ಸುದ್ದಿಗಳು

ನಮ್ಮ ಗುರುತಿನ ಹಿಂದೆ ಸಾಕಷ್ಟು ಶ್ರಮವಿದೆ – ಸರ್ ನೇಮ್ ಬದಲಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಅಂದ್ರು ಡಿಪ್ಪಿ

ಮುಂಬೈ, ಜ.17:

ಮದುವೆಯಾದ ಬಳಿಕ ಸಾಮಾನ್ಯವಾಗಿ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮ ಹೆಸರಿನ ಹಿಂದೆ, ಗಂಡನ ಮನೆಯ ಸರ್ ನೇಮ್ ಬಳಸುವುದು ಸಾಮಾನ್ಯ. ಇದು ಕೇವಲ ಸಾಮಾನ್ಯ ಮಹಿಳೆಯರಲ್ಲಿ ಮಾತ್ರವಲ್ಲ, ಸಿನಿಮಾರರಂಗದಲ್ಲಿನ ತಾರೆಯರಿಗೂ ಅನ್ವಯಿಸುತ್ತದೆ. ಅದೆಷ್ಟೋ ಮಂದಿ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸರ್ ನೇಮ್ ಬದಲಾಯಿಸಿಕೊಂಡಿದ್ದಾರೆ.

ಆದರೆ ಈ ಪದ್ದತಿಯನ್ನು ಸುತಾರಾಂ ವಿರೋಧಿಸಿರುವ ನಟಿ ದೀಪಿಕಾ ಪಡುಕೋಣೆ, ನಾನು ಹಿಂದೆಯೂ ದೀಪಿಕಾ ಪಡುಕೋಣೆ, ಮುಂದೆಯೂ ದೀಪಿಕಾ ಪಡುಕೋಣೆಯೇ ಆಗಿರುತ್ತೇನೆ ಎಂದಿದ್ದಾರೆ. ನಾನು ಇಂದು ದೀಪಿಕಾ ಪಡುಕೋಣೆಯಾಗಿ ದೇಶದ ಗಮನ ಸೆಳೆದಿದ್ದರ ಹಿಂದೆ ನನ್ನ ಸಾಕಷ್ಟು ಶ್ರಮವಿದೆ. ನಮ್ಮದೇ ಆದ ಐಡೆಂಟಿಟಿನ ಪಡೆಯಲು ನಾವು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೀಗಾಗಿ ನಾವು ಹೆಸರು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಡಿಪ್ಪಿ.

ಚಿತ್ರರಂಗ ಹೂವಿನ ಹಾಸಿಗೆಯಾಗಿರಲಿಲ್ಲ

ನಟಿ ದೀಪಿಕಾ ಪಡುಕೋಣೆ ಮಾಡೆಲಿಂಗ್ ಕ್ಷೇತ್ರದಿಂದ ಬಾಲಿವುಡ್ ಗೆ ಎಂಟ್ರಿಯಾದವರು. ಅವರಿಗೆ ಇಲ್ಲಿ ಗಾಡ್ ಫಾದರ್ ಇಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ಆಕೆಯ ಪಾಲಿಗೆ ಹೂವಿನ ಹಾಸಿಗೆಯೂ ಆಗಿರಲಿಲ್ಲ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಅವರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಖಿನ್ನತೆಗೂ ಒಳಗಾಗಿ ಇದೀಗ ಅದರಿಂದ ಯಶಸ್ವಿಯಾಗಿ ಹೊರಬಂದಿದ್ದಾರೆ.  ರಾಮ್ ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳು ಆಕೆಯ ಪಾಲಿಗೆ ಯಶಸ್ಸು ತಂದುಕೊಂಡ ಚಿತ್ರಗಳು. ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳಲ್ಲಿ ನಟಿಸಿದ ದೀಪಿಕಾ ಇದೀಗ ಬಾಲಿವುಡ್ ನ  ನಂಬರ್ ಓನ್ ನಟಿ.

ಅಷ್ಟೇ ಅಲ್ಲ ಮಾಡೆಲಿಂಗ್ ಕ್ಷೇತ್ರದಲ್ಲೂ ಬಹುಬೇಡಿಕೆಯ ನಟಿ. ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ, ತನ್ನ ಬಹುಕಾಲದ ಗೆಳೆಯ ಹಾಗೂ ಪ್ರಿಯತಮ ರಣ್ ವೀರ್ ಸಿಂಗ್ ಅವರ ಕೈ ಹಿಡಿದಿರುವ ನಟಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ವೇಳೆ ರಣ್ ವೀರ್ ಸಿಂಗ್ ಅವರ ಸರ್ ನೇಮ್ ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಇದಕ್ಕೆ ನೀವು ಏನೂ ಹೇಳುತ್ತೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಆಕೆ.

ನಾನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಸರ್ ನೇಮ್ ಬದಲಾಯಿಸಿಕೊಳ್ಳುವುದಿಲ್ಲ. ರಣ್ ವೀರ್ ಸಿಂಗ್ ಸರ್ ನೇಮ್ ಬದಲಾಗಲಿದೆ ಎಂದು ತಮಾಷೆಗೆ ಹೇಳಿದ್ದೆ ಹೊರತು, ನಮ್ಮಿಬ್ಬರ ತಲೆಯಲ್ಲಿ ಇದುವರೆಗೂ ಯಾವತ್ತಿಗೂ ಹೆಸರು ಬದಲಾಯಿಸುವ ಕುರಿತ ವಿಚಾರ ಸುಳಿದಾಡಿಲ್ಲ. ನಾವಿಬ್ಬರು ಈ ಹಿಂದೆ ಯಾವ ರೀತಿ ಗುರುತಾಗಿದ್ದೇವೋ ಅದೇ ಹೆಸರನ್ನು ಮುಂದುವರೆಸುತ್ತೇವೆ. ನಾವಿಬ್ಬರು ಚಿತ್ರರಂಗದಲ್ಲಿ ಬೆಳೆಯಲು ಸಾಕಷ್ಟು ಶ್ರಮಪಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ದೀಪಿಕಾ ಪಡುಕೋಣೆ.

#deepikapadukone #ranveersingh #deepikapadukoneandranveersingh #bollywood #balkaninews

Tags