
ದಸರಾ ವಿಶೇಷ 2018ದಸರಾ ವಿಶೇಷ ತಿಂಡಿಗಳು
ಶರನ್ನವರಾತ್ರಿಗೆ ನವವಿಧ ಭಕುತಿಯೊಂದಿಗೆ ಗುಡಾನ್ನವೇ ನೈವೇದ್ಯ..
ಗುಡಾನ್ನ ಮಾಡುವುದು ಹೇಗೆ?
ದೇವಿ ಆದಿ ಶಕ್ತಿಯ ನೈವೇದ್ಯಕ್ಕೆ ಬಹಳ ಶ್ರೇಷ್ಠವಾದುದ್ದು ‘ಗುಡಾನ್ನ’. ನವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನ, ಮಠಗಳಲ್ಲಿ ಇದನ್ನು ಪ್ರಸಾದವಾಗಿ ವಿತರಿಸುತ್ತಾರೆ. ಮೈಸೂರು ಸಂಸ್ಥಾನದ ಅದಿದೇವತೆ ಬೆಟ್ಟದ ತಾಯಿ ‘ಶ್ರೀ ಚಾಮುಂಡೇಶ್ವರಿ’ ದೇವಿಗೆ ಬೆಲ್ಲದಿಂದ ತಯಾರಿಸಲಾದ ಅನ್ನದ ನೈವೇದ್ಯವನ್ನು ಶ್ರದ್ಧಾ – ಭಕ್ತಿಯಿಂದಿಂದ ಅರ್ಪಿಸುತ್ತಾರೆ. ಈ ಸಮರ್ಪಣೆ ನವರಾತ್ರಿಯ ಪಾಡ್ಯದಿಂದ ಪ್ರಾರಂಭಿಸಿ ವಿಜಯದಶಮಿಯವರೆಗೂ ಅನೂಚ್ಛಾನವಾಗಿ ನಡೆಯುತ್ತದೆ. ದೇವಿಯ ಅಷ್ಠ ರೂಪಗಳಿಗೂ ಗುಡಾನ್ನ ನೈವೇದ್ಯವಾಗಿ ಪ್ರಾಶಸ್ತ್ಯ ಪಡೆದುಕೊಂಡಿದೆ. ಪಾರ್ವತಿ, ಚಂಡಿ, ಕಾಳಿ, ದುರ್ಗೆ, ಲಲಿತಾ-ಪರಮೇಶ್ವರಿ, ಸರಸ್ವತಿ, ಮಹಾಲಕ್ಷ್ಮಿ, ಗಾಯತ್ರಿ, ಮೂಕಾಂಬಿಕೆ ಹೀಗೆ ವಿವವಿಧ ರೂಪಗಳಲ್ಲಿ ವಿವಿಧ ಶಕ್ತಿಗಳನ್ನು ಮೈದುಂಬಿ ಸಮಸ್ತ ವಿಶ್ವವೇ ಜಗನ್ಮಾತೆಯ ಮಡಿಲಾಗಿರುವಾಗ ಹುಲುಮಾನವರು ಭಾರತದಲ್ಲಿ ಹಬ್ಬಗಳಿಗೋಸ್ಕರ ಕಾದು ಕಾದು ದೇವಿಯನ್ನು ಆರಾಧಿಸಲು ಅರ್ಚಿಸಿ ಅರ್ಪಿಸಿ ಮೆಚ್ಚಿಸಲು ಬಂದಿದೆ ಮತ್ತೆ ನವರಾತ್ರಿ. ಈ ನವರಾತ್ರಿಗೆ ನೀವೂ ಗುಡಾನ್ನವನ್ನು ನೈವೇದ್ಯವಾಗಿ ದೇವಿಗೆ ಸಮರ್ಪಿಸಿ ಪಾವನರಾಗಿ ..
ಗುಡಾನ್ನ ಮಾಡುವುದು ಹೇಗೆ? ಮುಂದೆ ಓದಿ…
ಬೇಕಾಗುವ ಸಾಮಗ್ರಿಗಳು
ಬೆಲ್ಲ- ಮುಕ್ಕಾಲು ಕಪ್
ಅಕ್ಕಿ- ಒಂದು ಕಪ್
ಕಾಯಿ ತುರಿ- 4-5 ಚಮಚ
ತುಪ್ಪ- ಕಾಲು ಕಪ್
ಹಾಲು- ಒಂದು ಕಪ್
ಗೋಡಂಬಿ-ದ್ರಾಕ್ಷಿ-ಬೇಕಾದಷ್ಟು
ಏಲಕ್ಕಿ-3-4
ಉಪ್ಪು- ಒಂದು ಚಿಟಿಕಿ
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ, ಅದಕ್ಕೆ ಎರಡು ಕಪ್ ನೀರು ಸೇರಿಸಿ. ಹಾಗೂ ಒಂದು ಕಪ್ ಕಾಯಿಸಿದ ಹಾಲನ್ನು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ತೆಗೆದಿಟ್ಟುಕೊಳ್ಳಿ.
ಮುಕ್ಕಾಲು ಕಪ್ ಬೆಲ್ಲಕ್ಕೆ ಸ್ವಲ್ಪವೇ ನೀರು ಸೇರಿಸಿ. ಅದನ್ನು ಸ್ಟವ್ ಮೇಲಿಟ್ಟು ಕುದಿ ಬರಿಸಿ ಫಿಲ್ಟರ್ ಮಾಡಿಟ್ಟುಕೊಳ್ಳಿ.
ಈಗ ಸ್ಟವ್ ಮೇಲೆ ದಪ್ಪ ತಳದ ಪ್ಯಾನ್ ಇಟ್ಟು, ಒಂದು ಚಮಚ ತುಪ್ಪ ಹಾಕಿ, ಗೋಡಂಬಿ ದ್ರಾಕ್ಷಿಯನ್ನು ಹಾಕಿ ಹುರಿದುಕೊಳ್ಳಿ. ಈಗ ಅದಕ್ಕೆ ಕುದಿಸಿ ಫಿಲ್ಟರ್ ಮಾಡಿಕೊಂಡ ಬೆಲ್ಲದ ನೀರನ್ನೂ ಹಾಕಿ. ಕುಕ್ಕರ್ ನಲ್ಲಿ ಬೇಯಿಸಿ ತೆಗೆದಿಟ್ಟುಕೊಂಡ ಅನ್ನವನ್ನೂ ಹಾಕಿ, ಚಿಟಕಿ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕುದಿಯಲು ಬಿಡಿ.
ಕೊನೆಗೆ ತುಪ್ಪ ಹಾಗೂ ಕೊಬ್ಬರಿ ತುರಿಯನ್ನು ಹಾಕಿ. ಎಲ್ಲವೂ ಚೆನ್ನಾಗಿ ಮಿಕ್ಸ್ ಆಗಿ ಕುದಿ ಬಂದಾಗ, ಕೊನೆಯಲ್ಲಿ ಏಲಕ್ಕಿ ಪುಡಿಹಾಕಿರಿ.. ಇದನ್ನು ದೇವಿಗೆ ನೈವೇದ್ಯ ಮಾಡಿ ತಾಯಿ ಪಾತ್ರಕ್ಕೆ ಪಾತ್ರರಾಗಿ.. ಪ್ರಸಾದವನ್ನು ನೀವೂ ಸ್ವೀಕರಿಸಿ..