ಆರೋಗ್ಯಆಹಾರಜೀವನ ಶೈಲಿ

ನಮ್ಮೊಳಗಿದೆ ಅಪರಿಮಿತ ವಿಶ್ವಾಸ, ಅದನ್ನು ಜಾಗೃತಗೊಳಿಸಬೇಕಷ್ಟೆ

ಬೆಂಗಳೂರು, ಫೆ.15:

ಎದ್ದೇಳು, ಧೀರನಾಗು, ಬಲಾಢ್ಯನಾಗು! ಎಲ್ಲಾ ಹೊಣೆಗಾರಿಕೆಯನ್ನು ನಿನ್ನ ಹೆಗಲ ಮೇಲೆಯೇ ಹೊತ್ತುಕೊ. ನಿನ್ನ ಭವಿಷ್ಯದ ಶಿಲ್ಪಿ ನೀನೇ ಎಂಬುದನ್ನು ತಿಳಿ.

ನಿನಗೆ ಅಗತ್ಯವಿರುವ ಆಖಂಡಶಕ್ತಿ ಸಾಮರ್ಥ್ಯಗಳೂ ನಿನ್ನೊಳಗೇ ಇವೆ. ವಿವೇಕಾನಂದರ ದಿವ್ಯವಾಕ್ಯ ನಮ್ಮ ಸುಪ್ತಮನಸ್ಸನ್ನು ಬಡಿದೆಬ್ಬಿಸುತ್ತದೆ. ನಮ್ಮ ಆತ್ಮವಿಶ್ವಾಸವನ್ನು ಸದಾ ಜಾಗೃತಗೊಳಿಸಿದಾಗ ಮಾತ್ರ ನಮ್ಮ ಏಳ್ಗೆ ಸಾಧ್ಯ. ನಾವೆಷ್ಟೇ ಜಾಗರೂಕರಾಗಿದ್ದರೂ, ಕೆಲವೊಂದು ಪರಿಸ್ಧಿಯ ಒತ್ತಡಕ್ಕೆ ಸಿಲುಕಿ, ಪರದಾಡುತ್ತೇವೆ.

ಅಂಥಹ ಕೆಲವು ತೊಡಕುಗಳು ಯಾವುವು ಎಂಬುದರ ವಿವರಣೆ ಇಂತಿದೆ:

ಕೀಳರಿಮೆ: ಪ್ರತಿಭೆಯಿದ್ದರೂ ಮುಂದುವರೆಯಲಾರದ ಪರಿಸ್ಧಿತಿಗೆ ನಮ್ಮನ್ನು ತಳ್ಳುತ್ತದೆ ಈ ಕೀಳರಿಮೆ. ಹೇಳಬೇಕಾದ್ದನ್ನು ಹೇಳಲಾಗದ ದಿಗಿಲು. ಆಗಾಗ ಇಂತಹ ಅನುಭವ ಹೆಚ್ಚಾದಷ್ಟೂ ನಾವು ನಮ್ಮೊಳಗೆ ಕಳೆದುಹೋಗಿರುವ ಆತ್ಮವಿಶ್ವಾಸಕ್ಕೆ ತಡಕಾಡುವ ದುಸ್ಥಿತಿಗೆ ಬೀಳುತ್ತೇವೆ.

ಅನಗತ್ಯ ಪ್ರಶ್ನೆ: ನಮ್ಮ ಸಮಸ್ಯೆಯೇ ಇದು. ಅನಗತ್ಯವಾಗಿ ಪ್ರಶ್ನಿಸಿಕೊಳ್ಳುತ್ತಲೇ ಬದುಕು ಕಳೆದು ಬಿಡುತ್ತೇವೆ. ವಿಶ್ವಾಸ, ನಂಬಿಕೆಗಳು ಇವೆಯೇ ಎಂಬ ಸಂಶಯ. ನಮಗೆ ನಮ್ಮ ವಿಶ್ವಾಸದ ಮೇಲೆಯೇ ಅವಿಶ್ವಾಸ! ಪ್ರಶ್ನಿಸಿಕೊಂಡಷ್ಟೂ ಕಾಡುವ ಭಯ, ಆತಂಕಗಳು. ಅಲ್ಲಿಗೆ ಅಂದುಕೊಂಡದ್ದನ್ನೇ ಕೈಬಿಟ್ಟು ಸುಮ್ಮನಾಗಿಬಿಡುವ ಪ್ರವೃತ್ತಿ! ಭಯಗಳನ್ನು ಭಯಂಕರವಾಗಿ ವೈಭವೀಕರಿಸಿಕೊಳ್ಳುವ ನಾವು ಕೆಲಸ ಮಾಡುವ ತನಕ ಮುಂದುವರೆಯುವುದೇ ಇಲ್ಲ.

ಒಂದಡಿ ಮುಂದಿಟ್ಟರೆ ಆತ್ಮವಿಶ್ವಾಸ: ಯಾವ ಕೆಲಸವನ್ನೂ ಮಾಡುವ ಮುನ್ನ ನಮ್ಮೊಳಗೆ ಅಪರಿಮಿತ ಶಕ್ತಿಯ ಅನುಭವವೇನು ಆಗಬೇಕಿಲ್ಲ. ಸ್ವಲ್ಪ ಸ್ವಲ್ಪವೇ ಕೆಲಸ ನಿರ್ವಹಿಸಿದಂತೆ ಸುಪ್ತವಾಗಿರುವ ವಿಶ್ವಾಸ ನಮ್ಮ ಅನುಭವಕ್ಕೆ ಬರುವುದು. ಹೊಸ ಕೆಲಸ ಮಾಡಲು ಹೊರಟಾಗ ಭಯ, ದಿಗಿಲು ಸಾಮಾನ್ಯ. ಅಲ್ಲಿಗೇ ನಿಲ್ಲದೆ ಒಂದು ಸಾರಿ ಮುಂದುವರೆದು ಬಿಟ್ಟರೆ, ಆತಂಕಗಳು ತನಗೆ ತಾನೇ ಹಿಂದೆ ಸರಿಯುವುವು.

ಯಾವ ಕೆಲಸ ಮೊದಲ ಬಾರಿ ಮಾಡುವಾಗ ಇನ್ನಿಲ್ಲದಷ್ಟು ದಿಗಿಲು ಹುಟ್ಟಿಸಿತೋ, ಅದೇ ಕೆಲಸ ಮತ್ತೊಮ್ಮೆ ಮಾಡುವಾಗ ಅಷ್ಟು ಭಯವನ್ನು ಹುಟ್ಟಿಸಲಾರದು. ಹಾಗೆ ನೋಡಿದರೆ ಅದೆಷ್ಟು ಹೊಸ ವಿಷಯಗಳು ಮೊದ ಮೊದಲು ನಮ್ಮನ್ನು ಇನ್ನಿಲ್ಲದಷ್ಟು ಹೆದರಿಸಿ ನಂತರ ತಣ್ಣಗಾಗಿಸಿಲ್ಲ! ಏನಿದ್ದರೂ ನಮ್ಮಲ್ಲಿರುವ ಇಚ್ಛಾ ಶಕ್ತಿಯನ್ನು ಕ್ರೋಢೀಕರಿಸಿ ಒಂದು ಹೆಜ್ಜೆಯನ್ನು ಮುಂದಿಡಬೇಕಿದೆ. ಭಯವನ್ನು ತನ್ನಷ್ಟಕ್ಕೆ ತಾನೇ ಬಿಟ್ಟು ಮುನ್ನಡೆಯಬೇಕಿದೆ. ಒಂದಡಿ ಮುಂದಿಟ್ಟರೆ ಆತ್ಮವಿಶ್ವಾಸ ನಮ್ಮ ಕೈ ವಶವಾಗುತ್ತದೆ. ನಮ್ಮಲ್ಲೇ ಅಡಗಿದೆ ಅಪರಿಮಿತ ವಿಶ್ವಾಸ.

ಆತ್ಮವಿಶ್ವಾಸ ಹೊರಗಿನಿಂದ ಗಳಿಸುವುದಲ್ಲ: ಅಸಲಿಗೆ ಆತ್ಮದಲ್ಲಿ ವಿಶ್ವಾಸ ಇದ್ದೇ ಇದೆ. ಎಲ್ಲವನ್ನೂ ಕಳೆದುಕೊಂಡವನೂ ಒಂದು ನಾಳೆಗಾಗಿ ಬದುಕುವನು. ನಮಗೆ ಅತೀವ ಅವಮಾನವೋ, ದುಃಖವೋ ಆದಾಗ ಎಲ್ಲವೂ ಮುಗಿಯಿತೆಂದು ರೋದಿಸುತ್ತಾ ಕುಳಿತಿದ್ದಾಗಲೂ ನಮ್ಮೊಳಗಿನ ಮತ್ತೊಂದು ದನಿ ‘ಇಷ್ಟೆಲ್ಲಾ ಆಯ್ತಲ್ಲಾ. ನಾನು ನಾಳೆ ಹಾಗೆ ಮಾಡುವೆ ಹೀಗೆ ಮಾಡುವೆ…’ ಎನ್ನುತ್ತಾ ಸಂಕಲ್ಪ ಗೈಯುತ್ತಿರುವುದು. ನಮ್ಮಾತ್ಮದೊಳಗಿರುವ ವಿಶ್ವಾಸವಲ್ಲವೇ ಅದು? ಆದರೆ ನಾವು ಬೆಳೆದಂತೆಲ್ಲಾ ಬೇಡದ್ದನ್ನು ತುಂಬಿಕೊಳ್ಳುತ್ತಾ ಹೋದಂತೆ ನಮ್ಮ ವಿಶ್ವಾಸ ಪದರಗಳಡಿಯಲ್ಲಿ ಹುದುಗಿ ಹೋಗಿದೆ. ಯಾವುದೋ ಕಷ್ಟದ ಪರಿಸ್ಥಿತಿಯಲ್ಲಿ ಮೊಳೆಯುತ್ತಾ ಬದುಕುವ ಆಶಯವನ್ನು ಉಳಿಸಲಿಕ್ಕಷ್ಟೇ ಮೀಸಲಾಗಿ ಬಿಟ್ಟಿದೆ.

ಹೊರಗಿನ – ಒಳಗಿನ ಕಲ್ಮಶಗಳು: ಹಾಗೆ ನೊಡಿದರೆ ಯಾರೂ ಪ್ರತಿನಿತ್ಯ ನಮ್ಮ ಮನೆಯ ಬಾಗಿಲು ತಟ್ಟಿ ನೀನು ಅಸಮರ್ಥಳು, ಉದ್ಧಾರವಾಗುವುದಿಲ್ಲ ಎಂದೆಲ್ಲ ಹೇಳಿರುವುದಿಲ್ಲ. ನಾವು ಕೊಂಚ ದುರ್ಬಲ ಮನಃಸ್ಥಿತಿಯಲ್ಲಿದ್ದಾಗ ಕೇಳಲ್ಪಡುವ ಋುಣಾತ್ಮಕ ಮಾತುಗಳು ಮನದಲ್ಲಿ ಅಚ್ಚಾಗಿ ಬಿಡುವವು. ನಾವು ಮಾತುಗಳನ್ನು ಅಲ್ಲಿಗೆ ಬಿಡುವುದೂ ಇಲ್ಲ. ನಮ್ಮ ತಲೆಯಲ್ಲಿರುವ ರೆಕಾರ್ಡರ್‌ ನಲ್ಲಿ ಭದ್ರಪಡಿಸಿ ಪದೆ ಪದೇ ಕೇಳುತ್ತಾ ಅಸಹಾಯಕರಾಗುತ್ತಾ ಹೋಗುತ್ತೇವೆ. ಈ ಹೊರಗಿನ ಕಲ್ಮಶ ನಮ್ಮೊಳಗಿನ ಭಾಗವೇ ಆಗಿ ಹೋಗುತ್ತದೆ. ನಮ್ಮೊಳಗಿರುವ ಮನುಷ್ಯ ಸಹಜ ಗುಣಾವಗುಣದೊಳಗೆ ಬೆಸೆದುಕೊಂಡು ಈ ಋುಣಾತ್ಮಕ ಕಲ್ಮಶ ನಮ್ಮ ಒಂದು ಅಂಶವೇ ಆಗಿಬಿಡುತ್ತದೆ ಅದೆಷ್ಟರ ಮಟ್ಟಿಗೆ ಎಂದರೆ ಏನು ಮಾಡಲು ಹೊರಟರೂ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವೆವು. ನನಗೆ ಆತ್ಮವಿಶ್ವಾಸವಿದೆಯೇ?

ಒಮ್ಮೆ ಶಿಷ್ಯನೊಬ್ಬ ಗುರುವಿನ ಬಳಿ ಕೇಳುತ್ತಾನೆ. ಗುರುಗಳೇ ನನ್ನ ಮನೆಯ ಬಳಿ ಒಂದು ದೊಡ್ಡ ಬೆಟ್ಟವಿದೆ. ನನಗೆ ಅದನ್ನು ಹತ್ತುವ ಬಯಕೆಯಿದೆ. ಆದರೆ ಇನ್ನೂ ಹತ್ತಲಾಗಿಲ್ಲ. ಏನೆಂದರೆ ನಾನು ಹತ್ತಬೇಕೆಂದು ಮನಸ್ಸು ಮಾಡಿದಾಗಲೆಲ್ಲ ಆ ಬೆಟ್ಟದ ಬುಡದ ಬಳಿ ಹೋಗಿ ಕಣ್ಮುಚ್ಚಿ ನಿಂತು ಕೇಳಿಕೊಳ್ಳುವೆ: ‘ಈ ಬೆಟ್ಟವನ್ನು ನಾನು ಹತ್ತಬಲ್ಲೆನಾ? ಹತ್ತುವಷ್ಟು ಆತ್ಮವಿಶ್ವಾಸವಿದೆಯೇ?’ ಎಂದೆಲ್ಲಾ  ನನ್ನ ಮನಸ್ಸು ಹೇಳುವುದು. ‘ಬೆಟ್ಟ ಹತ್ತಬಹುದೇ? ಒಂದು ವೇಳೆ ಕಾಲು ಜಾರಿ ಬಿದ್ದರೆ? ಸತ್ತೇ ಹೋದರೆ? ಅರ್ಧಕ್ಕೇ ವಾಪಸ್ಸಾಗಿಬಿಟ್ಟರೆ? ಮೊದಲೇ ಹತ್ತುವ ಉತ್ಸಾಹವಿಲ್ಲ. ಇನ್ನು ಏನಾದರೂ ಆದರೇನು ಗತಿ?’ ಹಾಗೆಂದಾಗಲೆಲ್ಲಾ ನಾನು ಹತ್ತುವ ಯೋಚನೆ ಕೈಬಿಟ್ಟು ಹಿಂದಿರುಗಿ ಬಿಡುವೆನು. ಗುರುಗಳೇ ಯಾವಾಗ ನನ್ನ ಮನಸ್ಸು ವಿಶ್ವಾಸ ಮೂಡಿಸುವ ಮಾತುಗಳನ್ನಾಡುವುದು? ನಾನು ನಿಜವಾಗಲೂ ಹತ್ತಬಲ್ಲೆನೇ? ಎಂದು ಪ್ರಶ್ನಿಸುತ್ತಾನೆ.

ಗುರುಗಳು ಕೋಪದಿಂದ ‘ಏನೆಂದೆ? ಬೆಟ್ಟ ಏರುವ ಮೊದಲು ಆತ್ಮವಿಶ್ವಾಸವಿದೆಯೇ ಎಂದು ಪ್ರಶ್ನಿಸಿಕೊಳ್ಳುವೆಯಾ? ಯಾರು ಹೇಳಿದರು ಬೆಟ್ಟ ಏರಲು ವಿಶ್ವಾಸಬೇಕೆಂದು. ಒಂದೊಂದೇ ಮೆಟ್ಟಿಲು ಹತ್ತುತ್ತಾ ಹೊರಟರೆ ಸಾಕು. ಹಾಗೆ ಬೆಟ್ಟದ ತುದಿಯನ್ನೇ ತಲುಪಿ ಬಿಡುವೆ. ನಿನ್ನ ಮನದ ಅಭಿಪ್ರಾಯ ಕೇಳಿ ಕೇಳಿ ನಾನು ಹತ್ತಬಲ್ಲೆನೇ ಎಂದು ಕೇಳುವಂತಾಗಿದ್ದೀಯ! ಮನಸ್ಸಿನ ಅನಿಸಿಕೆಯೇಕೆ ನಿನಗೆ? ಕಲ್ಪನೆಯಲ್ಲೇಕೆ ಆಯುಷ್ಯ ಕಳೆಯುವೆ? ಸುಮ್ಮನೆ ಹತ್ತುವುದನ್ನು ನೋಡು. ಹತ್ತಿ ನೋಡು ಅದೇನಾಗುವುದೆಂದು.’

ಹೀಗೆ ಸುಬುದ್ಧಿ ಹೇಳುವ ಗುರು ನಮ್ಮ ಮನಸ್ಸಾಗುವಂತೆ ತರಬೇತಿ ಕೊಡುವ ಜವಾಬ್ದಾರಿ ನಮ್ಮದೆ….

ಟ್ರೆಂಡಿಯಾಯ್ತು ಪರ್ಲ್ ಜೀನ್ಸ್ ಪ್ಯಾಂಟ್

#selfconfidence #confidence #selfmotivation #balkaninews

Tags

Related Articles