ಚಿತ್ರ ವಿಮರ್ಶೆಗಳುಸುದ್ದಿಗಳು

ಅನ್ಯಾಯ ಕಂಡರೆ ಅಬ್ಬರಿಸೋ ಕೆಂಡದಂಥಾ ಒಡೆಯ!

ರೇಟಿಂಗ್: 4/5

ಈ ವರ್ಷ ಒಂದರ ಹಿಂದೊಂದರಂತೆ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದಾರೆ. ಈ ವರ್ಷದಲ್ಲಿಯೇ ಹ್ಯಾಟ್ರಿಕ್ ಗೆಲುವು ದಾಖಲಿಸುವಂತೆ ಇದೀಗ ಒಡೆಯ ಚಿತ್ರ ತೆರೆ ಕಂಡಿದೆ. ಎನ್. ಸಂದೇಶ್ ಸಂದೇಶ್ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಒಡೆಯ ಎಲ್ಲರ ನಿರೀಕ್ಷೆಯಂತೆಯೇ ಮಾಸ್ ಮತ್ತು ಫ್ಯಾಮಿಲಿ ಕಂಟೆಂಟಿನಿಂದ ಮೈ ಕೈ ತುಂಬಿಕೊಂಡು ಪ್ರೇಕ್ಷಕರ ಮುಂದೆ ನಿಂತಿದ್ದಾನೆ. ಅಭಿಮಾನಿಗಳ ಪಾಲಿಗೆ, ಫ್ಯಾಮಿಲಿ ಪ್ರೇಕ್ಷಕರೂ ಸೇರಿದಂತೆ ಎಲ್ಲರ ಪಾಲಿಗೂ ವರ್ಷದ ಕೊನೆಯಲ್ಲೊಂದು ಹಬ್ಬ ಸೃಷ್ಟಿಯಾದಂತೆ ಈ ತೆರಗಂಡಿದೆ.

ಇದು ಎಂ.ಡಿ ಶ್ರೀಧರ್ ನಿರ್ದೇಶನದ ಚಿತ್ರ. ಆರಂಭದಿಂದಲೂ ದರ್ಶನ್ ಅವರನ್ನು ಒಡೆಯನಾಗಿ ವಿಭಿನ್ನವಾದ ಗೆಟಪ್ಪಿನಲ್ಲಿ ತೋರಿಸಲಾಗಿದೆ ಎಂಬ ಸುಳಿವುಗಳು ಜಾಹೀರಾಗುತ್ತಾ ಬಂದಿದ್ದವು. ಈ ಸಿನಿಮಾದಲ್ಲಿ ದರ್ಶನ್ ಅದಕ್ಕೆ ತಕ್ಕುದಾಗಿಯೇ ಒಡೆಯನಾಗಿ ಅಬ್ಬರಿಸಿದ್ದಾರೆ. ಅವರದ್ದಿಲ್ಲಿ ಅನ್ಯಾಯ ಕಂಡರೆ ಅದಕ್ಕೆದುರಾಗಿ ನಿಂತ ಅಬ್ಬರಿಸಿವ ಕೆಂಡದಂಥಾ ಪಾತ್ರ. ಆದರೆ ಅದು ತನ್ನ ತಮ್ಮಂದಿರೂ ಮತ್ತು ಪ್ರೀತಿ ಪಾತ್ರರ ಮುಂದೆ ತಣ್ಣಗಾಗುತ್ತದೆ. ಮಗುವಾಗಿ ಬಿಡುತ್ತದೆ. ಇಂಥಾ ಶೇಡು ಹೊಂದಿರೋ ಗಜೇಂದ್ರನ ಪಾತ್ರವನ್ನು ದರ್ಶನ್ ಆವಾಹಿಸಿಕೊಂಡು ನಟಿಸಿರುವ ರೀತಿಯೇ ಈ ಸಿನಿಮಾದ ಪ್ಲಸ್ ಪಾಯಿಂಟ್. ಅದಕ್ಕೆ ಇಡೀ ತಾರಾಗಣವನ್ನು ಪೂರಕವಾಗಿ ಸಜ್ಜುಗೊಳಿಸಿರೋ ರೀತಿಯೇ ಒಡೆಯನಿಗೆ ಮತ್ತಷ್ಟು ಖದರ್ ತುಂಬಿದೆ.

ಆತ ತನ್ನ ಕಂಪೆನಿ, ವ್ಯವಹಾರ ಅಂತ ಬ್ಯುಸಿಯಾಗಿರೋ ಗಜೇಂದ್ರ. ಆತನ ಪಾಲಿಗೆ ತಮ್ಮಂದಿರೆಂದರೆ ಜೀವ ಮತ್ತು ಜಗತ್ತು. ಅವರ ಕೂದಲು ಕೊಂಕದಂತೆ ನೋಡಿಕೊಂಡು ಮುಂದುವರೆಯೋ ಗಜೇಂದ್ರನದ್ದು ಕರಡಿ ಪ್ರೀತಿ. ಅದು ಯಾವ ಮಟ್ಟಕ್ಕಿರುತ್ತದೆಯೆಂದರೆ ಮದುವೆಯಾಗಿ ಹೆಂಡತಿಯರ ಪ್ರವೇಶವಾದರೆ ಎಲ್ಲಿ ಅಣ್ಣತಮ್ಮಂದಿರ ನಡುವೆ ಬಿರುಕು ಬರುತ್ತದೋ ಎಂಬ ಭಯದಲ್ಲಿ ಆಜನ್ಮ ಬ್ರಹ್ಮಚರ್ಯ ಪಾಲಿಸೋ ಸಂಕಲ್ಪ ತೊಡುತ್ತಾನೆ. ತನ್ನ ತಮ್ಮಂದಿರೂ ಅದನ್ನೇ ಪರಿಪಾಲಿಸಬೇಕೆಂದು ಬಯಸುತ್ತಾನೆ. ಆದರೆ ಅಣ್ಣನ ಮೇಲೆ ಅಗಾಧ ಪ್ರೀತಿ ಹೊಂದಿರೋ ತಮ್ಮಂದಿರು ತಲಾ ಒಬ್ಬೊಬ್ಬ ಹುಡುಗೀರಿಗೆ ಗಾಳ ಹಾಕಿರುತ್ತಾರೆ. ಅದನ್ನು ಜಯಿಸಿಕೊಳ್ಳಲು ಅಣ್ಣನನ್ನೂ ಲವ್ವಲ್ಲಿ ಬೀಳುವಂತೆ ಮಾಡುತ್ತಾರೆ.

ಈ ಫ್ಯಾಮಿಲಿ ಕಥೆಯೊಂದಿಗೆ ಜನಸಾಮಾನ್ಯರನ್ನು ಕಾಡುವ ರಕ್ಕಸರ ವಿರುದ್ಧ, ರೈತರ ಪರವಾಗಿ ನಮಿಂತು ಬಡಿದಾಡುತ್ತಲೇ ಇರುವ ಛಾಯೆಯೂ ಈ ಗಜೇಂದ್ರನೆಂಬ ಪಾತ್ರಕ್ಕಿದೆ. ಹೇಳಿಕೇಳಿ ದರ್ಶನ್ ಮಾಸ್ ಲುಕ್ಕಿಗೆ ಹೇಳಿ ಮಾಡಿಸಿದಂಥಾ ನಟ. ಅವರನ್ನು ಅಂಥಾ ಪಾತ್ರದಲ್ಲಿ ನಿರ್ದೇಶಕರು ಪರಿಣಾಮಕಾರಿಯಾಗಿಯೇ ತೋರಿಸಿದ್ದಾರೆ. ಶರತ್ ಲೋಹಿತಾಶ್ವ, ರವಿಶಂಕರ್ ಸೇರಿದಂತೆ ಎಲ್ಲ ಪಾತ್ರ ವರ್ಗವೂ ಚೆಂದಗೆ ನಟಿಸಿದೆ. ಅರ್ಜುನ್ ಜನ್ಯಾ ಸಂಗೀತವೂ ಹಿತಮಿತವಾಗಿ ಒಡೆಯನ ಅಬ್ಬರಕ್ಕೆ ಸಾಥ್ ಕೊಟ್ಟಿದೆ. ಎನ್ ಸಂದೇಶ್ ಈ ಸಿನಿಮಾವನ್ನು ಅದ್ದೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಇದು ಈ ವರ್ಷದ ಕಡೇಯ ಕ್ಷಣಗಳನ್ನು ನೆನಪಲ್ಲಿಟ್ಟುಕೊಳ್ಳುವಂತೆ ಮೂಡಿ ಬಂದಿರುವ ಚೆಂದದ ಚಿತ್ರ.

#balkaninews #odeyakannadamoviereview #darshan

Tags