ಬಾಲ್ಕನಿಯಿಂದಸಂದರ್ಶನಸುದ್ದಿಗಳು

ನಟ ಪ್ರೇಮ್ ಸಂದರ್ಶನ: ಮೊದಲಿನ ಗಣೇಶ ಸಂಭ್ರಮ ಈಗಿಲ್ಲ

‘ಪ್ರೇಮಂ ಪೂಜ್ಯಂ’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ನೆನಪಿರಲಿ ಪ್ರೇಮ್ ಅವರು ಇದೀಗ ಗಣೇಶ ಹಬ್ಬದ ಆಚರಣೆಯ ಕುರಿತು ‘ಬಾಲ್ಕನಿ’ಯೊಂದಿಗೆ ಮಾತನಾಡಿದ್ದಾರೆ.

* ಅಶ್ವಿನಿ ಎಚ್.ಆರ್.

ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.  ಸಿನಿಮಾದಲ್ಲಿ ಬ್ಯೂಸಿಯಿದ್ದರೂ ಬಿಡುವು ಮಾಡಿಕೊಂಡು ಹಬ್ಬದ ಸಂಭ್ರಮದಲ್ಲಿದ್ದಾರೆ ತಾರೆಯರು. ಬಹು ನಿರೀಕ್ಷೆಯ ಚಿತ್ರ ‘ಪ್ರೇಮಂ ಪೂಜ್ಯಂ’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ನೆನಪಿರಲಿ ಪ್ರೇಮ್ ಅವರು ಇದೀಗ ಗಣೇಶ ಹಬ್ಬದ ಆಚರಣೆಯ ಕುರಿತು ‘ಬಾಲ್ಕನಿ’ಯೊಂದಿಗೆ ಮಾತನಾಡಿದ್ದಾರೆ.

‘ಚಿಕ್ಕ ವಯಸ್ಸಿನಲ್ಲಿ ಗಣೇಶನನ್ನು ಕೂರಿಸಬೇಕು ಅಂತ ನನಗೆ ಬಹಳ ಆಸೆಯಿತ್ತು. ಆದರೆ ಕೂರಿಸೋಕೆ  ನಮ್ಮ ಬಳಿ ದುಡ್ಡು ಇರುತ್ತಿರಲಿಲ್ಲ. ಕೆಲವರ ಮನೆಯಲ್ಲಿ ಗಣೇಶನನ್ನು ಕೂರಿಸಬಾರದು ಅನ್ನುವ ನಿರ್ಬಂಧಗಳು ಇರುತ್ತಿತ್ತು. ಆದರೆ ನಾನು ನನ್ನ ಅಪ್ಪನನ್ನು ಕಾಡಿ ಬೇಡಿ ಗಣೇಶನನ್ನು ಕೂರಿಸಲು ಗ್ರೀನ್ ಸಿಗ್ನಲ್ ತೆಗೆದುಕೊಂಡೆ. ಆ ನಂತರ ನಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವ ಸಂಪ್ರದಾಯ ಶುರುವಾಯಿತು’ ಎನ್ನುತ್ತಾರೆ ಪ್ರೇಮ್.

ಈಗೆಲ್ಲಾ ಬೋರು 

‘ಆಗೆಲ್ಲಾ ಗಣೇಶ ಹಬ್ಬ ಬಂತೆಂದರೆ ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವು. ಆದರೆ ಬರುಬರುತ್ತಾ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುವುದನ್ನೇ ಬಿಟ್ಟುಬಿಟ್ಟೆ. ಆದರೆ ಸಂತೋಷದ ಸಂಗತಿಯೆಂದರೆ ಗಣೇಶ ಕೂರಿಸುವ ಸಂಪ್ರದಾಯವನ್ನು ನಮ್ಮ ಅಪ್ಪ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.  ನಿಜ ಹೇಳಬೇಕೆಂದರೆ ಮೊದಲಿನ ಗಣೇಶ ಹಬ್ಬದ ಸಂಭ್ರಮ ಈಗಿಲ್ಲ. ಆದರೆ ನಮ್ಮ ಮನೆಯಲ್ಲಿ ಗಣೇಶ ಹಬ್ಬ ಬಂತೆಂದರೆ ಮಕ್ಕಳು ಸಂಭ್ರಮದಿಂದ ಇರುತ್ತಾರೆ. ಅವರ ಸಂಭ್ರಮ ನೋಡೋದೆ ಖುಷಿ’ ಎನ್ನುತ್ತಾರೆ ಅವರು.

ನಮ್ಮ ಮನೆಯಲ್ಲಿ ಸಗಣಿ ಗಣೇಶ

‘ನಾವು ಈ ಬಾರಿ ಸಗಣಿ ಗಣಪ ಕೂರಿಸುತ್ತಿದ್ದೇವೆ.  ಯಾಕೆಂದರೆ ಅದು ತುಂಬಾ ಶ್ರೇಷ್ಠ. ಪೂಜೆಯ ನಂತರ ಅದನ್ನು ಯಾವುದೇ ಗಿಡದ ಬಳಿಯಾದರೂ ಇಡಬಹುದು. ಅದು ಗೊಬ್ಬರವಾಗಿ ಉಪಯೋಗವಾಗುತ್ತದೆ. ಆದ್ದರಿಂದ ಸಗಣಿ ಗಣೇಶ ಉಪಯೋಗಿಸುತ್ತೇವೆ’ ಎನ್ನುತ್ತಾರೆ ಪ್ರೇಮ್.

ಕರ್ಜಿಕಾಯಿ, ಕಡುಬು ಇಷ್ಟ

‘ಮೊದಲೆಲ್ಲಾ ನಾವು ಗಣೇಶ ಹಬ್ಬಕ್ಕೆ ಕಡುಬು, ಕರ್ಜಿಕಾಯಿ ಮಾಡುತ್ತಿದ್ದೆವು. ಆಗೆಲ್ಲಾ ಊರಿನಿಂದ ನೆಂಟರು ಬಂದು ರಾತ್ರಿಯೆಲ್ಲಾ ಕಡುಬು, ಕರ್ಜಿಕಾಯಿ ಮಾಡೋರು. ನಮ್ಮ ಮನೆಯಲ್ಲಿ ಅದು ಒಂದು ತಿಂಗಳು ಸ್ಟಾಕ್ ಇರೋದು. ಈಗ ಅದನ್ನೆಲ್ಲಾ ನೋಡೋಕೆ ಚಾನ್ಸೇ ಇಲ್ಲ ಬಿಡಿ. ಈಗ ಕರ್ಜಿಕಾಯಿ, ಕಡುಬು ಎಲ್ಲಾ ರೆಡಿಮೇಡ್ ಆಗಿ ಸಿಗುತ್ತಿವೆ. ಹೋಳಿಗೆ, ಕರ್ಜಿಕಾಯಿ ಅಂಗಡಿಗಳಿಗೆ ಹೋಗಿ ಕೊಳ್ಳುವುದು ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಪ್ರೇಮ್ ಅವರು, ವಿಶೇಷವಾಗಿ ಗಣೇಶ ಹಬ್ಬದಲ್ಲಿ ಕಡುಬು, ಕರ್ಜಿಕಾಯಿ ಬಹಳ ಇಷ್ಟ ಎಂದು ಹೇಳುವುದನ್ನು ಮರೆಯಲಿಲ್ಲ.

“ಎಲ್ಲರೂ ಗಣೇಶನನ್ನು ಕೂರಿಸಿ. ಗಣೇಶ ವಿಜ್ಞವಿನಾಶಕ. ಮೊದಲನೇ ಪೂಜೆ ಅವನಿಗೆ ಸಲ್ಲಬೇಕು. ಗಣೇಶನನ್ನು ಕೂರಿಸಬೇಕಾದ್ರೆ ಮಾಲಿನ್ಯ ಇಲ್ಲದಿರುವ ಸಗಣಿ ಗಣಪನನ್ನು ಕೂರಿಸಿ. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ”

ಪ್ರೇಮ್, ನಟ

#balkaninews # actorpremkumar #ganeshfestival # interview

Tags