ಸುದ್ದಿಗಳು

ಸದ್ದು ಮಾಡುತ್ತಿರುವ ‘ಭರಾಟೆ’ ಫೋಟೋ ಶೂಟ್ ಗಳು..

ರೋರಿಂಗ್ ಸ್ಟಾರ್ ಶ್ರೀ ಮುರುಳಿಯವರು ‘ಉಗ್ರಂ,’ರಥಾವರ’,’ಮಫ್ತಿ’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಚೇತನ್ ಕುಮಾರ್ ನಿರ್ದೇಶನದ “ಭರಾಟೆ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಫೋಟೋ ಶೂಟ್ ರಾಜಸ್ತಾನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಇದೀಗ ಆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಬೆಂಗಳೂರು, ಆ.12: “ಮಫ್ತಿ” ಚಿತ್ರ ನಂತರ ನಟ ಶ್ರೀ ಮುರಳಿ , “ಬಹದ್ದೂರ್’ ಚೇತನ್ ನಿರ್ದೇಶನದಲ್ಲಿ ‘ಭರಾಟೆ’ ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರವು ಚಿತ್ರದ ಶೀರ್ಷಿಕೆ, ರಾಜಸ್ಥಾನದಲ್ಲಿ ನಡೆದ ಫೋಟೋಶೂಟ್ ಗಳ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಆ ಪೋಟೋಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಿನಿಮಾ ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನವೇ ಸಖತ್ ನಿರೀಕ್ಷೆ ಹುಟ್ಟಿಸಿದೆ.

ಖಡಕ್ ಗೆಟಪ್

ರಾಜಸ್ತಾನದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ ಮತ್ತು ನಟಿ ಶ್ರೀಲೀಲಾ ಖಡಕ್ ಆಗಿ ಗತ್ತು ಪ್ರದರ್ಶನ ಮಾಡಿದ್ದಾರೆ. ಮುರುಳಿಯವರು ತಮ್ಮ ಹಿಂದಿನ ‘ಉಗ್ರಂ’, ‘ರಥಾವರ’, ‘ಮಫ್ತಿ’ ಚಿತ್ರಗಳಲ್ಲಿ ಮಾಸ್ ಗೆಟಪ್ ಧರಿಸಿದ್ದರು. ಆದರೆ ‘ಭರಾಟೆ’ಯಲ್ಲಿ ಈ ಹಿಂದಿನ ಚಿತ್ರಗಳ ಛಾಯೆಯನ್ನು ಮರೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಹಂತದ ಚಿತ್ರೀಕರಣ

ಚಿತ್ರದ ಕಥೆ ರಾಜಸ್ಥಾನದ ಹಿನ್ನೆಲೆಯಲ್ಲೇ ಸಾಗಲಿರುವುದರಿಂದ ಬಹುತೇಕ ದೃಶ್ಯಗಳ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಆ. 21ರಿಂದ ಸೆ.9ರವರೆಗೆ ನಡೆಯಲಿರುವ ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಚಿತ್ರತಂಡ ಸದ್ಯದಲ್ಲೇ ರಾಜಸ್ತಾನಕ್ಕೆ ಪ್ರಯಾಣ ಬೆಳೆಸಲಿದೆ.

ತಾಂತ್ರಿಕ ವರ್ಗ

“ಬಹದ್ದೂರ್’ ಚೇತನ್ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ರಚಿಸಿದ್ದಾರೆ. ಇನ್ನು ಈ ಚಿತ್ರವನ್ನು ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಇನ್ನು, ಸ್ವಾತಂತ್ರ್ಯ ದಿನಾಚರಣೆಯಂದು ಸಂಗೊಳ್ಳಿ ರಾಯಣ್ಣ ಉತ್ಸವದ ಪ್ರಯುಕ್ತ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

 

 

@ sunil Javali

Tags