ಸುದ್ದಿಗಳು

ದೀಪಿಕಾಳ ಕಲರಿಪಯಟ್ಟು ಸಾಹಸ…!!!

‘ನಾಗಿಣಿ’ ದೀಪಿಕಾ ಇದೀಗ ‘ಚೌಕಟ್ಟು’ ಹೆಸರಿನ ಚಿತ್ರದಲ್ಲಿ ನಟನೆ

ಬೆಂಗಳೂರು,ಸ.12: ‘ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ದೀಪಿಕಾ ದಾಸ್. ಆನಂತರ ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡರು.

ಸದ್ಯ ಕಲರಿಪಯಟ್ಟು ಕಲೆಯ ಮೊರೆ ಹೋಗಿರುವ ದೀಪಿಕಾ ,ಕೈಯಲ್ಲಿ ಕತ್ತಿ ಹಿಡಿದು ತರಬೇತಿ ಪಡೆಯುತ್ತಿದ್ದಾರೆ. ಹಾಗಂತಾ ಇದು ಯಾವುದೇ ಫಿಟ್ ನೆಸ್ ಸಲುವಾಗಿ ಅಲ್ಲಾ, ಬದಲಿಗೆ, ‘ಚೌಕಟ್ಟು’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದಕ್ಕಾಗಿ ಈ ಕಲೆಯನ್ನುಕರಗತ ಮಾಡಿಕೊಳ್ಳುತ್ತಿದ್ದಾರೆ.

ನಾಯಕಿಯಾಗಿ ದೀಪಿಕಾ

‘ಚೌಕಟ್ಟು’ಇದೊಂದು ಥ್ರಿಲ್ಲರ್ ಕಥಾಹಂದರವಿರುವ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಇರಲಿವೆ. ದೀಪಿಕಾ ದಾಸ್ ಹಾಗೂ ನಾಗಿಣಿ ಧಾರಾವಾಹಿಯಲ್ಲಿ ರುದ್ರನ ಪಾತ್ರ ನಿರ್ವಹಿಸುತ್ತಿರುವ ಅರುಣ್ ಕುಮಾರ್ ಒಂದೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಯಕಿ ಪ್ರಧಾನ್ಯತೆಯ ಚಿತ್ರ

ಇದೊಂದು ನಾಯಕಿ ಪ್ರಧಾನ್ಯತೆಯ ಚಿತ್ರವಾಗಿದ್ದು, ಇಡೀ ಚಿತ್ರದಲ್ಲಿ ‘ಕಲರಿಪಯಟ್ಟು’ ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದಲ್ಲಿ ಮಂಗಳೂರಿನ ನಂಟೂ ಇರಲಿದ್ದು, ಭೂತಾರಾಧನೆಯಂಥ ತುಳುನಾಡಿನ ಕಲೆಯನ್ನು ಸಿನಿಮಾದಲ್ಲಿ ತೋರಿಸಲಿದೆ ಚಿತ್ರತಂಡ.

ಚಿತ್ರದ ಬಗ್ಗೆ

ಐವರು ವಿದ್ಯಾರ್ಥಿಗಳ ಗುಂಪು ಚಾರಣಕ್ಕೆ ತೆರಳುತ್ತದೆ. ಅಲ್ಲಿ ಹಲವು ಘಟನೆಗಳು ನಡೆಯುತ್ತವೆ. ಹಾರರ್ ರೀತಿಯಲ್ಲೂ ಕಥೆ ಬಿಚ್ಚಿಕೊಳ್ಳುತ್ತದೆಯಂತೆ. ಇನ್ನು ಈ ‘ಚೌಕಟ್ಟು’ ಚಿತ್ರವನ್ನು ಸಂದೀಪ್ ಕೊಟೆಯಾನ್ ನಿರ್ದೇಶನ ಮಾಡುತ್ತಿದ್ದು, ಪಿ ಕೆ ಹೆಚ್ ದಾಸ್ ಛಾಯಾಗ್ರಹಣವಿದೆ. ಮಂಜುನಾಥ್ ನಿರ್ಮಾಣದ ಸಿನಿಮಾಗೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ 19 ರಂದು ಚಿತ್ರದ ಮುಹೂರ್ತ ಮಾಡಿ ಚಿತ್ರೀಕರಣವನ್ನು ಶುರು ಮಾಡಲಿದೆ ಚಿತ್ರತಂಡ.

 

Tags