ಸುದ್ದಿಗಳು

ದರ್ಶನ್ ಅಭಿಮಾನಿಯಿಂದ ವಿಶೇಷ ಮದುವೆ ಆಮಂತ್ರಣ

ಬೆಂಗಳೂರು, ಆ.21: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲಿನ ಅಭಿಮಾನಕ್ಕೆ ಸರಿಸಾಟಿ ಎಂಬಂತೆ ಅವರ ಅಭಿಮಾನಿಯೊಬ್ಬರು ಮದುವೆಯ ಆಮಂತ್ರಣ ಪತ್ರದಲ್ಲಿ ದರ್ಶನ್ ಫೋಟೋ ಹಾಕಿಸಿ ತಮ್ಮ ನಟನ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.

ಅನು-ವಿಜಯ್ ದಂಪತಿಗಳು

ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿರುವ ಅನು-ವಿಜಯ್ ಎಂಬುವವರು ಈ ಮದುವೆ ಆಮಂತ್ರಣದಲ್ಲಿ ತೂಗುದೀಪ ಶ್ರೀನಿವಾಸ್ ಆಶೀರ್ವಾದದೊಂದಿಗೆ ಅಂತ ಮುದ್ರಿಸಿ ತಮ್ಮ ಅಭಿಮಾನದ ಪರಕಾಷ್ಠೆಯನ್ನು ಮೆರೆದಿದ್ದಾರೆ. ಈಗಾಗಲೇ ಈ ಜೋಡಿ ದರ್ಶನ್ ಹಾಗೂ ದಿನಕರ್ ತೂಗುದೀಪ್ ಅವರನ್ನು ಆಹ್ವಾನ ನೀಡಿ ಅವರೊಂದಿಗೆ ಫೋಟೋವನ್ನು ತೆಗೆಸಿಕೊಂಡಿದೆ.

ತೂಗುದೀಪ ಶ್ರೀನಿವಾಸ್ ಅವರ ಆಶೀರ್ವಾದ

ಸಾಮಾನ್ಯವಾಗಿ ಮದುವೆಯ ಕರೆಯೋಲೆಯಲ್ಲಿ ದೇವರ ಆಶೀರ್ವಾದದೊಂದಿಗೆ ಎಂದು ಬರೆಸುತ್ತಾರೆ. ಆದರೆ ಈ ಕರೆಯೋಲೆಯಲ್ಲಿ ಕಲಾವಿದರಾದ ತೂಗುದೀಪ ಶ್ರೀನಿವಾಸ್ ಅವರ ಹೆಸರನ್ನು ನಮೂದಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಕೆ.ಆರ್ ನಗರದ ನಾಗೇಂದ್ರ

ಈ ಹಿಂದೆ ಇದೇ ರೀತಿ ದರ್ಶನ್ ಅವರ ಅಭಿಮಾನಿ ಕೆ.ಆರ್ ನಗರದ ನಾಗೇಂದ್ರ ಎನ್ನುವವರು ಸಹ ಇದೇ ರೀತಿಯಲ್ಲಿ ತಮ್ಮ ಮದುವೆಯ ಕರೆಯೋಲೆಯನ್ನು ಮುದ್ರಿಸಿದ್ದರು.

ಕೊಡಗು ಜನತೆಗೆ ಸಹಾಯ

ಇದರೊಂದಿಗೆ ದರ್ಶನ್, ಪ್ರವಾಹ ಬಂದು, ಹಾನಿಗೊಳಗಾದ ಕೊಡಗು ಜನತೆಗೆ ಸಹಾಯ ಮಾಡಲು ಕೈ ಜೋಡಿಸಿ ಅಂತ ತಮ್ಮ ಅಭಿಮಾನಿಗಳಿಗೆ ಕರೆಕೊಟ್ಟರು. ಅದಕ್ಕೆ ಪ್ರತಿಸ್ಪಂದಿಸಿದ ಅವರ ಅಭಿಮಾನಿಗಳು ಕೊಡಗು ಜನರ ಸಂಕಷ್ಟಕ್ಕೆ ಕೈ ಜೋಡಿಸಿದ್ದಾರೆ. ಈ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಬಗ್ಗೆ ಹೇಗೆಲ್ಲಾ ಅಭಿಮಾನವನ್ನು ಹೊಂದಿರುತ್ತಾರೆ ಎಂಬುದಕ್ಕೆ ಈ ಒಂದು ಘಟನೆಯೂ ಸಾಕ್ಷಿಯಾಗಿದೆ.

Tags

Related Articles