ಸುದ್ದಿಗಳು

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಿರ್ದೇಶಕರ 50 ಅಡಿ ಎತ್ತರದ ಕಟೌಟ್

ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕರಲ್ಲಿ ಒಬ್ಬರು. ಕುಚ್ಚಿಕೂ ಕುಚ್ಚಿಕು ಚಿತ್ರ ಪೂರ್ಣಗೊಂಡ ನಂತರ ಅಕಾಲಿಕ ಮರಣ ಹೊಂದಿದ್ದ ಡಿ. ಬಾಬು ಅವರ ಕೊನೆಯ ಚಿತ್ರವು ಇಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಒಂದು ಚಿತ್ರಕ್ಕೆ ಕಥೆ, ಕಲಾವಿದರು ಹೇಗೆ ಮುಖ್ಯವಾಗುತ್ತದೋ ಹಾಗೆಯೇ ಚಿತ್ರದ ನಿರ್ದೇಶಕರೂ ಸಹ ಮುಖ್ಯ ಪಾತ್ರ ವಹಿಸುತ್ತಾರೆ. ಅವರು ತೆರೆಯ ಹಿಂದೆ ನಿಂತು ತಮ್ಮ ಕೆಲಸವನ್ನು ಮಾಡುತ್ತಾರೆ. ಆದರೆ ಯಾವುದೇ ಚಿತ್ರ ತೆರೆಕಂಡರೂ ಅಲ್ಲಿ ಕಾಣ ಸಿಗುವುದು ಕಲಾವಿದರ ಆಳೆತ್ತರದ ಕಟೌಟ್. ಆದರೆ ಈಗೀಗ ಚಿತ್ರದ ಕ್ಯಾಪ್ಟನ್ ಅಂದರೆ ನಿರ್ದೇಶಕರ ಕಟೌಟ್ ಅನ್ನೂ ಸಹ ಚಿತ್ರಮಂದಿರದ ಎದುರು ನಿಲ್ಲಿಸುತ್ತಿದ್ದಾರೆ.

ನಿರ್ದೇಶಕರ ಕಟೌಟ್ ಅನ್ನು ನಿಲ್ಲಿಸುವ ಸಂಪ್ರದಾಯಕ್ಕೆ ಮುನ್ನುಡಿ ಹಾಕಿದವರು ನಿರ್ದೇಶಕ ಪ್ರೇಮ್. ಹೌದು, ಅವರ ಮೊದಲ ಚಿತ್ರ ಕರಿಯ ತೆರೆಗೆ ಬಂದ ದಿನಗಳಂದ್ದು, ಮುಖ್ಯ ಚಿತ್ರಮಂದಿರ ಕಪಾಲಿ ಎದುರಿಗೆ ಪ್ರೇಮ್ ಅವರ ಕಟೌಟ್ ನಿಲ್ಲಿಸಲಾಗಿತ್ತು.
ನಂತರ ಮಠ ಗುರುಪ್ರಸಾದ್ ಅವರ ಮೂರನೇ ಚಿತ್ರ “ಡೈರಕ್ಟರ್ ಸ್ಪೇಷಲ್” ತೆರೆ ಕಂಡಾಗಲೂ ಸಹ ಆ ಸಂಪ್ರದಾಯವನ್ನು ಮುಂದುವರೆಸಿದ ನಿರ್ದೇಶಕರು, ತ್ರಿವೇಣಿ ಚಿತ್ರಮಂದಿರದ ಮುಂದೆ ತಮ್ಮದೇ ಕಟೌಟ್ ನಿಲ್ಲಿಸಿಕೊಂಡಿದ್ದರು. “ಒಂದು ಚಿತ್ರದ ಕಥೆ ಮತ್ತು ಪಾತ್ರಗಳನ್ನು ಕತೆಗಾರ ಸೃಷ್ಟಿಸಿದರೆ, ಅದನ್ನು ನಿರೂಪಿಸುವವರು ಚಿತ್ರದ ನಿರ್ದೇಶಕರು. ಅವರೇ ನಿಜವಾದ ಕ್ಯಾಪ್ಟನ್ “ ಎಂದು ಹೇಳುವ ಮೂಲಕ ಈ ಕಟೌಟ್ ನಿಲ್ಲಿಸುವ ಬಗ್ಗೆ ಹೇಳಿದ್ದರು.

ಇವತ್ತು ತೆರೆ ಕಂಡ ಸ್ನೇಹ, ಪ್ರೀತಿ, ತ್ಯಾಗ ಮತ್ತು, ಮತ್ತು ಕೌಟಂಭಿಕ ಮಹತ್ವವನ್ನು ಸಾರುವ “ಕುಚ್ಚಿಕೂ ಕುಚ್ಚಿಕು” ಚಿತ್ರದ ಮುಖ್ಯ ಚಿತ್ರಮಂದಿರ “ನರ್ತಕಿ”ಯಲ್ಲೂ ನಿರ್ದೇಶಕ ಡಿ. ಬಾಬು ಅವರ 50 ಅಡಿ ಎತ್ತರದ ಕಟೌಟ್ ಅನ್ನು ನಿಲ್ಲಿಸಲಾಗಿದೆ. ಈ ಮೂಲಕ ಚಿತ್ರತಂಡವು ಅವರಿಗೆ ಶೃದ್ದಾಂಜಲಿಯನ್ನೂ ಅರ್ಪಿಸಿದೆ.

ಪ್ರತಿಭಾವಂತರಾಗಿದ್ದ ರಾಜೇಂದ್ರ ಬಾಬು ಕನ್ನಡ, ತೆಲುಗು, ಮಲಯಾಳಂ, ಹಿಂದೀ ಬಾಷೆಗಳ ಐವತ್ತಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಪ್ರಭಾಕರ್ ಅಭಿನಯದ ‘ಜಿದ್ದು’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ, ಮುಂದೆ ನಾನು ನನ್ನ ಹೆಂಡ್ತಿ, ಸ್ವಾಭಿಮಾನ, ಸಂಸಾರನೌಕೆ, ಅಸಂಭವ, ಯುಗಪುರುಷ, ಒಲವಿನ ಉಡುಗೊರೆ, ಹಾಲುಂಡ ತವರು, ರಾಮಾಚಾರಿ, ಅಣ್ಣಯ್ಯ, ಅಪ್ಪಾಜಿ, ಜೀವನದಿ, ಜೋಡಿ ಹಕ್ಕಿ, ಕುರುಬನ ರಾಣಿ, ಪ್ರೀತ್ಸೆ, ಯಾರೇ ನೀನು ಚೆಲುವೆ, ದಿಗ್ಗಜರು, ಹಬ್ಬ, ನಂದಿ, ಸ್ವಾತಿಮುತ್ತು, ಉಪ್ಪಿದಾದ ಎಂಬಿಬಿಎಸ್, ಬೊಂಬಾಟ್, ಬಿಂದಾಸ್, ಆರ್ಯನ್ ಸೇರಿದಂತೆ ಮುಂತಾದ ಪ್ರಖ್ಯಾತ ಚಿತ್ರಗಳನ್ನು ಕೊಟ್ಟಿದ್ದರು.

ಕುಚ್ಚಿಕೂ ಕುಚ್ಚಿಕು ಚಿತ್ರದಲ್ಲಿ ಪ್ರವೀಣ್ ಮತ್ತು ಜೆಕೆ ನಾಯಕರಾಗಿ ಕಾಣಿಸಿಕೊಂಡಿದ್ದು, ಡಿ.ರಾಜೇಂದ್ರಬಾಬು ಅವರ ಮಗಳು ನಕ್ಷತ್ರಾ ಅವರು ಜೋಡಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ ಎನ್.ಕೃಷ್ಣಮೂರ್ತಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಚಿತ್ರಕ್ಕೆ ಎಮ್ ಯೂ ನಂದಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

 

@ ಸುನೀಲ ಜವಳಿ

Tags