ಸುದ್ದಿಗಳು

ಸ್ಯಾಂಡಲ್ ವುಡ್ ನ ಮೂವರು ನಿರ್ದೇಶಕರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮೂವರೂ ವಿವಿಧ ರೀತಿಯ ಝೋನರ್ ಸಿನಿಮಾಗಳಿಂದ ಹೆಸರುವಾಸಿಯಾದವರು

ಬೆಂಗಳೂರು.ಫೆ.22: ಚಂದನವನದಲ್ಲಿ ಇಂದು ಮೂವರು ಪ್ರತಿಭಾವಂತ ನಿರ್ದೇಶಕರ ಜನ್ಮದಿನ. ಈಗಾಗಲೇ ನಟನೆ ಮತ್ತು ನಿರ್ದೇಶನದೊಂದಿಗೆ ತಮ್ಮದೇ ಆದಂತ ಪ್ರತಿಭೆಯನ್ನು ತೋರಿದ ಸುರೇಶ್ ಹೆಬ್ಳಿಕರ್, ‘ಬಹದ್ದೂರ್’, ‘ಭರ್ಜರಿ’ ಚಿತ್ರಗಳ ನಂತರ ಸದ್ಯ ‘ಭರಾಟೆ’ ಸಿನಿಮಾ ಮಾಡುತ್ತಿರುವ ಚೇತನ್ ಕುಮಾರ್, ಹಾಗೂ ‘ಎದೆಗಾರಿಕೆ’ ಚಿತ್ರದ ಮಹಿಳಾ ನಿರ್ದೇಶಕಿ ಸುಮನಾ ಕಿತ್ತೂರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸುರೇಶ್ ಹೆಬ್ಳಿಕರ್ : ಇವರು ನಟನೆಯೊಂದಿಗೆ ನಿರ್ದೇಶಕರೂ ಆಗಿದ್ದು ಪರಿಸರವಾದಿಯೂ ಆಗಿದ್ದಾರೆ. ಇವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ‘ಕಾಡಿನ ಬೆಂಕಿ’ ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ , ‘ಉಷಾ ಕಿರಣ’ ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದಿವೆ. ಭಾವುಕ ಪ್ರಣಯ ಚಿತ್ರಿತವಾಗಿರುವ ಅಸಾಮಾನ್ಯ ಕಥಾಹಂದರವನ್ನು ಅವರ ಚಿತ್ರಗಳು ಹೊಂದಿರುತ್ತವೆ.

‘ಭರ್ಜರಿ’ ಚೇತನ್ ಕುಮಾರ್ : ಧ್ರುವ ಸರ್ಜಾ ನಟನೆಯ ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ರಸಿಕರ ಮನ ಗೆದ್ದ ಇವರು ಸದ್ಯ ‘ಭರಾಟೆ’ ಚಿತ್ರವನ್ನು ಮಾಡುತ್ತಿದ್ದಾರೆ. ಇದಾದ ಬಳಿಕ ಪುನೀತ್ ರೊಂದಿಗಿನ ‘ಜೇಮ್ಸ್’ ಚಿತ್ರವು ಶುರುವಾಗಲಿದೆ.

ಸುಮನಾ ಕಿತ್ತೂರ: ಇವರು ಮೂಲತಃ ಪತ್ರಿಕಾ ರಿಪೋರ್ಟರ್ ಮತ್ತು ಸಾಹಿತಿಯಾಗಿದ್ದು, ‘ಆ ದಿನಗಳು’ ಚಿತ್ರದಲ್ಲಿ ಹಾಡನ್ನು ಬರೆಯುವುದರೊಂದಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ನಂತರ ‘ಸ್ಲಂ ಬಾಲಾ’ ಚಿತ್ರದ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡರು. ನಂತರ ‘ಕಳ್ಳರ ಸಂತೆ’, ‘ಎದೆಗಾರಿಕೆ’, ‘ಕಿರುಗೂರಿನ ಗಯ್ಯಾಳಿಗಳು’ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಈ ಮೂವರು ನಿರ್ದೇಶಕರಿಗೆ ಈಗಾಗಲೇ ಅಭಿಮಾನಿಗಳು ಮತ್ತು ಸಿನಿಮಾ ಮಂದಿಯರು ಸಹ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಈ ಮೂವರು ಸದಾ ಯಾವಾಗಲೂ ನಗು ನಗುತ್ತಿರಲಿ ಹಾಗೂ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ಸುದೀಪ್ ಎಪಿಸೋಡ್, ಈ ವಾರ ಪ್ರಸಾರ

#directors, #balkaninews #filmnews, #kannadasuddigalu, #filmnews, #chethankumar, #sumanakittur, #sureshheblikar

Tags