ಸುದ್ದಿಗಳು

‘ಮೊಘಲ್’ ಸಿನಿಮಾದಿಂದ ಹೊರಬಂದ ಮಿಸ್ಟರ್ ಪರ್ಫೆಕ್ಟ್

ಹಿಂದಿ ಚಿತ್ರರಂಗದ ಬಹು ಬೇಡಿಕೆಯ ನಟ

ಮುಂಬೈ, ಅ.11: ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಮೇಲೂ #ಮಿಟೂ ಅಭಿಯಾನದ ಎಫೆಕ್ಟ್ ಆಗಿದೆ. ನಿರ್ದೇಶಕ ಸುಭಾಷ್ ಕಪೂರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪ ಹಿನ್ನೆಲೆಯಲ್ಲಿ ಗುಲ್ಶನ್ ಕುಮಾರ್ ಜೀವನಾಧಾರಿತ ‘ಮೊಘಲ್’ ಚಿತ್ರದ ನಿರ್ಮಾಪಕ ಹುದ್ದೆಯಿಂದ ಅಮೀರ್ ಖಾನ್ ಹೊರ ಬಂದಿದ್ದಾರೆ.

ಯಾರ ಹೆಸರು ಪ್ರಸ್ತಾಪಿಸದೆ ಹೇಳಿಕೆ ಬಿಡುಗಡೆಗೊಳಿಸಿರುವ ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್, ಅಮೀರ್ ಖಾನ್ ಪ್ರೊಡಕ್ಷನ್ಸ್ ನಲ್ಲಿ ಯಾವತ್ತಿಗೂ ಮಹಿಳೆಯರ ದೌರ್ಜನ್ಯ ನಡೆದಿಲ್ಲ. ಕೆಲ ದಿನಗಳ ಹಿಂದೆ ಆರಂಭವಾದ #ಮಿಟೂ ಅಭಿಯಾನದಲ್ಲಿ ಕೆಲವರ ಹೆಸರುಗಳು ಕೇಳಿಬಂದಿವೆ. ಈ ಹೆಸರುಗಳ ಪೈಕಿ ನಮ್ಮದೊಂದಿಗೆ ಕೆಲಸ ಮಾಡುವವರೊಬ್ಬರ ಹೆಸರೂ ಕೇಳಿಬಂದಿದೆ ಎಂದು ಹೇಳಿಕೆ ನೀಡಿದ್ದಾರೆ.

ಗುಲ್ಷನ್ ಕುಮಾರ್ ಜೀವನಾಧಾರಿತ ಚಿತ್ರ ‘ಮೊಘಲ್’

ಯಾವುದೇ ವ್ಯಕ್ತಿಯ ವಿರುದ್ಧವೂ ಆರೋಪ ಮಾಡದೆಯೇ ಮತ್ತು ನಿರ್ದಿಷ್ಟ ಆರೋಪದ ಕುರಿತು ನಿರ್ಧಾರ ಕೈಗೊಳ್ಳದೆಯೇ ಚಿತ್ರದಿಂದ ಹೊರ ಬಂದಿದ್ದೇವೆ ಎಂದು ಅಮೀರ್ ಹೇಳಿದ್ದಾರೆ. ಇದೇ ವೇಳೆ, ಸುಭಾಷ್ ಕಪೂರ್ ಅವರನ್ನು ಮೊಘಲ್ ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೂಡಿಕೆದಾರಾದ ಟಿ ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

2014ರಲ್ಲಿ ನಟಿ ಗೀತಿಕಾ ತ್ಯಾಗಿ ಅವರು ನಿರ್ದೇಶಕ ಸುಭಾಷ್ ಕಪೂರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಪಾರ್ಟಿಯೊಂದರಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸುಭಾಷ್ ವಿರುದ್ಧ ದೂರಿದ್ದರು. ಇದೀಗ ಅಕ್ಟೋಬರ್ 9ರಂದು ತಮ್ಮ ಟ್ವೀಟರ್ ನಲ್ಲಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಜತೆ ಕೆಲಸ ಮಾಡುತ್ತಿರುವ ಬಗ್ಗೆ ಅಮೀರ್ ಅವರನ್ನು ಗೀತಿಕಾ ಪ್ರಶ್ನಿಸಿದ್ದರು.

Tags