ಜೀವನ ಶೈಲಿಬಾಲ್ಕನಿಯಿಂದಸುದ್ದಿಗಳು

“..ಸಿನೆಮಾ ಒಂದು ಕಲಾಕೃತಿ..! ಪ್ರೇಕ್ಷಕರು ಆ ಕಲೆಯ ಪರಿಗಣಿಸಬೇಕಾದ ರೀತಿ ಕಲಿಸುತ್ತೇವೆ..!!”

ಚಲನಚಿತ್ರ ರಸಗ್ರಹಣ ಶಿಬಿರ–ನವೆಂಬರ್ 10-14, ವಾರ್ತಾ“ವಾರ್ತಾ ಸೌಧ” ದ ‘ಸುಲೋಚನಾ’ಸಭಾಂಗಣ

ಬೆಂಗಳೂರು, ನ-12: ರಾಜಧಾನಿಯ ಭಗವಾನ್ ಮಹಾವೀರ್ ರಸ್ತೆಯಲ್ಲಿನ ‘ವಾರ್ತಾ ಸೌಧ’ ಭಾನುವಾರವೂ ಗಿಜಿಗುಟ್ಟುತ್ತಿತ್ತು. ಕಾರಣವೋ ಅಸಾಮಾನ್ಯ! ಮಹಾರಾಷ್ಟ್ರ ರಾಜ್ಯದ ಪುಣೆಯಿಂದ ರಾಷ್ಟ್ರೀಯ ಫಿಲಂ ತರಬೇತಿ ಸಂಸ್ಥೆಯಿಂದ ಆಗಮಿಸಿದ ಇಬ್ಬರು ನುರಿತ ಫಿಲಂ ತರಬೇತಿ ತಜ್ಞರಿಂದ ಅಲ್ಲಿ ಜಮಾಯಿಸಿದ್ದ ಸುಮಾರು ನೂರು ಮಂದಿ ಫಿಲ್ಮಾಸಕ್ತರಿಗೆ 5 ದಿನಗಳ ವಿಶೇಷ “ಚಲನಚಿತ್ರ ರಸಗ್ರಹಣ ಶಿಬಿರ” ಜಾರಿಯಲ್ಲಿತ್ತು. ವಿಷಯತಜ್ಞರಾದ ಪುಣೆಯ ಫಿಲಂ ತರಬೇತಿ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪಂಕಜ್ ಸಕ್ಸೇನಾ, ಬಾಲ್ಕನಿ ನ್ಯೂಸ್ ಒಡನೆ ಶಿಬಿರದ ಕುರಿತು ಮಾತಾಡುತ್ತಾ 

ಈ ಪ್ರಸಕ್ತ ಶಿಬಿರದಿಂದ ಫಲಾನುಭವಿಗಳಾಗಲಿರುವ ಫಿಲ್ಮಾಸಕ್ತರು ಯಾವುದೇ ಸಿನಿಮಾವನ್ನು ನೋಡಿ ಅರ್ಥೈಸಿಕೊಳ್ಳಬೇಕಾಗಿರುವ ರೀತಿ-ನೀತಿಗಳ ಬಗ್ಗೆ , ಚಲನಚಿತ್ರ ಒಂದು ಕಲಾಕೃತಿಯಾಗಿರುವ ಕಾರಣ ಪ್ರೇಕ್ಷಕರು ಆ ಕಲೆಯ ಪ್ರಸ್ತುತಿಯನ್ನು ಪರಿಗಣಿಸುವ ಮಾದರಿ ಎಂತಿರಬೇಕು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡುತ್ತದೆ ಎಂದು ತಿಳಿಯಪಡಿಸಿದರು.


ಕರ್ನಾಟಕ ಚಲನಚಿತ್ರ ಅಕಾಡೆಮಿ , ರಾಜ್ಯ ವಾರ್ತಾ ಇಲಾಖೆಯ ಚಲನಚಿತ್ರ ವಿಭಾಗದ ಜಂಟಿನಿರ್ದೇಶಕರು ಹಾಗೂ ಪುಣೆಯ ರಾಷ್ಟ್ರೀಯ ಫಿಲಂ ಇನ್ಸ್ಟಿಟ್ಯೂಟ್ ರವರ ಆಶ‍್ರಯದಲ್ಲಿ ನವೆಂಬರ್ 10ರಿಂದ 14ರ ತನಕ ವಾರ್ತಾಭವನದ ಮೊದಲ ಮಹಡಿಯಲ್ಲಿ ಸ್ಥಿತವಾದ ಸುಸಜ್ಜಿತ ಸುಲೋಚನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಶನಿವಾರ ಬೆಳಗ್ಗೆ ಜರುಗಿದ ದಕ್ಷಿಣ ಭಾರತದ ಮಟ್ಟಿಗೆ ಪ್ರಪ್ರಥಮವೆನಿಸುವ ಶಿಬಿರದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಸಿನೆಮಾ ನಿರ್ದೇಶಕ, ನಮ್ಮವರೇ ಆದ ಗಿರೀಶ್ ಕಾಸರವಳ್ಳಿ ನಡೆಸಿಕೊಟ್ಟರು. ಶಿಬಿರಾರ್ಥಿಯೋರ್ವರ ಅನಿಸಿಕೆ ಇಲ್ಲಿ ಕೇಳಿ..

ಪುಣೆಯ ಫಿಲಂ ಹಾಗೂ ಟೆಲಿವಿಷನ್ ಸಂಸ್ಥೆಯ ನಿರ್ದೇಶಕ ಭೂಪೇಂದ್ರ ಖೈನ್ತೊಲಾ ಆಶಯ ಭಾಷಣ ಮಾಡಿದ ಸಂದರ್ಭ ರಾಜ್ಯ ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್ ರವರು ಮುಖ್ಯ ಅತಿಥಿಗಳಾಗಿದ್ದರು. ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ, ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ . ಹಾಗೂ ಎ.ಆರ್ . ಪ್ರಕಾಶ್ ಉಪಸ್ಥಿತಿಯಲ್ಲಿ ಅಪರೂಪದ ಶಿಬಿರ ನೂರಾರು ಫಿಲ್ಮಾಸಕ್ತರನ್ನೊಳಗೊಂಡಂತೆ ಆರಂಭವಾಗಿತ್ತು.

ಮೊದಲಿಗೆ ಸಿನೆಮಾ ವೀಕ್ಷಣೆ..ಆನಂತರ ರಸಗ್ರಹಣೆ..!

ನೆರೆದ ಶಿಬಿರಾರ್ಥಿಗಳಿಗೆ ಶನಿವಾರ ರಷ್ಯಾದ ಪ್ರಖ್ಯಾತ ಸಿನೆಮಾ “ಹ್ಯೂಗೋ” ಮತ್ತು ಮರಾಠಿಯ “ಹರಿಶ್ಚಂದ್ರಾಚಿ ಫ್ಯಾಕ್ಟರಿ”ಯನ್ನು ಭಾನುವಾರ ತೋರಿಸಲಾಗಿತ್ತು. ಉಳಿದಂತೆ ಮೂರೂ ದಿನಗಳಲ್ಲಿ ಸಿನೆಮಾ ತಯಾರಿಕೆಯ ವಿವಿಧ ಹಂತಗಳು, ಪ್ರೇಕ್ಷಕರಾಗಿ ಸಿನಿಮಿಕರು, ಜನಸಾಮಾನ್ಯರು, ಸಿನಿವಿಮರ್ಶಕರು ಅರ್ಥೈಸಿಕೊಳ್ಳಬೇಕಾದ ಅಂಶಗಳು, ಅವಲೋಕಿಸಬೇಕಾದ ವಿಚಾರಗಳು ಸಕಲವನ್ನೂ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಯಪಡಿಸುವ ಕಾರ್ಯಕ್ರಮ ಪುಣೆಯ ವಿಷಯ ತಜ್ಞರಾದ ಮುನೀಶ್ ಭಾರಧ್ವಾಜ್ ಮತ್ತು ಪಂಕಜ್ ಸಕ್ಸೇನಾ ಹಾಗೂ ಸ್ಥಳೀಯರಾದ ಚಿತ್ರನಿರ್ದೇಶಕ ನಾಗಾಭರಣದವರದ್ದಾಗಿದೆ ಎಂದು ಬಾಲ್ಕನಿ ನ್ಯೂಸ್ ಗೆ ತಿಳಿಸಲಾಯ್ತು.

-ಡಾ. ಸುದರ್ಶನ್ ಭಾರತೀಯ, editor@balkaninews.com, 7022274686

Tags

Related Articles