ಸುದ್ದಿಗಳು

ರಚಿತಾ ರಾಮ್ ‘ಎಪ್ರಿಲ್’ ಎರಡನೇ ನೋಟ

ಸತ್ಯ ರಾಯಲ ನಿರ್ದೇಶನ ಮಾಡುತ್ತಿರುವ ‘ಎಪ್ರಿಲ್’ ಚಿತ್ರದ ಎರಡನೇ ಪೋಸ್ಟರ್

ಬೆಂಗಳೂರು, ಸ.14: ರಚಿತಾ ರಾಮ್ ಅಭಿನಯಿಸುತ್ತಿರುವ ಮಹಿಳಾ ಪ್ರಾಧಾನ್ಯತೆಯ ಚಿತ್ರ ‘ಎಪ್ರಿಲ್’. ಈಗಾಗಲೇ ತನ್ನ ಮೊದಲ ನೋಟದಿಂದ ಗಮನ ಸೆಳೆದಿರುವ ಈ ಚಿತ್ರದಲ್ಲಿ ನಾಯಕಿಯ ಹೆಸರು ‘ಎಪ್ರಿಲ್ ಡಿಸೌಜಾ’. ಹಾಗೂ ಇಡೀ ಚಿತ್ರ ಇವರ ಪಾತ್ರದ ಸುತ್ತಲೇ ಸುತ್ತುವುದರಿಂದ ಈ ಚಿತ್ರಕ್ಕೆ ರಚಿತಾ ಅವರೇ ಹೀರೋ ಕಮ್ ಹೀರೋಯಿನ್.

ಚಿತ್ರದ ಬಗ್ಗೆ

“ಚಿತ್ರದಲ್ಲಿ ರಚಿತಾ ಅವರ ಕ್ಯಾರೆಕ್ಟರ್ ಹೆಸರು ಏಪ್ರಿಲ್ ಡಿಸೋಜಾ ಅಂತ. ಏಪ್ರಿಲ್ ತಿಂಗಳು ವಸಂತ ಕಾಲವನ್ನು ಸೂಚಿಸುತ್ತದೆ. ಅದೇ ರೀತಿ ಈ ಚಿತ್ರದಲ್ಲಿ ರಚಿತಾ ಅವರ ಕ್ಯಾರೆಕ್ಟರ್ ಗೂ ವಸಂತ ಕಾಲದಲ್ಲಿ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತದೆ. ಈ ಚಿತ್ರದ ಕಥೆ ನೈಜ ಘಟನೆಗಳನ್ನು ಆಧರಿಸಿದೆ. ರಚಿತಾ ಈ ಸಿನಿಮಾದಲ್ಲಿ ಎರಡು ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನಗೆ ಈ ಸಿನಿಮಾ ಚಾಲೆಂಜಿಂಗ್ ಆಗಿದೆ’ ಎನ್ನುತ್ತಾರೆ ನಿರ್ದೇಶಕ ಸತ್ಯ.

ಎರಡನೇ ಪೋಸ್ಟರ್

ಇದೊಂದು ಕ್ಯಾಥೋಲಿಕ್ ಕ್ರಿಶ್ಚಿಯನ್ ಪಾತ್ರದ ಸುತ್ತ ಸುತ್ತುವ ಕಥೆಯಾಗಿದ್ದು, ಈಗಾಗಲೇ ತನ್ನ ಮೊದಲ ಪೋಸ್ಟರ್ ನಿಂದ ಗಮನ ಸೆಳೆದಿದ್ದ ಚಿತ್ರದಿಂದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಇಲ್ಲಿ ನಟಿ ರಚಿತಾ ಟೆಡ್ಡಿ ಬೇರ್ ವೊಂದನ್ನು ಹಿಡಿದು, ಚಿಂತಾಕ್ರಾಂತಳಾಗಿ ನಿಂತಿದ್ದಾರೆ. ಸದ್ಯ ಈ ಪೋಸ್ಟರ್ ಸಹ ಚಿತ್ರದ ಮೇಲಿರುವ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ.

ನಿರ್ದೇಶಕರ ಬಗ್ಗೆ

ನಿರ್ದೇಶಕ ಸತ್ಯ ರಾಯಲ ಅವರಿಗಿದು ಚೊಚ್ಚಲ ಚಿತ್ರವಾಗಿದ್ದು, ‘8 ಎಂ ಎಂ’ ಚಿತ್ರವನ್ನು ನಿರ್ಮಿಸುತ್ತಿರುವ ನಾರಾಯಣ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಲ್ಲಿ ರಚಿತಾ ಕೂಡಾ ಸಾಮಾನ್ಯ ಹುಡುಗಿಯಾಗಿಯೇ ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಉದಿತ್ ಹರಿದಾಸ್ ಸಂಗೀತ, ಅರ್ಜುನ್ ಶೆಟ್ಟಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನವಿದೆ. ಚಿತ್ರ ಇದೇ ತಿಂಗಳಿನಿಂದ ಶುರುವಾಗಲಿದೆ.

Tags