ಸುದ್ದಿಗಳು

ಹಾಡಿನ ಮೂಲಕ ಸೌಂಡ್ ಮಾಡುತ್ತಿರುವ ‘ಮಿಸ್ಟರ್ ಚೀಟರ್ ರಾಮಾಚಾರಿ’

ಈ ರಾಮಾಚಾರಿ ಅನ್ನುವ ಹೆಸರು ಬಹುಶಃ ಕನ್ನಡ ಚಿತ್ರರಂಗಕ್ಕೆ ಹಾಗೂ ಕೆಲವು ಸ್ಟಾರ್ ಗಳಿಗೆ ಅದೃಷ್ಟದ ಬಾಗಿಲನ್ನು ತೆರೆದಿದೆ ಎಂದೇ ಹೇಳಬಹುದು.

ಕನ್ನಡ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದ್ದ ನಾಗರಹಾವು ಸಿನಿಮಾದ ನಾಯಕನ ಹೆಸರಾದ ರಾಮಾಚಾರಿ ಆಗಿನ ಕಾಲದಲ್ಲಷ್ಟೇ ಅಲ್ಲದೇ ಈಗಿನ ಕಾಲದ ಸಿನಿಮಾ ಪ್ರಿಯರ ಬಾಯಲ್ಲೂ ತನ್ನ ತಾಜಾತನವನ್ನು ಉಳಿಸಿಕೊಂಡಿದೆ.

ಆಗ ಸೃಷ್ಟಿಯಾದ ‘ರಾಮಾಚಾರಿ’ ಹವಾ ನಂತರ ಬಿಡುಗಡೆಯಾದ ಯಶ್ ನಟನೆಯ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಸಿನಿಮಾದ ಮುಖಾಂತರ ಮತ್ತೆ ಪ್ರಚಲಿತಕ್ಕೆ ಬಂದು ಸಿನಿಮಾ ಸಕ್ಸಸ್ ಆಗಿ ದಾಖಲೆ ಬರೆಯುವುದರ ಜೊತೆಗೆ ಯಶ್ ಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತ್ತು. ಆ ಸಿನಿಮಾದಲ್ಲಿ ನಟಿಸಿದ , ಕೆಲಸ ಮಾಡಿದವರೆಲ್ಲಾ ಇವತ್ತು ಸ್ಟಾರ್ ಗಳಾಗಿದ್ದಾರೆ.

ಈಗ ಅದೇ ಸಾಲಿಗೆ ಸೇರುವ ಹಂಬಲ ಹೊತ್ತು ಸಂಪೂರ್ಣ ಹೊಸಬರು, ಸಿನಿಮಾ ಬಗ್ಗೆ ಪ್ರೀತಿ , ಅಭಿರುಚಿವುಳ‍್ಳ, ಪ್ರತಿಭಾವಂತರ ತಂಡವೊಂದು ‘ಮಿಸ್ಟರ್ ಚೀಟರ್ ರಾಮಾಚಾರಿ’ ಅನ್ನುವ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಉತ್ತರ ಕರ್ನಾಟಕ ಮೂಲದವರಾದ ಕಲಾವಿದೆ, ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿರುವ ಪ್ರವೀಣಾ ಕುಲಕರ್ಣಿ ಹಾಗೂ ಅವರ ಪತಿ ಮೂಲತಃ ಸಾಪ್ಟವೇರ್ ಇಂಜಿನಿಯರು ಆಗಿರುವ ರವೀಂದ್ರ ಕುಲಕರ್ಣಿಯವರು ಸೇರಿ ನಿರ್ಮಿಸುತ್ತಿರುವ ಈ ಹೊಸ ರೀತಿಯ ಚಿತ್ರವನ್ನು , ಖ್ಯಾತ ನಟ-ನಿರ್ದೇಶಕ ಉಪೇಂದ್ರರವರ ಪಕ್ಕಾ ಅಭಿಮಾನಿಯಾದ ‘ರಾಮಾಚಾರಿ’ ಎಂಬ ಪ್ರತಿಭಾವಂತ ಯುವ ನಿರ್ದೇಶಕ, ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಒಂದು ಹಾಡನ್ನು ರಿಲೀಸ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರತಂಡ ಈಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಅದೀಗ ಎಲ್ಲೆಡೆ ವೈರಲ್ ಆಗಿ ಮತ್ತೆ ಎಲ್ಲರಿಂದ ಪ್ರಶಂಸೆ ಪಡೆದುಕೊಂಡು ಸಿನಿಮಾ ಗೆಲ್ಲುವ ಶುಭ ಸೂಚನೆಯನ್ನು ನೀಡಿರುವುದು ನಿಜಕ್ಕೂ ಎಲ್ಲರಲ್ಲೂ ಹರ್ಷವನ್ನುಂಟು ಮಾಡುತ್ತದೆ.

ದಿನನಿತ್ಯ ನಡೆಯುವ ಸಣ್ಣಪುಟ್ಟ ಮೋಸದ ಜತೆಗೆ ವ್ಯಭಿಚಾರ, ಡ್ರಗ್ಸ್ ಮಾಫಿಯಾ ಸಂಗತಿಗಳನ್ನೂ ಇಟ್ಟುಕೊಂಡು, ನೋಟು ಅಪಮೌಲೀಕರಣ ಕುರಿತ ಈ ಕಥೆಯನ್ನು ಚಿತ್ರ ಹೊಂದಿದ್ದು, ಹಾಡು, ಫೈಟ್, ಕಾಮಿಡಿ ಮುಂತಾದ ಕಮರ್ಷಿಯಲ್ ಅಂಶಗಳು ಕೂಡ ಈ ಚಿತ್ರದಲ್ಲಿವೆ. ಚಿತ್ರದ ಹಾಡುಗಳಿಗೆ ಪ್ರದ್ಯೋತನ್ ಸಂಗೀತ ಸಂಯೋಜನೆ ಮಾಡಿದ್ದು, ಇವರು ಈ ಹಿಂದೆ ‘ದೇವ್ರಂತ ಮನುಷ್ಯ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ನಿರ್ದೇಶಕ ರಾಮಾಚಾರಿ ಅವರೇ ಬರೆದಿರುವ “ದಿಲ್ ಇದ್ದವನು ಲವ್ ಮಾಡ್ತಾನೆ” ಹಾಡು ಇದೀಗ ವೈರಲ್ ಆಗಿ ಮೆಚ್ಚುಗೆ ಗಳಿಸಿದ್ದು, ಸ್ವರಾಗ್ ಕೀರ್ತನ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಶ್ರೀಕರ್, ರಾಮಾಂಜನೇಯುಲು, ಶ್ರೀಧರ್, ಮೇಘನಾ, ರಾಶಿ ಮೇಘನಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ರಾಮಾಚಾರಿ ಎನ್ನುವ ಹೆಸರು ಎಲ್ಲರಿಗೂ ಅದೃಷ್ಟ ತಂದುಕೊಟ್ಟಂತೆ ಈ ಹೊಸಬರ ಚಿತ್ರಕ್ಕೂ ಅದೃಷ್ಟ ಕೂಡಿ ಬರಲಿ. ಎಲ್ಲರೂ ಚಿತ್ರರಂಗದಲ್ಲಿ ನೆಲೆಯೂರುವಂತಾಗಲಿ.. ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿರುವ ‘ಮಿ.ಚೀಟರ್ ರಾಮಾಚಾರಿ’ ಯಶಸ್ಸು ಕಾಣಲಿ, ಈ ತರದ ಹೊಸ ಪ್ರತಿಭೆಗಳು , ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಹೆಚ್ಚೆಚ್ಚು ಬರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

Tags