ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಬಡ್ಡಿಮಗನ್ ಲೈಫು: ಪ್ರೇಮದ ಸುತ್ತ ಬದುಕಿನ ವ್ಯಾಖ್ಯಾನ

ರೇಟಿಂಗ್: 3.5/5

ಚಿತ್ರ: ಬಡ್ಡಿಮಗನ್ ಲೈಫು

ನಿರ್ಮಾಣ: ಗ್ರೀನ್‌ ಚಿಲ್ಲಿ ಎಂಟರ್‌ ಟೈನ್ಮೆಂಟ್‌

ನಿರ್ದೇಶನ: ಪವನ್‌ – ಪ್ರಸಾದ್‌

ತಾರಾಗಣ: ಸಚಿನ್‌, ಐಶ್ವರ್ಯಾ ರಾವ್‌, ಬಲ ರಾಜವಾಡಿ, ರಜನಿಕಾಂತ್‌, ವನಿತಾ, ಪದ್ಮನಾಭ, ಪೂರ್ಣಚಂದ್ರ ತೇಜಸ್ವಿ ಹಾಗೂ ಮತ್ತಿತರರು.

ಯಾವುದೇ ಸಿನಿಮಾ ಯಾವ ರೀತಿಯಲ್ಲಾದರೂ ಪ್ರೇಕ್ಷಕರನ್ನು ಆವರಿಸಿಕೊಂಡು ಬಿಡಬಹುದು. ಈ ಪ್ರಕ್ರಿಯೆ ಕೆಲ ಸಿನಿಮಾಗಳ ವಿಚಾರದಲ್ಲಿ ಮಾತ್ರ ತೀರಾ ಭಿನ್ನವಾಗಿರುತ್ತವೆ. ಇಂತಾದ್ದೇ ಭಿನ್ನವಾದ ರೀತಿಯಲ್ಲಿ ಭಾರೀ ಸದ್ದು ಮಾಡಿದ್ದ ಚಿತ್ರ ‘ಬಡ್ಡಿಮಗನ್ ಲೈಫು’.

ಗ್ರೀನ್ ಚಿಲ್ಲಿ ಎಂಟರ್‍ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿದ್ದ ‘ಬಡ್ಡಿಮಗನ್ ಲೈಫು’ ಸಿನಿಮಾ ಬಗ್ಗೆ ಟ್ರೇಲರ್‍ ನಲ್ಲಿ ಕಾಣಿಸಿದ್ದ ವಿಶೇಷ ಕಥನದ ಸುಳಿವಿನೊಂದಿಗೆ ಕುತೂಹಲ ಮತ್ತಷ್ಟು ವ್ಯಾಪಿಸಿಕೊಂಡಿತ್ತು. ಇದೀಗ ಅದೆಲ್ಲವೂ ತೃಪ್ತಗೊಳ್ಳುವ ರೀತಿಯಲ್ಲಿ ಈ ಚಿತ್ರವು ತೆರೆ ಕಂಡಿದೆ.

ಇಲ್ಲಿರುವುದು ಸಾದಾ ಸೀದಾ ಎಂಬಂಥಾ ಕಥೆ. ಆದರೆ ಅದನ್ನು ನಿರೂಪಣೆ ಮಾಡಿರುವ ರೀತಿ ಮತ್ತು ಆ ವಿಚಾರವನ್ನು ದೃಷ್ಯೀಕರಿಸುವ ಕಲಾತ್ಮಕ ಜಾಡೇ ‘ಬಡ್ಡಿಮಗನ್ ಲೈಫು’ ಪ್ರೇಕ್ಷಕರನ್ನು ವಿಶಿಷ್ಟವಾಗಿ ತಾಕುವಂತೆ ಮಾಡಿ ಬಿಟ್ಟಿದೆ.

ಮೈಸೂರು ಸೀಮೆಯ ಕಾಲ್ಪನಿಕವಾದ ಊರೊಂದರಲ್ಲಿ ಘಟಿಸುವ ಪ್ರೇಮ ಪ್ರಕರಣದ ಮೂಲಕವೇ ತೆರೆದುಕೊಳ್ಳುವ ಮುದ್ದಾದ ಕಥೆ ಆ ನಂತರದಲ್ಲಿ ಬಡ್ಡಿ ಮಾಫಿಯಾ, ಊರ ಮಂದಿಯ ಆಡಿಕೊಳ್ಳುವ ಖಯಾಲಿಗಳ ಜೊತೆ ಜೊತೆಗೇ ಮತ್ತೊಂದಷ್ಟು ಅಂಶಗಳನ್ನು ಬಳಸಿಕೊಂಡು ಸಾಗಿ ಮುಂದುವರೆಯುತ್ತದೆ. ಈ ಮೂಲಕ ಇದನ್ನು ಭರ್ಜರಿ ಮನೋರಂಜನಾತ್ಮಕ ಚಿತ್ರವಾಗಿ ಕಟ್ಟಿ ಕೊಡುವಲ್ಲಿ ನಿರ್ದೇಶಕರಾದ ಪವನ್ ಮತ್ತು ಪ್ರಸಾದ್ ಯಶಸ್ಸು ಕಂಡಿದ್ದಾರೆ.

ಆಕೆ ಅಗರ್ಭ ಶ್ರೀಮಂತನ ಮನೆ ಮಗಳು. ತಂದೆ ಊರಿಗೆಲ್ಲ ಬಡ್ಡಿಗೆ ಕಾಸು ಬಿಟ್ಟು, ವಸೂಲಿ ಮಾಡುವ ಬಡ್ಡಿ ಸೀನಪ್ಪ. ಊರ ಮಂದಿಗೆ ಈತನಿಂದ ಸಾಲ ತೆಗೆದುಕೊಳ್ಳದೇ ವಿಧಿಯಿಲ್ಲ. ಬಡ್ಡಿ ಸಮೇತ ವಾಪಾಸು ಕೊಡದೇ ಹೋದರೆ ಕಂಟಕವೂ ತಪ್ಪಿದ್ದಲ್ಲ. ಇಂಥವನ ಮಗಳು ಅದೇ ಊರಿನ ಮದ್ಯಮವರ್ಗದ ಹುಡುಗನನ್ನು ಪ್ರೀತಿಸುತ್ತಾಳೆ. ಈ ವಿಚಾರ ತಿಳಿದು ಆಕೆಯ ಮನೆ ಮಂದಿ ಆಕೆಯನ್ನು ಮನೆಯಲ್ಲಿಯೇ ಕೂಡಿಟ್ಟುಕೊಂಡು ಬೇರೊಬ್ಬನೊಂದಿಗೆ ಮದುವೆ ಮಾಡಲು ತಯಾರಾಗುತ್ತಾರೆ. ಅಲ್ಲಿಯೇ ಇದ್ದರೆ ಉಳಿಗಾಲವಿಲ್ಲವೆಂದರಿತ ಆಕೆ ಪ್ರೀತಿಸಿದ ಹುಡುಗನೆಂದಿಗೆ ಪೇರಿ ಕೀಳುತ್ತಾಳೆ. ಆ ನಂತರ ತೆರೆದುಕೊಳ್ಳುವುದೇ ಅಸಲಿ ಕಥೆ.

ಇಂಥಾ ಪ್ರೀತಿ ಪ್ರೇಮದ ಕಥೆಯನ್ನು ಹಳ್ಳಿಗಾಡಿನ ಜನ ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರೂಪಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಇದರೊಂದಿಗೆ ಒಂದೊಳ್ಳೆ  ಮನರಂಜನಾತ್ಮಕ ಚಿತ್ರ ನೋಡಿದ ಖುಷಿಯೂ ಕೂಡಾ ಪ್ರೇಕ್ಷಕರಿಗೆ ದಕ್ಕುತ್ತದೆ. ಐಶ್ವರ್ಯಾ ರಾವ್ ಮತ್ತು ಬಲ ರಾಜವಾಡಿ ನಟಿನೆಯೇ ಈ ಸಿನಿಮಾದ ಹೈಲೈಟ್. ಮಿಕ್ಕುಳಿದ ಪಾತ್ರಗಳು ಮತ್ತು ಸಂಗೀತವೆಲ್ಲವೂ ಒಂದಕ್ಕೊಂದು ಪೂರಕವಾಗಿ ‘ಬಡ್ಡಿಮಗನ್ ಲೈಫ’ನ್ನು ಪರಿಣಾಮಕಾರಿಯಾಗಿಸಿದೆ.

ಹೊಂಬಾಳೆ ಫಿಲ್ಸ್ಮ್ ಸಂಭ್ರಮದ ಪಾರ್ಟಿಯಲ್ಲಿ ಸೆಲೆಬ್ರಿಟಿಗಳ ಝಲಕ್

#BaddiMaganLifu #BaddiMaganLifuReview  #KannadaSuddigalu

Tags