ಸುದ್ದಿಗಳು

ಹೊಸ ಪಾತ್ರಗಳತ್ತ ಕನ್ನಡ ನಟಿಯರ ಪಯಣ

ಚಂದನವನದಲ್ಲಿ ಮತ್ತೆ ‘ನಾಯಕಿ’ ಪ್ರಧಾನ ಚಿತ್ರಗಳು ಶುರುವಾಗುತ್ತಿವೆ. ಹಾಗೂ ನಾಯಕಿಯರು ಸಹ ಹೊಸ  ಪಾತ್ರಗಳತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು, ಅ.01: ಚಂದನವನದ ನಾಯಕಿಯರು ಇದೀಗ ಹೊಸ  ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವಾಗಿ ಇದೀಗ ನಾಯಕಿ ಪ್ರಧಾನ ಚಿತ್ರಗಳು ಸಹ ಸೆಟ್ಟೇರುತ್ತಿವೆ. ಈ ಹಿಂದೆ  ಶೃತಿ, ಮಾಲಾಶ್ರೀ, ಮಹಾಲಕ್ಷ್ಮಿ, ವಿಜಯಶಾಂತಿ ಸೇರಿದಂತೆ ಅನೇಕ ನಟಿಯರು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದರು.

ನಾಯಕಿ ಪ್ರಧಾನ ಚಿತ್ರಗಳು

ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮಿ ರೈ, ಶಾನ್ವಿ ಶ್ರೀವಾತ್ಸವ್, ರಚಿತಾ ರಾಮ್, ರಾಗಿಣಿ , ಪ್ರಿಯಾಂಕಾ ಉಪೇಂದ್ರ, ರಶ್ಮಿಕಾ ಮಂದಣ‍್ಣ, ಸಂಜನಾ ಪ್ರಕಾಶ್, ಶೃತಿ ಹರಿಹರನ್ ಸೇರಿದಂತೆ ಹಲವಾರು ನಟಿಯರು ಇದೀಗ ನಾಯಕಿ ಕೇಂದ್ರಿತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ರಚಿತಾ ರಾಮ್ – ‘ಏಪ್ರಿಲ್’

ಈಗಾಗಲೇ ಸಾಕಷ್ಟು ಸ್ಟಾರ್ ನಟರ ಜೊತೆಗೆ ಅಭಿನಯಿಸಿರುವ ರಚಿತಾ ರಾಮ್ ಈಗ ‘ಏಪ್ರಿಲ್’ ಎಂಬ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಚಿತ್ರದಲ್ಲಿ ಏಪ್ರಿಲ್ ಡಿಸೋಜಾ ಆಗಿ ರಚಿತಾ ನಟಿಸುತ್ತಿದ್ದು, ಸತ್ಯ ರಾಯಲ ಎಂಬುವವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ‍್ಣ- ‘ವೃತ್ರ’

ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಚಿತ್ರಗಳ ನಂತರ ನಟಿ ರಶ್ಮಿಕಾ ಮಂದಣ್ಣ ಅವರು ಪರಭಾಷೆಯ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. ಇದೀಗ ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನವ ನಿರ್ದೇಶಕ ಆರ್. ಗೌತಮ್ ಅಯ್ಯರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ‘ವೃತ್ರ’ಎಂಬ ಹೆಸರನ್ನಿಟ್ಟಿದ್ದಾರೆ.

ರಾಗಿಣಿ -‘ದಿ ಟೆರೆರಿಸ್ಟ್’

ರಾಗಿಣಿ ದ್ವಿವೇದಿ ಎಂದ ತಕ್ಷಣ ಅವರ ಗ್ಲಾಮರ್ ಚಿತ್ರಗಳು ನೆನಪಾಗುತ್ತದೆ. ಗ್ಲಾಮರ್ ಮತ್ತು ಆಕ್ಷನ್ ಪಾತ್ರಗಳಿಗೆ ಅಂಟಿಕೊಂಡಿದ್ದ ರಾಗಿಣಿ ಇದೀಗ ಬೇರೆ ರೀತಿಯ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಬರುತ್ತಿರುವ ‘ದಿ ಟೆರೆರಿಸ್ಟ್’ ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳುತ್ತಿದ್ದು, ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದೆ.

ಹರಿಪ್ರಿಯಾ – ‘ಡಾಟರ್ ಆಫ್ ಪಾರ್ವತಮ್ಮ’

ಹರಿಪ್ರಿಯಾ ಅವರ 25 ನೇ ಚಿತ್ರವಾದ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಮೂಲಕ ಅವರೂ ಸಹ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಳ‍್ಳುತ್ತಿದ್ದು, ಹರಿಪ್ರಿಯಾ ಅವರ ತಾಯಿಯ ಪಾತ್ರವನ್ನು ಸುಮಲತಾ ಅಂಬರೀಶ್ ನಿರ್ವಹಿಸುತ್ತಿದ್ದಾರೆ. ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಶೃತಿ ಹರಿಹರನ್- ‘ಟೆಸ್ಲಾ’

ಶೃತಿ ಹರಿಹರನ್ ಇದೀಗ ‘ಟೆಸ್ಲಾ’ ಎಂಬ ವಿಭಿನ್ನ ಚಿತ್ರದಲ್ಲಿ ನಟಿಸುತ್ತಿದ್ದು, ಈ ಮೂಲಕ ಕಮರ್ಷಿಯಲ್ ಹಾಗೂ ಕಲಾತ್ಮಕ ಎರಡು ರೀತಿಯ ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈ ‘ಟೆಸ್ಲಾ’ ಚಿತ್ರದಲ್ಲಿ ಅವರು ಏಳು ವಿಭಿನ್ನ ಲುಕ್ ಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ವಿನೋದ್ ಜೆ ರಾಜ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಸಂಜನಾ ಪ್ರಕಾಶ್ – ‘ಸೈನೈಡ್ ಮಲ್ಲಿಕಾ’

ಭಾರತದ ಏಕೈಕ ಮಹಿಳ ಸರಣಿ ಕೊಲೆಗಾರ್ತಿಯಾಗಿರುವ ಸೈನೈಡ್ ಮಲ್ಲಿಕಾಳ ನಿಜ ಜೀವನದ ಕಥೆಯು ಇದೀಗ ಸಿನಿಮಾರೂಪವಾಗಿ ಬರುತ್ತಿದೆ. ಇದೀಗ ನೈಜ್ಯ ಘಟನೆ ಆಧಾರಿತ “ಸೈನೈಡ್ ಮಲ್ಲಿಕ- ಮೀಟ್ಸ್ ಸೈನೈಡ್ ಮೋಹನ್’ ಚಿತ್ರದಲ್ಲಿ ಸಂಜನಾ ಪ್ರಕಾಶ್ ನಟಿಸುತ್ತಿದ್ದಾರೆ.

*121# ಚಿತ್ರದ ವಿದ್ಯಾ

ನಟಿ ವಿದ್ಯಾ ಅವರು ‘*121#’ ಚಿತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಪ್ರತಿಕ್ರಿಯೆ ಕಂಡ ಅವರು ಇದೀಗ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದು, ಅದೊಂದು ನಾಯಕಿ ಪ್ರಧಾನ ಚಿತ್ರವೆಂಬುದು ವಿಶೇಷ. ವಿಜಯ್ ಎಂಬುವವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

 

 

ಅವರಂತೆಯೇ ಈಗಿನ ಕೆಲ ನಾಯಕಿಯರು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಪೂಜಾ ಗಾಂಧಿಯವರು ‘ಹುಚ್ಚಿ’, ‘ಅಭಿನೇತ್ರಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಂತೆಯೇ ರಮ್ಯಾ ಅವರು ‘ಜೂಲಿ’ , ಪ್ರಿಯಾಂಕಾ ಉಪೇಂದ್ರ ಅವರು ‘ಪ್ರಿಯಾಂಕಾ’  ಮತ್ತು ‘ಸೆಕೆಂಡ್ ಹಾಫ್ ‘ ಚಿತ್ರಗಳಲ್ಲಿ ನಟಿಸಿದ್ದಾರೆ.

 

@ sunil Javali

Tags