbrella #umbrellaimages #umbrellacliparts #umbrellarainy #umbrellasummer

Tags