ಸುದ್ದಿಗಳು

‘ಬಿಂಬ’ ಚಿತ್ರದ ಕುತೂಹಲಕಾರಿ ಟ್ರೈಲರ್…!!!

ಸಂಸರ ಬದುಕು ‘ಬಿಂಬ’ದ ಮೂಲಕ ಅನಾವರಣ

ಬೆಂಗಳೂರು,ಸ.11: ಶ್ರೀನಿವಾಸ್ ಪ್ರಭು ರವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಬಿಂಬ.. ಆ ತೊಂಬತ್ತು ನಿಮಿಷಗಳು’ ಚಿತ್ರವು, ಒಂದೇ ಶಾಟ್, ಒಂದೇ ಸ್ಥಳ, ಒಬ್ಬನೇ ಕಲಾವಿದ ನನ್ನು ಒಳಗೊಂಡಿದೆ ಎಂಬ ವಿಚಾರದಿಂದ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಪ್ರಯೋಗಾತ್ಮಕ ಸಿನಿಮಾ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ “ಬಿಂಬ … ಆ ತೊಂಬತ್ತು ನಿಮಿಷಗಳು’ ಹೊಸ ಸೇರ್ಪಡೆ. ಎಂ.ಎಂ.ಮೂವೀಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಜಿ. ಮೂರ್ತಿ ಮತ್ತು ಕೆ.ವಿ. ಶ್ರೀನಿವಾಸ ಪ್ರಭು ನಿರ್ದೇಶಕರು. ಚಿತ್ರಕ್ಕೆ ಶ್ರೀನಿವಾಸ ಪ್ರಭು ಕೇಂದ್ರಬಿಂದುವಾಗಿದ್ದಾರೆ.

ಸಾಹಿತಿಯೊಬ್ಬರ ಬದುಕು

ಚಿತ್ರಕ್ಕೆ ಶ್ರೀನಿವಾಸ್ ಪ್ರಭು ಅವರೇ ಕೇಂದ್ರ ಬಿಂದುವಾಗಿದ್ದು, ಇಡೀ ಚಿತ್ರದಲ್ಲಿ ಅವರೊಬ್ಬರೇ ಕಲಾವಿದರಾಗಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಕನ್ನಡದ ಶ್ರೇಷ್ಟ ನಾಟಕಕಾರ, ಸಾಹಿತಿಗಳಾದ ‘ಸಂಸ’ರ ಬದುಕಿನ ಚಿತ್ರಣವನ್ನು ಒಳಗೊಂಡಿದೆ. ಇವರ ಪೂರ್ಣ ಹೆಸರು ಸಾಮಿ ವೆಂಕಟಾದ್ರಿ ಐಯ್ಯರ್, ಸಂಸರದ್ದೇ ಇಲ್ಲಿ ಗಮನಾರ್ಹ ಪಾತ್ರವಾಗಿದೆ.

ದಾಖಲೆ ಬರೆದ ಚಿತ್ರ

ಕಲಾ ನಿರ್ದೇಶಕನಾಗಿ ಪರಿಚಿತನಾಗಿರುವ ಮೂರ್ತಿಯವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದೊಂದಿಗೆ ಒಂದೇ ಶಾಟ್ ಹಾಗೂ ಒಂದೇ ಲೊಕೇಷನ್ ನಲ್ಲಿ ಚಿತ್ರೀಕರಿಸುವ ಮೂಲಕ ಮೂರ್ತಿ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಭಾವನಾ ಅಭಿನಯಿಸಿದ ಶಾಂತಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಅದು ಮಲ್ಪಿಪಲ್ ಶಾಟ್ಗಳಲ್ಲಿ ಚಿತ್ರಿತವಾಗಿತ್ತು.

ತಾಂತ್ರಿಕ ವರ್ಗ

‘ಬಿಂಬ’ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್ ಅವರು ಸತತವಾಗಿ 103 ನಿಮಿಷಗಳ ಕಾಲ ಒಂದು ಚಿಕ್ಕ ಮನೆಯಲ್ಲೇ ಚಿತ್ರೀಕರಣ ಮಾಡಿದ್ದಾರೆ. ಈ ಚಿತ್ರದ ಹಿನ್ನೆಲೆಸಂಗೀತವೂ ವಿಶೇಷತೆಯಿಂದ ಕೂಡಿದ್ದು ಸಂಗೀತ ವಾದಕವಾಗಿ ಕೇವಲ ಒಂದು ಕೊಳಲನ್ನು ಮಾತ್ರ ಉಪಯೋಗಿಸಿ ಪ್ರವೀಣ್ ಗೋಡ್ಕಿಂಡಿ ಕೇವಲ ಫ್ಲೂಟ್ ಮೂಲಕ ಸಂಗೀತ ನೀಡಿದ್ದಾರೆ.

ಇಲ್ಲಿ ಸಂಸರ ಪಾತ್ರವನ್ನು ಶ್ರೀನಿವಾಸ್ ಪ್ರಭು ನಿರ್ವಹಿಸಿದ್ದಾರೆ. ಸಂಸರು ಆತ್ಮಹತ್ಯೆಗೆ ಮುನ್ನ ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಕನ್ನಡಿ ಮುಂದೆ ನಿಂತು ಸಂಸರು ಸ್ವಗತದಲ್ಲಿ ಒಂದಷ್ಟು ಮಾತನಾಡಿಕೊಳ್ಳುತ್ತಾರೆ. ಅದನ್ನೇ ಇಲ್ಲಿ ಒಂದೇ ಶಾಟ್, ಒಂದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಪಾತ್ರಗಳು ಕಾಣಿಸದೇ ತೆರೆಯ ಮೇಲೆ ಉಳಿದವರ ಮಾತುಗಳು ಮಾತ್ರ ಕೇಳಿ ಬರುತ್ತವಂತೆ.

ಚಿತ್ರದ ಟ್ರೈಲರ್

ಸದ್ಯ ಈ ಚಿತ್ರದ ಟ್ರೈಲರ್ ಅನ್ನು ಲಹರಿ ಮ್ಯೂಸಿಕ್ ಸಂಸ್ಥೆಯವರು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದರು. ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

Tags