ಬಾಲ್ಕನಿಯಿಂದಸಂಬಂಧಗಳುಸುದ್ದಿಗಳು

‘ಅಂಬರ’ಕ್ಕೇರಿ  ದೂರ ..ಬಹು ದೂರ…  ನಭದಾಚೆಗೆ   ತೆರಳಿತೋ  ಅಂಬಿ ಆತ್ಮ..!

‘ಗಜೇಂದ್ರ’  ನಡೆದದ್ದೇ ದಾರಿ.. ನಡೆದೇಬಿಟ್ಟರಲ್ಲಾ  ತಮ್ಮ ಪ್ರೀತಿಯ ‘ಕುಚ್ಚಿಕೂ’ ಹೋದೆಡೆಗೆ

  ಬಾಲ್ಕನೀ ಸಂಪಾದಕೀಯ   

 

ಕೊನೆಯುಸಿರೆಳೆದು 44 ತಾಸಿನ ಬಳಿಕ  ಮಳವಳ್ಳಿ ಹುಚ್ಚೇಗೌಡ ಅಮರನಾಥ್  ಅಲಿಯಾಸ್ ಅಂಬರೀಶ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ..!!!!!

ಲಕ್ಷಜನ ಸುತ್ತಲಿದ್ದೂ ‘ಅನಾಥ’ಭಾವ ಅನುಭವಿಸಿದ್ದ ಪತ್ನಿ ಸುಮಲತ..?!?

ಅಂಬರೀಶ್ ಮತ್ತೆ ‘ಅಮರ’ನಾಥ್ ರಾದರು..!

ಗೀತೆಯಲ್ಲಿ ಭಗವಂತ ನುಡಿದ ಹಾಗೆ ‘ಜಾತಸ್ಯ ಮರಣಂ ಧ್ರುವಂ..’ ಅರ್ಥಾತ್ , ಹುಟ್ಟಿದ ಜೀವಿಗಳೆಲ್ಲಾ ಸಾಯಲೇಬೇಕು. ಆದರೆ ನಾಣ್ಣುಡಿಯಂತೆ ಶರಣರ ಸಾಧನೆ ಮರಣದಲ್ಲಿ ನೋಡು…ಅಂದರೆ ಶರಣರು, ಭಗವದ್ಭಕ್ತರು ಮಡಿದರೆ ಹೆಚ್ಚು ಮಂದಿ ಬಂದುಸೇರುವರು ಎಂದಲ್ಲ.. ! ಶರಣರು ಅಸಾಮಾನ್ಯ ಮನುಷ್ಯರು. ಅವರ ಸಾಧನೆ ಮಾತಾಡುತ್ತಲೇ ಇರುತ್ತದೆ, ಅಂಥವರ ಸಾಧನೆಗೆ ಜನಮನ್ನಣೆ ಅವರು ಈ ಸಮಾಜದಿಂದ ಅಳಿದುಹೋದ ಬಹುಕಾಲದ ನಂತರವೂ ಉಳಿದಿರುತ್ತದೆ.  ಪ್ರಸಕ್ತಕಾಲದ ಸಿನಿಕವಿ ಯೋಗರಾಜ ಭಟ್ಟರ ಗೀತೆ ಇಲ್ಲಿ ಬಹು ಪ್ರಸ್ತುತ!

..ಗೊಂಬೆ ಆಡ್ಸೋನು …ಮ್ಯಾಲೆ ಕುಂತೋನು…!

…ಹುಟ್ನಿಂದ ಚಟ್ಟಕ್ಕೆ… ಎಷ್ಟಪ್ಪಾ ಮೆಟ್ಟಿಲು…?

…ಕಾಲಾನೆ ನಮ್ಕೈಲಿಲ್ಲ… ನಾವೇನ್ಮಾಡೋಣಾ…?

…ಗಡಿಯಾರ ಕಟ್ಕೊಂಡು … ಡ್ರಾಮಾ ಮಾಡೋಣಾ…!

ಆದರೆ ಈ ಹೊತ್ತು ನಾವು ವಿಚಾರ ಮಾಡ್ತಾ ಇರೋದು ಆ ಶರಣರ ಸುದ್ದಿಯನ್ನಲ್ಲ. ತಮ್ಮ ಬದುಕಿನಲ್ಲಿ ಬಲು ಪ್ರಯಾಸ ಪಟ್ಟು ಬೆಳ್ಳಿತೆರೆಯನ್ನೇರಿ ಆಮೇಲೂ ಬಹು ಪರಿಶ್ರಮ –ಅದೃಷ್ಟ-ಜನಮನ್ನಣೆ ಕೂಡಿಬಂದರೆ ಸಿನೆಮಾವೊಂದರ ನಾಯಕ ನಟ, ಜನನಾಯಕನಾಗುವ ಮಾಸ್ ಹೀರೋ ಆಗುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಾ ಮುಂದೆ ಸಾಧನೆಯ ಹಾದಿಯಲ್ಲಿ ಉತ್ತುಂಗಕ್ಕೇರುತ್ತಾರೆ. ಅದೇ ಮಾದರಿಯಲ್ಲಿ  ಸಾಗಿದ ಜೀವನ ಮಳವಳ್ಳಿ ಹುಚ್ಚೇಗೌಡ ಅಮರನಾಥ್  ಉರುಫ್ ಅಂಬರೀಶ್ ರವರದ್ದು.

ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ 28-30 ಸಲ ಬಾಲಿವುಡ್ ನ ದೇವಾನಂದ್ ಚಿತ್ರಗಳನ್ನು ನೋಡುತ್ತಿದ್ದವರು ಅಂಬಿ. ಆವಾಗೆಲ್ಲಾ ಅಂಬಿಗೆ ರಾಜೇಂದ್ರಸಿಂಗ್ ಬಾಬು ಸದಾ ಸಾಥ್! ಅವರ ಮನೆ, ಅವರಣ್ಣ -ಅಪ್ಪ ನಡೆಸುತ್ತಿದ್ದ ‘ಮಹಾತ್ಮಾ ಪಿಕ್ಚರ್ಸ್’ ಕಚೇರಿ ಇವರುಗಳ ಅಡ್ಡಾ…! ಮುಂದೆ 35-36 ವರ್ಷಗಳಲ್ಲೇ ಲೋಕಸಭಾ ಎಂ.ಪಿ. ಆದ ಮೇಲೆ ನವದೆಹಲಿಯಲ್ಲಿ ಅಂಬಿ ಮೆಚ್ಚಿಕೊಳ್ಳುತ್ತಿದ್ದ ಧರಮೇಂದ್ರ-ಹೇಮಾಮಾಲಿನಿ, ಜಯಾಬಾಧುರಿ, ಜಯಪ್ರದಾ ಮುಂತಾದ ನಟ-ನಟಿಯರೆಲ್ಲಾ ರಾಜ್ಯಸಭಾ ಎಂ.ಪಿ. ಗಳಾಗಿ ದೇಶಾದ್ಯಂತ ಅಂಬಿ ವರ್ಚಸ್ಸು ಬೆಳೆಯಲು ಸಾಧ್ಯವಾಯ್ತು. ಸತ್ಯ ಸಂಗತಿಯೆಂದರೆ ಸಮಗ್ರ ಭಾರತದೇಶದಲ್ಲೇ ಸಕಲ ಭಾಷಾ ಚಿತ್ರರಂಗಗಳಿಂದ ನೂರಾರು ಜಿಗರಿ ದೋಸ್ತ್ ಗಳು ಅಂಬಿ ತೆಕ್ಕೆಯಲ್ಲಿದ್ದರು…ಇದು ಉತ್ಪ್ರೇಕ್ಷೆಯಲ್ಲ.

ಇಂದು, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ರಾಜಧಾನಿಯ ಕಂಠೀರವ ಸ್ಟೇಡಿಯಂ ಗೆ  ಸೇನಾ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಅಂಬಿಯ ಪಾರ್ಥಿವ ಶರೀರ ಅಲ್ಲಿ ಸಾರ್ವಜನಿಕರಿಗೆ ದರ್ಶನವಾದ ಬಳಿಕ 13 ಕಿಮೀ. ರಾಜಧಾನಿಯ ರಾಜಮಾರ್ಗದಲ್ಲಿ ಸಾಗಿತ್ತು. ಇಕ್ಕೆಲಗಳಲ್ಲಿ ಸಾವಿರಾರು  ಅಭಿಮಾನಿಗಳು  ‘ಅಂಬಿ ಅಮರ್ ರಹೇ’ ಎಂದು ಘೋಷಿಸುವುದರ ನಡುವೆ ಮಧ್ಯಾಹ್ನ 3.50 ಕ್ಕೆ ಕಂಠೀರವ ಸ್ಟೂಡಿಯೊ ತಲುಪಿತ್ತು ಅಂಬಿಯ ಶವ ಹೊತ್ತ  ಸಾಲಂಕೃತ ಬೃಹತ್ ವಾಹನ! ಅದರೊಳಗಿಂದ  ಅತೀವ ದುಃಖದಿಂದ ಬಿಕ್ಕುತ್ತಲೇ ಹೊರಬಂದ ಧರ್ಮಪತ್ನಿ ಸುಮಲತ, ಪುತ್ರ ಅಭಿಷೇಕ್..!

ಆ ಹೊತ್ತಿಗಾಗಲೇ ಚಂದನವನದ  ಯುವನಾಯಕನಟರ ದಂಡೇ ಅಲ್ಲಿಸೇರಿತ್ತು….ಸುದೀಪ್ ಹೊರತಾಗಿ..! ವರನಟ ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಪಾರ್ವತಮ್ಮ ರಾಜ್ ಕುಮಾರ್ ನಂತರ ಇದೀಗ ಅಂಬರೀಶ್ ಗೆ ಸಕಲ ಸರಕಾರೀ ಗೌರವಗಳೊಂದಿಗೆ ವಿದಾಯ ಹೇಳಲಾಯ್ತು. ಉಳಿದವರಿಗಿಂತ ಅಂಬಿ ಕರ್ನಾಟಕ ರಾಜ್ಯ ವಿಧಾನಸಭೆಯ ಓರ್ವ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳಲ್ಲಿ ಮಂತ್ರಿಯಾಗಿ ಈ ಸರಕಾರೀ ಗೌರವಗಳಿಗೆ ಭಾಧ್ಯರಾಗುತ್ತಾರೆ. ಬಾಕಿಯಂತೆ  ಇಂಥಾ  ರಾಜಮರ್ಯಾದೆ ಆಯಾ ಮುಖ್ಯ ಮಂತ್ರಿಗಳ ನಿರ್ಣಯಕ್ಕೆ ಬಿಟ್ಟದ್ದು. ಎಚ್ಡಿ.ಕುಮಾರಸ್ವಾಮಿ, ಸಿದ್ಧರಾಮಯ್ಯ ಮೊದಲ್ಗೊಂಡು ರಾಜಕೀಯ ಮುಖಂಡರು  ಹೂಗುಚ್ಛವಿರಿಸಿ ಅಗಲಿದ ಸಹೋದ್ಯೋಗಿಗೆ ಗೌರವ ಸಮರ್ಪಣೆ ಮಾಡಿದರು.

ರಾಜ್ಯ ಪೋಲೀಸ್ ತುಕಡಿಯಿಂದ ಗನ್ ಸಲ್ಯೂಟ್ ಹಾಗೂ ಕುಶಾಲು ತೋಪುಗಳು ಆಕಾಶಕ್ಕೇರಿದ ಮೇಲೆ ಮುಖ್ಯಮಂತ್ರಿ ಸ್ವತಃ ಅಂಬಿಯ  ಪಾರ್ಥಿವ ಶರೀರಕ್ಕೆ ಹೊದಿಸಿದ  ನಮ್ಮ ರಾಷ್ಟ್ರಧ್ವಜವನ್ನು ಅಂಬಿ ಪತ್ನಿ ಸುಮಲತರಿಗೆ  ಹಸ್ತಾಂತರಿಸಿದರು. ಉಮ್ಮಳಿಸಿ  ಬರುತ್ತಿದ್ದ ದುಃಖವನ್ನು ತಡೆದು ಕೃತಜ್ಞತಾ ಭಾವನೆಯಿಂದ ನೆರೆದ ಜನಸ್ತೋಮಕ್ಕೆ ಧ್ವಜವನ್ನು ಎತ್ತಿಹಿಡಿದು ತೋರಿಸಿದ್ದರು ಸುಮಲತ. ಜನಸ್ತೋಮ ಒಕ್ಕೊರಲಿನಿಂದ  ‘ಅಂಬಿಯಣ್ಣಾ ಮರಳಿ ಬಾ’ ಎಂದು ಕೂಗಿದ್ದರು.

ಆ ಹೊತ್ತಿಗಾಗಲೇ ಅಂಬಿಯ ಪ್ರಾಣವಾಯು ಹಾರಿಹೋಗಿ 43 ತಾಸು ಕಳೆದಿದ್ದವು.  ಮಧ್ಯಾಹ್ನ 2 ಘಂಟೆಯಿಂದ ಬಿಸಿಲಲ್ಲಿ ಕಾದುಕುಳಿತಿದ್ದ ಋತ್ವಿಜರು ವಿದ್ವಾನ್. ನಾಗರಾಜ ದೀಕ್ಷಿತರ ಅಧ್ವರ್ಯತನದಲ್ಲಿ ಶವ ಸಂಸ್ಕಾರ  ಆರಂಭಿಸಿದರು. ಶವವನ್ನು 5.30ಕ್ಕೆ ಚಿತೆಯ ಮೇಲಿರಿಸಲಾಯ್ತು. ಅಂಬಿಯ ಅಣ್ಣ ಡಾ. ಆನಂದ್ ಶವದ ಬಾಯಿಗೆ ಅಕ್ಕಿ ಹಾಕಿದರು.ಅಂಬಿಯ ಬಾಯಿಗೆ ಅಕ್ಕಿಕಾಳು ಹಾಕಿದ ಸುಮಲತ ತನ್ನ ಪತಿಯ ಪಾರ್ಥಿವ ಶರೀರಕ್ಕೆ ಪ್ರದಕ್ಷಿಣೆ ಬಂದು ಪತಿಯ ಪಾದವನ್ನು ಬೊಗಸೆಯಲ್ಲಿ ಹಿಡಿದು ಮೂರುಬಾರಿ ನಮಸ್ಕರಿಸಿದ್ದರು. ಅಂಬಿಯ ಕಾಲಿನ  ಉಂಗುಷ್ಠಗಳ ಮೃದುವಾಗಿ  ಚುಂಬಿಸಿದ್ದರು.

ಇತ್ತ ಮಗನಾದ ಅಭಿಷೇಕ್ ಕೂಡಾ ಅಪ್ಪನ ಶವಕ್ಕೆ ಪ್ರದಕ್ಷಿಣೆ ಬಂದವರು, ಮುಖವನ್ನು ಮುದ್ದಿಸಿ ಆ ಬಹು ಪ್ರಖ್ಯಾತ ಅಪ್ಪನನ್ನು ಬಾರದ ಲೋಕಕ್ಕೆ ಕಳುಹಿಸಿಕೊಟ್ಟರು. ಸುಮಾರು  5.54 ಘಂಟೆಗೆ ಮಣಗಟ್ಟಲೇ ಶ್ರೀಗಂಧದ ಮೊಳಗಾತ್ರದ ಕೊರಡುಗಳಿಂದ, ತುಪ್ಪ-ಕರ್ಪೂರಗಳಿಂದ ಅಣಿಮಾಡಿದ್ದ ಚಿತೆಗೆ ಅಭಿಷೇಕ್ ಅಗ್ನಿ ಸ್ಪರ್ಶ ಮಾಡಿದರು. ಅಂಬಿ ಇನ್ನು ಬರೇ ನೆನಪಾಗಿ ಉಳಿದರು. ‘ಅಂಬರೀಶ್ ಮತ್ತೆ ‘ಅಮರ’ನಾಥ್ ರಾದರು..!’

       -editor@balkaninews.com

Tags

Related Articles