ಸುದ್ದಿಗಳು

ಸ್ಲಂ ಹುಡುಗನಾದ ‘ಡಾಲಿ’ ಧನಂಜಯ್…!!!

ಸೂರಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟ ಧನಂಜಯ್ ಸ್ಲಂ ಹುಡುಗ

‘ಟಗರು’ ಚಿತ್ರದ ನಂತರ ಬಹುಬೇಡಿಕೆಯ ನಟರಾಗಿರುವ ‘ಡಾಲಿ’ ಧನಂಜಯ್ , ಇದೀಗ ಸೂರಿ ನಿರ್ದೇಶನದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಇದೀಗ ಆ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬೆಂಗಳೂರು, ಆ. 28: ನಟ ಧನಂಜಯ್, ಚಿತ್ರದಿಂದ ಚಿತ್ರಕ್ಕೆ ಭಿನ್ನ ಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಿನಿಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ನಟಿಸಿದ ಮೊದಲ ಚಿತ್ರದಲ್ಲಿ ಗಡ್ಡದಾರಿಯಾಗಿ ಗಮನ ಸೆಳೆದಿದ್ದರು. ನಂತರ ಬಂದ ‘ರಾಟೆ’ಯಲ್ಲಿ ಮುಗ್ಧ ಪ್ರೇಮಿಯಾಗಿದ್ದರು. ಆನಂತರ ‘ಬಾಕ್ಸರ್’ ಆಗಿ, ‘ಅಲ್ಲಮ ಪ್ರಭು’ವಾಗಿ, ‘ಅತೃಪ್ತ ಆತ್ಮ’ ವಾಗಿ ನೋಡುಗರ ಮನ ಸೆಳೆದಿದ್ದರು.

ಪಾಪ್ ಕಾರ್ನ್ ಮಂಕಿ ಟೈಗರ್

ಇನ್ನು ‘ಟಗರು’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಸೂರಿಯವರ ಮುಂದಿನ ಚಿತ್ರ ‘ಪಾಪ್ ಕಾರ್ನ್ ಮಂಕಿ ಟೈಗರ್’. ಈ ಚಿತ್ರದಲ್ಲಿಯೂ ಅವರು ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಅವರು ಸ್ಲಂ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೊತೆಯಾಗಿ ಮೂವರು ನಾಯಕಿಯರು ನಟಿಸುತ್ತಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾದಂತೆ, ಈ ಬಾರಿಯೂ ನಿರ್ದೇಶಕ ಸೂರಿ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ.

ಮೂವರು ನಾಯಕಿಯರು

ಈ ಚಿತ್ರದಲ್ಲಿ ನಾಯಕ ಧನಂಜಯ್ ಗೆ ಮೂವರು ನಾಯಕಿಯರು ಜೊತೆಯಾಗಿದ್ದಾರೆ. ನಿವೇದಿತಾ, ನಿವೇದಿತಾ ಹಾಗೂ ಸಪ್ತಮಿ ಈ ಚಿತ್ರಕ್ಕೆ ನಾಯಕಿಯರಾಗಿದ್ದು, ‘ಟಗರು’ ಚಿತ್ರವನ್ನು ನಿರ್ಮಿಸಿದ ಕೆ.ಪಿ ಶ್ರೀಕಾಂತ್ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಮೊದಲೆಲ್ಲಾ ಪ್ರೇಮಿಯಾಗಿ ಅಭಿನಯಿಸುತ್ತಿದ್ದ ಇವರು, ‘ಟಗರು’ ಚಿತ್ರದಲ್ಲಿ ಖಳನಾಗಿ ಅಭಿನಯಿಸಿ ತನ್ನ ನಟನೆಯ ಸಾಮರ್ಥ್ಯವನ್ನು ತೋರಿಸಿದ್ದರು.

ಚಿತ್ರದ ಮುಹೂರ್ತ

ಇನ್ನು ಈ ಚಿತ್ರದ ಮುಹೂರ್ತ ಸೆಪ್ಟೆಂಬರ್ 12 ಗೌರಿ ಗಣೇಶ ಹಬ್ಬದಂದು ನೆರವೇರಲಿದೆ. ಆನಂತರ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು ನಂತರ ಮುಂಬೈನಲ್ಲಿ ಕೆಲ ಭಾಗದ ಚಿತ್ರೀಕರಣ ನಡೆಯಲಿದೆ. ಇನ್ನುಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ ಬರೆಯುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಅವರ ಛಾಯಾಗ್ರಹಣವಿರಲಿದೆ.

Tags

Related Articles