ಸುದ್ದಿಗಳು

ಸಾಗುತ್ತಾ ಬಂದರು ಅಪೇಕ್ಷಾ

‘ಕಾಫಿತೋಟ’ ‘ಕಿನಾರೆ’ ಚಿತ್ರಗಳ ನಂತರ ನಟಿ ಅಪೇಕ್ಷಾ ಇದೀಗ “ಸಾಗುತ ದೂರಾ ದೂರಾ’ ಎಂಬ ಹೆಸರಿನ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು, ಆ. 09: ‘ಕಾಫಿತೋಟ’, ‘ಕಿನಾರೆ’ ಚಿತ್ರಗಳ ಬಳಿಕ ನಟಿ ಅಪೇಕ್ಷಾ ಪುರೋಹಿತ್ ಇದೀಗ ‘ಸಾಗುತ ದೂರಾ ದೂರಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಇವರು ಈ ಚಿತ್ರದ ಬಳಿಕ ‘ತಮ್ಮ ಪತಿಯೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡುವ ಆಸೆ ಇದೆ’ಎಂದು ಹೇಳುತ್ತಾರೆ.

ತಾಯಿ ಸೆಂಟಿಮೆಂಟ್ ಚಿತ್ರ

ಈ ಹಿಂದೆ ‘ಜಾತ್ರೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರವಿ ತೇಜ, ಇದೀಗ ಈಗ ತಾಯಿಯ ಸೆಂಟಿಮೆಂಟ್ ಕುರಿತ “ಸಾಗುತ ದೂರಾ ದೂರಾ’ ಚಿತ್ರ ಮಾಡಿದ್ದಾರೆ. ಈ ಚಿತ್ರವು “ಕೃಷಿ ಕನಸು’ ಬ್ಯಾನರ್ ನಲ್ಲಿ ಅಮಿತ್ ಪೂಜಾರಿ ಅವರು ನಿರ್ಮಾಣ ಮಾಡಿದ್ದಾರೆ. ಮಹೇಶ್ ಎಂಬ ಪ್ರತಿಭೆ ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ.

ಚಿತ್ರದಲ್ಲಿ ಅಪೇಕ್ಷಾ ಅವರ ಪಾತ್ರವೇ ಪ್ರಧಾನವಾಗಿದ್ದು, ಇಲ್ಲಿ ಅವರು ಪ್ರೀತಿಯ ಹಿಂದೆ ಬಿದ್ದು ಮರ ಸುತ್ತುವ ಪಾತ್ರವನ್ನು ಮಾಡಿಲ್ಲವಂತೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ಅಪೇಕ್ಷಾ ಮತ್ತು ಇನ್ನೊಬ್ಬ ಚಿಕ್ಕ ಹುಡುಗನ ನಡುವಿನ ಕಥೆ ಸಾಗುತ್ತದೆ. ಈ ಪ್ರಯಾಣದಲ್ಲಿ ಇಬ್ಬರೂ ತಮ್ಮ ತಾಯಿಯನ್ನು ಹುಡುಕಿ ಹೋಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರ ಪ್ರತಿಯೊಬ್ಬರಿಗೂ ನಾಟುವ ಕಥೆ ಎಂಬುದು ಅಪೇಕ್ಷಾ ಅವರ ಅನಿಸಿಕೆ.

ಕುಂದಾಪುರ ಶೈಲಿಯ ಚಿತ್ರ

ಈ ಚಿತ್ರವು ಬಹುತೇಕ ಕುಂದಾಪುರದ ಸುತ್ತಮುತ್ತ ಸಾಗುವುದರಿಂದ ಮತ್ತು ನಾಯಕಿ ಅಪೇಕ್ಷಾ ಇಲ್ಲಿ ಕುಂದಾಪುರದ ಹುಡುಗಿಯಾಗಿ ನಟಿಸಿರುವುದರಿಂದ ಅವರ ಸಂಭಾಷಣೆ ಕೂಡ ಕುಂದಾಪುರ ಶೈಲಿಯಲ್ಲೇ ಇರಲಿದೆಯಂತೆ. ಚಿತ್ರದಲ್ಲಿ ಜಾಹ್ನವಿ, ಗಡ್ಡಪ್ಪ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತವಿದೆ.

Tags

Related Articles