ಸುದ್ದಿಗಳು

ಕ್ರಿಸ್ ಮಸ್ ಗೆ ‘ಡಿ-53’ ಚಿತ್ರದ ಟೈಟಲ್ ಅನಾವರಣ

ದರ್ಶನ್ ಅಭಿನಯಿಸುತ್ತಿರುವ ಮತ್ತೊಂದು ಬಿಗ್ ಬಜೆಟ್ ಸಿನಿಮಾ

ಬೆಂಗಳೂರು,ಡಿ.3: ‘ಚೌಕ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ತರುಣ್ ಸುಧೀರ್ ನಟ ದರ್ಶನ್ ರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಸುದ್ದಿಯಾಗಿತ್ತು ಹಾಗೆಯೇ ಫಸ್ಟ್ ಲುಕ್ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಆದರೆ ಚಿತ್ರದ ಟೈಟಲ್ ಮಾತ್ರ ಬಹಿರಂಗವಾಗಿರಲಿಲ್ಲ.

ಕ್ರಿಸ್ ಮಸ್ ಗೆ ಟೈಟಲ್ ಬಹಿರಂಗ

ದರ್ಶನ್ ಅಭಿನಯಿಸುತ್ತಿರುವ 53 ನೇ ಚಿತ್ರದ ಟೈಟಲ್ ಇದೇ ಕ್ರಿಸ್ ಮಸ್ ಹಬ್ಬದಂದು ಲಾಂಚ್ ಆಗದಿದೆ. ಈಗಾಗಲೇ ಈ ಚಿತ್ರಕ್ಕಾಗಿ ‘ರಾಬರ್ಟ್’ ಅಥವಾ ‘ಕಾಟೇರ’ ಎಂಬ ಹೆಸರನ್ನು ಇಡಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಚಿತ್ರತಂಡದವರು, ‘ಕ್ರಿಸ್ ಮಸ್ ಗೆ ಟೈಟಲ್ ಅನ್ನು ಅನಾವರಣ ಮಾಡಲಾಗುತ್ತಿದೆ. ಅಲ್ಲಿಯವರೆಗೂ ನಿರೀಕ್ಷಿಸಿ’ ಎನ್ನುತ್ತಿದ್ದಾರೆ.

‘ರಾಬರ್ಟ್’ ಹೆಸರು ಸೂಕ್ತ

ಈ ಹಿಂದೆ ‘ಚೌಕ’ ಚಿತ್ರದಲ್ಲಿ ರಾಬರ್ಟ್ ಅನ್ನುವ ಪಾತ್ರವನ್ನು ದರ್ಶನ್ ನಿಭಾಯಿಸಿದ್ದರು. ಈ ಪಾತ್ರವು ಕೆಲವೇ ಕೆಲವು ನಿಮಿಷಗಳಲ್ಲಿ ಮೂಡಿ ಬಂದಿದ್ದರೂ ಸಹ ಅಭಿಮಾನಿಗಳಿಗೆ ಪ್ರಿಯವಾಗಿತ್ತು. ಹೀಗಾಗಿ ಇದೇ ಹೆಸರಿನಲ್ಲಿ ಸಿನಿಮಾ ಮೂಡಿ ಬರಲಿ ಎಂಬುದು ಅಭಿಮಾನಿಗಳ ಆಶಯ.

ಇನ್ನು ರಾಬರ್ಟ್ ಜೊತೆಗೆ ಕಾಟೇರ ಎಂಬ ಶೀರ್ಷಿಕೆಯು ಸಹ ಹರಿದಾಡುತ್ತಿದೆ. ಈ ಕಾಟೇರ ಎನ್ನುವುದು ಉತ್ತರ ಕರ್ನಾಟಕ ಪ್ರಸಿದ್ದ ಕುಸ್ತಿಪಟುವಿನ ಹೆಸರು. ಕುಸ್ತಿ ಅಖಾಡಕ್ಕೆ ನಿಂತರೆ ಈತನನ್ನು ಸೋಲಿಸುವುದು ಅಸಾಧ್ಯದ ಮಾತು. ಈ ‘ಕಾಟೇರ’ ನ ಜೀವನ ಮತ್ತು ಹೆಸರು, ಎರಡೂ ದರ್ಶನ್ ಅವರಿಗೆ ಇಷ್ಟವಾಗಿದೆ.

ಹೀಗಾಗಿ ಯಾವ ಶೀರ್ಷಿಕೆ ಅಂತಿಮವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ‘ಹೆಬ್ಬುಲಿ’ ಖ್ಯಾತಿಯ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ.

Tags