ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಮೋಡಿ ಮಾಡುವ ಡಿಟೆಕ್ಟಿವ್ ದಿವಾಕರ: ‘ಬೆಲ್ ಬಾಟಂ’ ಚಿತ್ರದ ವಿಮರ್ಶೆ

ನೋಡುಗರ ಮನ ಗೆಲ್ಲುವ ಸಿನಿಮಾ

ಚಿತ್ರ         : ಬೆಲ್ ಬಾಟಂ

ತಾರಾಗಣ: ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್, ಶಿವಮಣಿ ಮುಂತಾದವರು

ಸಂಗೀತ   : ಅಜನೀಶ್ ಲೋಕನಾಥ್

ನಿರ್ಮಾಣ : ಸಂತೋಷ್ ಕುಮಾರ್ ಕೆ.ಸಿ

ನಿರ್ದೇಶನ: ಜಯತೀರ್ಥ

ರೇಟಿಂಗ್ಸ್: 4/5

ಬೆಂಗಳೂರು.ಫೆ.15: ನಾಲ್ವರು ಸೃಜನಶೀಲ ನಿರ್ದೇಶಕರು. ಅವರಲ್ಲಿ ಮೂವರು ಇಲ್ಲಿ ನಟರು. ಹೌದು, ಈಗಾಗಲೇ ತನ್ನದೇ ಶೈಲಿಯ ಕಥಾಹಂದರ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕ ಜಯತೀರ್ಥ ‘ಬೆಲ್ ಬಾಟಂ’ ಮಾಡುತ್ತಿದ್ದಾರೆ ಎಂದಾಕ್ಷಣ ಎಲ್ಲರಲ್ಲೂ ಕುತೂಹಲವಿತ್ತು. ಏಕೆಂದರೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಪೂರ್ಣ ಪ್ರಮಾಣದ ನಾಯಕನಟರಾಗಿದ್ದಾರೆ.

ಕುತೂಹಲ ಮೂಡಿಸುವ ಸಿನಿಮಾ

‘ಬೆಲ್ ಬಾಟಂ’.. ಒಂದೊಳ್ಳೆ ಸಿನಿಮಾ, ಎಲ್ಲಿಯೂ ಸಹ ಬೇಜಾರು ಮಾಡುವುದಿಲ್ಲ. ರಿಷಬ್ ಶೆಟ್ಟಿ, ಯೋಗರಾಜ್ ಭಟ್, ಶಿವಮಣಿ, ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಕಾಶ್ ತುಮಿನಾಡ್, ಸೇರಿದಂತೆ ಅನೇಕರ ಅಭಿನಯ ಮೋಡಿ ಮಾಡುತ್ತದೆ. ಅದಕ್ಕೆ ತಕ್ಕಂತೆ ಬಂದಿರುವ ಹಾಡುಗಳು ಸಹ ನೋಡುಗರನ್ನು ಮೈ ಮರೆಸುತ್ತವೆ.

ಕಥಾಹಂದರ

ಬೆಲ್ ಬಾಟಂ.. ಒಂದು ಪತ್ತೆದಾರಿ ಕಥೆಯ ಸಿನಿಮಾ.. ನಾಯಕ ದಿವಾಕರ್ ಗೆ (ರಿಷಬ್ ಶೆಟ್ಟಿ) ಪತ್ತೆದಾರಿ ಕೆಲಸವೆಂದರೆ ಬಲು ಇಷ್ಟ. ಇದೇ ಕಾರಣಕ್ಕೆ ಆತ, ತನ್ನ ಹೆಸರಿನ ಹಿಂದೆ ಡಿಟೆಕ್ಟಿವ್ ಎನ್ನುವ ಟ್ಯಾಗ್ ಹಾಕಿಕೊಂಡಿರುತ್ತಾನೆ. ಆತ ಹೆಚ್ಚು ಓದಿದವನಲ್ಲ. ಕೇವಲ ಪತ್ತೆದಾರಿ ಕಾದಂಬರಿ ಹಾಗೂ ಸಿನಿಮಾಗಳನ್ನು ನೋಡಿ ಬೆಳೆದವನು. ಅದೇ ತಂತ್ರವನ್ನು ಆತ ತನ್ನ ಡಿಟೆಕ್ಟಿವ್ ಕೆಲಸಗಳಲ್ಲಿ ಅಳವಡಿಸಿಕೊಳ್ಳುತ್ತಾನೆ.

ಅಪ್ಪನ ಒತ್ತಾಯಕ್ಕೆ ಪೊಲೀಸ್ ಪೇದೆ ಆಗುವ ದಿವಾಕರನಿಗೆ ಪೊಲೀಸ್ ಠಾಣೆಯಲ್ಲಿ ಆದ ಕಳ್ಳತನ, ದಿವಾಕರನನ್ನು ಡಿಟೆಕ್ಟಿವ್ ಆಗುವಂತೆ ಮಾಡುತ್ತದೆ. ಪತ್ತೆದಾರಿಯಾದ ದಿವಾಕರ ಹೇಗೆ ಈ ಕಳ್ಳರನ್ನು ಹಿಡಿಯುತ್ತಾನೆ. ಪೊಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡುವ ಆ ಕಿಲಾಡಿಗಳು ಯಾರು ಎನ್ನುವುದಕ್ಕೆ ಸಿನಿಮಾದಲ್ಲಿ ಉತ್ತರ ಸಿಗುತ್ತದೆ.

80 ರ ದಶಕಕ್ಕೆ ಕರೆದುಕೊಂಡು ಹೋಗುವ ಸಿನಿಮಾ

ಹಳೆ ಕಾಲದ ರೆಟ್ರೋ ಶೈಲಿಯ ಸಿನಿಮಾ ನೋಡುವುದೇ ಒಂದು ಮಜಾ. 80 ರ ದಶಕದ ಚಿತ್ರಣವನ್ನು ಎಲ್ಲಿಯೂ ಆ ಕಡೆ, ಈ ಕಡೆ ಆಗದಂತೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹೀಗಾಗಿ ಯಾವುದೇ ಕಾರಣಕ್ಕೂ ಇದು ಮೋಸ ಇಲ್ಲದ ಸಿನಿಮಾ.

ಕಾಮಿಡಿ ಹಾಗೂ ಸಸ್ಪೆನ್ಸ್ ಮಿಶ್ರಿತ ಪಕ್ಕಾ ಪತ್ತೇದಾರಿ ಸಿನಿಮಾವನ್ನು ಅರಾಮಾಗಿ ಕುಳಿತು ಎಂಜಾಯ್ ಮಾಡಬಹುದು. ಹಾಸ್ಯ ರೂಪದಲ್ಲಿ ಡಿಟೆಕ್ಟಿವ್ ದಿವಾಕರನ ಸಾಹಸಗಳನ್ನು ತೆರೆಯ ಮೇಲೆ ನೋಡಿ ಆನಂದಿಸಿ, ಈ ಸಿನಿಮಾ ಕೊಟ್ಟ ಕಾಸಿಗೆ ಡಬಲ್ ಮನರಂಜನೆ ನೀಡುತ್ತದೆ.

#bellbottom, #balkaninews #filmnews, #rishabshetty, #haripfriya, #jayathirtha, #yogarajbhat, #shivamani

Tags