ಸುದ್ದಿಗಳು

ಅಕ್ಕನ ಆ ಪರಿಸ್ಥಿತಿಯಲ್ಲಿ ನಾನು ನಿಜಕ್ಕೂ ಅಸಹಾಯಕಳಾಗಿದ್ದೇ: ಅನಿಶಾ ಪಡುಕೋಣೆ…!

ಮುಂಬೈ, ಆ.21: ನಟಿ ದೀಪಿಕಾ ಪಡುಕೋಣೆ ಖಿನ್ನತೆಯಿಂದ ಬಳಲುತ್ತಿದ್ದ ರೀತಿ. ಆಕೆ ಅದರಿಂದ ಹೊರಬಂದ ಬಗೆ. ಇದೀಗ ಖಿನ್ನತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ನಡೆಸುತ್ತಿರುವ ಸಾಮಾಜಿಕ ಕಾರ್ಯ ಇದೆಲ್ಲವು ತೆರೆದ ಪುಸ್ತಕ. ಈ ಬಗ್ಗೆ ಅವರು ಬಹಿರಂಗವಾಗಿಯೇ ಹೇಳಿಕೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ತನ್ನ ಅಕ್ಕ ಖಿನ್ನತೆಯಿಂದ ಅನುಭವಿಸಿದ ನೋವಿನ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ, ದೀಪಿಕಾ ಸಹೋದರಿ ಅನಿಶಾ ಪಡುಕೋಣೆ.

‘ಲಿವ್ ಲವ್ ಲಾಫ್ ಪೌಂಡೇಷನ್’ ನಲ್ಲಿ ಅಕ್ಕನೊಂದಿಗೆ ಕೈ ಜೋಡಿಸಿರುವ ಅನಿಶಾ, ಮಾನಸಿಕ ಆರೋಗ್ಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಎಷ್ಟು ಅನಿವಾರ್ಯ ಮತ್ತು ಅಗತ್ಯ ಎಂದು ವಿವರಿಸಿದ್ದಾರೆ. ನನ್ನ ಅಕ್ಕ ಮೆಂಟಲ್ ಇಲ್ ನೆಸ್ ಗೆ ಒಳಗಾದಾಗ ನನಗೆ ಇದರ ಬಗ್ಗೆ ಅರಿವೇ ಇರಲಿಲ್ಲ. ಮಾನಸಿಕ ಆರೋಗ್ಯದ ಕುರಿತಂತೆ ನಾನು ಕೊಂಚವಷ್ಟೇ ತಿಳಿದುಕೊಂಡಿದ್ದೆ. ಮನೆಯ ಸದಸ್ಯರು ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾದಾಗ ಮನೆ ಮಂದಿ ಯಾವ ರೀತಿ ಸ್ಪಂದಿಸಬೇಕು ಎಂಬುದು ಕೂಡ ಅಷ್ಟೇ ಮುಖ್ಯ ಎಂದಿದ್ದಾರೆ ಅನಿಶಾ.ಕೌನ್ಸಿಲರ್ ಭೇಟಿ ಮಾಡಿದ ದೀಪಿಕಾ

ದೀಪಿಕಾಳಲ್ಲಿ ಆಗುವ ಬದಲಾವಣೆ ನಮ್ಮ ಅಮ್ಮನಿಗೆ ಗೊತ್ತಾಗತೊಡಗಿತು. ನಿಜಕ್ಕೂ ಆ ಸಂದರ್ಭದಲ್ಲಿ ನಾನು ಅಸಹಾಯಕಳಾಗಿದ್ದೇ. ಕೂಡಲೇ ನಾವು ಕೌನ್ಸಿಲರ್ ಒಬ್ಬರನ್ನು ಭೇಟಿ ಮಾಡಿದೆವು. ನಮ್ಮ ಕುಟುಂಬಕ್ಕೆ ಆತ್ಮೀಯರೂ ಆಗಿದ್ದರಿಂದ, ಆ ಕೌನ್ಸಿಲರ್ ನಿಂದ ನಮ್ಮ ಅಕ್ಕ ಸಹಜ ಸ್ಥಿತಿಗೆ ಮರಳುವಂತಾಯಿತು. ಆದರೆ ನಮ್ಮ ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತಂತೆ ಕಡಿಮೆ ತಿಳುವಳಿಕೆ ಇದೆ. ಇತರ ಕಾಯಿಲೆಯಂತೆ ಅದನ್ನು ಕೂಡ ಪರಿಗಣಿಸಿ ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಅಪಾಯವಿಲ್ಲ ಎಂದವರು ಹೇಳಿದ್ದಾರೆ.2015ರಲ್ಲಿ ‘ಬರ್ಕಾ ದತ್’ ಅವರೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾನು ಖಿನ್ನತೆಯಿಂದಾಗಿ ಯಾವ ರೀತಿಯಾಗಿ ಸಮಸ್ಯೆಯನ್ನು ಎದುರಿಸಿದೆ ಎಂದು ನಟಿ ದೀಪಿಕಾ ಪಡುಕೋಣೆ ವಿವರಿಸಿದ್ದರು. ಅಲ್ಲದೆ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದೀಗ ‘ದಿ ಲಿವ್ ಲವ್ ಲಾಫ್ ಪೌಂಡೇಷನ್’ ನಡೆಸುತ್ತಿದ್ದು, ಮಾನಸಿಕ ಆರೋಗ್ಯದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

Tags

Related Articles