ಸುದ್ದಿಗಳು

‘ಬ್ರಾಹ್ಮಿ’ ಇದು ಸಂಗೀತದ ಸಂಗತಿ

ಆಧ್ಯಾ ಎಂಬ ಪಾತ್ರ

ಬೆಂಗಳೂರು,ನ.12: ಕನ್ನಡ ಸಿನಿಮಾರಂಗದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬೆಳದಿಂಗಳ ಬಾಲೆಯಂತೆ ಸುಳಿದಾಡಿದ ತಾರಾ ಸುಮ ಸುಮನ್ ನಗರ್ಕರ್. ಇದೀಗ ಅವರೇ ನಿರ್ಮಿಸಿ ನಟಿಸಿರುವ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ. ಅದರ ಬಗ್ಗೆ ಮಾಹಿತಿ ನೀಡಲು ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಉಪಸ್ಥಿತವಿದ್ದು ಅನುಭವ ಹಂಚಿಕೊಂಡಿತು.

‘ಬ್ರಾಹ್ಮಿ’ ಅಂದರೆ ಶಾರದೆ

‘ಬ್ರಾಹ್ಮಿ’ ಎಂಬ ಪದವನ್ನು ಸಾಮಾನ್ಯವಾಗಿ ಮುಹೂರ್ತದ ಸಂದರ್ಭದಲ್ಲಿ ಬಳಸುವುದನ್ನು ಕೇಳಿದ್ದೇವೆ.‌ಆದರೆ ನಿಜದಲ್ಲಿ ‘ಬ್ರಾಹ್ಮಿ’ ಎನ್ನುವುದು ಸರಸ್ವತಿಯ ಮತ್ತೊಂದು ಹೆಸರು. ಇದು ಸಂಗೀತ ಕಲೆಗೆ ಸಂಬಂಧಿಸಿದ ಚಿತ್ರ ಹಾಗಾಗಿ ‘ಬ್ರಾಹ್ಮಿ’ ಎಂದು ಹೆಸರಿಡಲಾಗಿದೆ” ಎಂದರು ಸುಮನ್ ನಗರ್ಕರ್.

ಪ್ರಧಾನ ಪಾತ್ರದಲ್ಲಿ ರಮೇಶ್ ಭಟ್

ಹಿರಿಯ ನಟ ರಮೇಶ್ ಭಟ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತಾವು ಇದುವರೆಗೆ ನಿರ್ವಹಿಸಿರದ ಮಾದರಿಯ ಪಾತ್ರ ಇದು ಎನ್ನುವುದು ಅವರ ಅಭಿಪ್ರಾಯ. ಚಿತ್ರದಲ್ಲಿ ಅವರು ಸುಮನ್ ನಗರ್ಕರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಮನ್ ಪತಿ ಗುರುದೇವ್ ಅವರು ತಾವು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿರುವುದಾಗಿ ತಿಳಿಸಿದರು.

ಚಿತ್ರದಲ್ಲಿ ಗಿಟಾರಿಸ್ಟ್ ಆಗಿ ನಟಿಸಿರುವ ಅನುಷಾ ತಾವು ಮೂಲತಃ ರಂಗಭೂಮಿ ಕಲಾವಿದೆ ಎಂದರು. ಇದು ತಮಗೆ ಒಳ್ಳೆಯ ಅವಕಾಶ ಎನ್ನುವುದು ಅವರ ಅಭಿಪ್ರಾಯ. ಚಿತ್ರದ ಪಾತ್ರಕ್ಕಾಗಿಯೇ ಗಿಟಾರ್ ಮತ್ತು ಸೈನ್ ಲ್ಯಾಂಗ್ವೇಜ್ ಕಲಿತಿರುವುದಾಗಿ ಅವರು ತಿಳಿಸಿದರು. ಚಿತ್ರದಲ್ಲಿ ತಾವು ಆಧ್ಯಾ ಎಂಬ ಪಾತ್ರ ನಿರ್ವಹಿಸುತ್ತಿರುವುದಾಗಿ ಸುಮನ್ ನಗರ್ಕರ್ ಹೇಳಿದರು. ಅಂದಹಾಗೆ ಚಿತ್ರಕ್ಕೆ ಅಭಿಷೇಕ್ ಚಿತ್ರಕತೆ ಬರೆದಿದ್ದಾರೆ.

ಚಿತ್ರದಿಂದ ಹೊರನಡೆದ ಪ್ರದೀಪ್ ವರ್ಮಾ

ಚಿತ್ರವನ್ನು ಪ್ರದೀಪ್ ವರ್ಮಾ‌ ನಿರ್ದೇಶಿಸಿದ್ದಾರೆ. ಆದರೆ ಅವರೊಂದಿಗಿನ ಸಂಬಂಧದಲ್ಲಿ ತೊಂದರೆಗಳು ಉಂಟಾದ ಕಾರಣ ಚಿತ್ರತಂಡದಿಂದ ಅವರು ದೂರ ಸರಿದಿದ್ದಾರೆ. ಅವರಿಂದ ಎನ್ ಒಸಿ ಪಡೆಯಲಾಗಿದೆ. ಇದೀಗ ಸಂಪೂರ್ಣವಾಗಿ ಸಹ ನಿರ್ದೇಶಕರು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಅವರು  ಮಾತನಾಡಿ, “ಚಿತ್ರಕ್ಕೆ ಬಿಂದು ಮಾಲಿನಿ ಸಂಗೀತ ಇದೆ. ಚಿತ್ರದಲ್ಲಿ ಐದು ಹಾಡುಗಳಿವೆ. ಫ್ಯೂಷನ್ ಮ್ಯೂಸಿಕ್ ಬಳಸಲಾಗಿದೆ” ಎಂದರು.

ಬೆಂಗಳೂರು ಮತ್ತು ಚಿಕ್ಕ ಮಗಳೂರಲ್ಲಿ ಚಿತ್ರೀಕರಣ ನಡೆಸಲಾಗಿದೆ.ಕಿರಣ್ ಕಾವೇರಪ್ಪ ಸಾಹಿತ್ಯ ರಚಿಸಿದ್ದಾರೆ. ‘ನಾತಿಚರಾಮಿ’ ಚಿತ್ರದ ಛಾಯಾಗ್ರಾಹಕ ಗುರುರಾಜ್ ಈ ಸಿನಿಮಾಗೂ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಿನಿಮಾ ಮುಂದಿನ‌ ವರ್ಷ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿದೆ.

Tags

Related Articles