ಸುದ್ದಿಗಳು

ಗ್ಲಾಮರ್ ಪಾತ್ರದಲ್ಲಿ ಅನುಪಮಾ…!!!

‘ಆ ಕರಾಳ ರಾತ್ರಿ’ ಚಿತ್ರದಲ್ಲಿ ಪಕ್ಕಾ ಸಾಂಪ್ರದಾಯಿಕ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದ ಅನುಪಮಾ ಗೌಡ ಈ ಬಾರಿ ಗ್ಲಾಮರ್ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ.

ಬೆಂಗಳೂರು, ಆ. 09: ‘ನಗಾರಿ’ ಚಿತ್ರದ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟವರು ಅನುಪಮಾ ಗೌಡ. ಆನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಹೊರ ಬಂದ ಮೇಲೆ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ಸಾಂಪ್ರದಾಯಿಕ ಹಳ್ಳಿ ಹುಡುಗಿಯಾಗಿ ಅಭಿನಯಿಸಿದರು. ಹೀಗಾಗಿ ಅನೇಕರು ‘ನಿಮ್ಮಿಂದ ಗ್ಲಾಮರ್ ರೋಲ್’ ಮಾಡಲು ಸಾಧ್ಯವಿಲ್ಲವೆ?’ ಎಂದು ಪ್ರಶ್ನಿಸಿದ್ದರಂತೆ. ಈ ರೀತಿ ಪ್ರಶ್ನಿಸುವವರಿಗೆ ಹೊಸ ಚಿತ್ರದ ಮೂಲಕ ಉತ್ತರ ಕೊಡಲು ಸಿದ್ಧರಾಗಿದ್ದಾರೆ.

ಮಾದಕ ಬೆಡಗಿಯಾಗಿ

ಈಗಾಗಲೇ ಸಾಕಷ್ಟು ಕಥೆಗಳನ್ನು ಕೇಳಿರುವ ಅನುಪಮಾ ಅವರಿಗೆ ನಿರ್ದೇಶಕ ದಯಾಳ್ ಅವರ ಕಥೆ ಇಷ್ಟವಾಗಿದೆಯಂತೆ. “ಚಿತ್ರದಲ್ಲಿ ನಾಯಕಿಯ ಪಾತ್ರ ತುಸು ಗ್ಲಾಮರಸ್ ಆಗಿದೆ. ಈಗಾಗಲೇ ಕಥೆಯ ಒಂದೆಳೆ ಕೇಳಿದ್ದೇನೆ. ತುಂಬ ಭಿನ್ನವಾಗಿದೆ ಎಂದು ಮಾತ್ರ ನಾನು ಹೇಳಬಲ್ಲೆ. ಸದ್ಯ ಅವರು ನನ್ನ ಕಾಲ್ಶೀಟ್ ಪಡೆದುಕೊಂಡಿದ್ದಾರೆ. ದಯಾಳ್ ಕಥೆ ಹಿಡಿದುಕೊಂಡು ಬಂದಾಗ ನನಗೆ ಬೇಡ ಎನ್ನಲು ಕಾರಣಗಳೇ ಇರುವುದಿಲ್ಲ. ಉಳಿದ ಪಾತ್ರಧಾರಿಗಳು ಇನ್ನಷ್ಟೇ ಅಂತಿಮವಾಗಬೇಕು’ ಎಂದು ಮಾಹಿತಿ ನೀಡುತ್ತಾರೆ ಅನುಪಮಾ.

ಹಲವಾರು ಚಿತ್ರಗಳಲ್ಲಿ ನಟನೆ

‘ಆ ಕರಾಳ ರಾತ್ರಿ’ ಚಿತ್ರದ ನಂತರ ‘ಪುಟ 109’ ಮತ್ತು ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರಗಳಲ್ಲಿ ನಟಿಸುತ್ತಿರುವ ಅನುಪಮಾ, ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಈ ಹೊಸ ಚಿತ್ರವನ್ನು ದಯಾಳ್ ಅವರೇ ನಿರ್ದೇಶನ ಮಾಡಲಿದ್ದು, ಈ ಚಿತ್ರಕ್ಕೆ ಅಕ್ಟೋಬರ್ ನಲ್ಲಿ ಚಾಲನೆ ಸಿಗಲಿದೆ.

ಧಾರಾವಾಹಿ, ಸಿನಿಮಾ, ನಿರೂಪಕಿ

ಈಗಾಗಲೇ ‘ಅಕ್ಕ’, ‘ಚಿ.ಸೌ ಸಾವಿತ್ರಿ’ ಧಾರಾವಾಹಿಗಳಲ್ಲಿ ನಟಿಸಿದ ಅನುಪಮಾ ಇದೀಗ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಜೊತೆಗೆ ರಿಯಾಲಿಟಿ ಶೋ ಒಂದರಲ್ಲಿ ನಿರೂಪಣೆ ಮಾಡುತ್ತಿದ್ದು, ಮುಂದಿನ ಚಿತ್ರಕ್ಕಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾರೆ.

ಹೀಗೆ ಯಾವುದೇ ತರಾತುರಿ ಇಲ್ಲದೆ, ನಿಧಾನವಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕೆಂಬುದು ಅನುಪಮಾ ಅವರ ಆಲೋಚನೆ. ಜೊತೆಗೆ ಮರ ಸುತ್ತುವ ಪಾತ್ರಗಳಿಗಿಂತ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಲು ಇಷ್ಟವೆನ್ನುತ್ತಾರೆ.

 

@ sunil Javali

Tags