ಸುದ್ದಿಗಳು

ರಾಮನಗರದಲ್ಲಿ ಸಿನಿಮಾ ಯುನಿವರ್ಸಿಟಿ ಹಾಗೂ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ: ಸಿ.ಎಂ ಎಚ್ ಡಿ ಕುಮಾರಸ್ವಾಮಿ

ಇಂದು ನಡೆದ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ

ಬೆಂಗಳೂರು,ನ.30: ಚಂದನವನದ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.

ನುಡಿ ನಮನ ಕಾರ್ಯಕ್ರಮ

ನವೆಂಬರ್ 24 ರ ಶನಿವಾರ ರಾತ್ರಿ ನಟ ಅಂಬರೀಶ್ ಅವರು ಹೃದಯಾಘಾತದಿಂದ ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತಿಮ ಸಂಸ್ಕಾರವು ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. ಹೀಗಾಗಿ ಈ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಹಾಗೆಯೇ ದಿ. ಅಂಬರೀಶ್ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಫಿಲ್ಮ್ ಸಿಟಿ ನಿರ್ಮಾಣ

“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ, ಅಂಬರೀಶ್ ಆಸೆಯಂತೆ ಮೈಸೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಮಾಡಿ, ಅವರ ಹೆಸರಿಡಲಾಗುವುದು. ಹಾಗೆಯೇ ರಾಮನಗರದಲ್ಲಿ ಫಿಲ್ಮ್ ಯೂನಿವರ್ಸಿಟಿ ನಿರ್ಮಾಣ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ನನಗೂ ಅವರಿಗೂ ಉತ್ತಮ ಬಾಂಧವ್ಯ

“ಕನ್ನಡ ಚಿತ್ರರಂಗ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ನಾನು ಕೂಡ ಚಿತ್ರ ವಿತರಕನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಚಿತ್ರ ವಿತರಕನಾಗಿ ನಾನು ಮಾಡಿದ ಮೊದಲ ಮೂರು ಚಿತ್ರಗಳೂ ಯಶಸ್ವಿಯಾಗಿದ್ದವು. ಇನ್ನು ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಅಂಬರೀಷ್ ಅವರು ಕ್ಷಣ ಮಾತ್ರದಲ್ಲಿ ಬಗೆ ಹರಿಸುತ್ತಿದ್ದರು. ರಾಜ್ ಕುಮಾರ್, ವಿಷ್ಣು ವರ್ಧನ್ ನಿಧನದ ನಂತರ ಚಿತ್ರರಂಗಕ್ಕೆ ಅವರು ಬೆನ್ನೆಲುಬಾಗಿ ನಿಂತಿದ್ದರು” ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

Tags