ಸುದ್ದಿಗಳು

ಒಂದೇ ಚಿತ್ರದಲ್ಲಿ ಪವರ್ ಸ್ಟಾರ್ ಆ್ಯಂಡ್ ರಾಕಿಂಗ್ ಸ್ಟಾರ್

ಒಳ್ಳೆಯ ಕಥೆ ಸಿಕ್ಕರೆ ಗ್ಯಾರಂಟಿ ನಟಿಸುತ್ತೇವೆ ಎಂದ ಸ್ಟಾರ್ ಗಳು

ಬೆಂಗಳೂರು.ಫೆ.10

ಸ್ಯಾಂಡಲ್ ವುಡ್ ನಲ್ಲಿ ಒಬ್ಬ ಸ್ಟಾರ್ ನಟನ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟ ಪ್ರೋತ್ಸಾಹಿಸುವುದು ಸಾಮಾನ್ಯವಾಗಿದೆ. ಈಗಾಗಲೇ ಯಶ್ ನಟನೆಯ ‘ಕೆ.ಜಿ.ಎಫ್’ ಚಿತ್ರ ಬಿಡುಗಡೆ ಕಾಣುವಾಗ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಬೆಂಬಲಕ್ಕೆ ನಿಂತಿದ್ದರು. ಹಾಗೆಯೇ ಪುನೀತ್ ಅಭಿನಯದ ‘ನಟಸಾರ್ವಭೌಮ’ ತೆರೆಗೆ ಬರುವಾಗ ಯಶ್ ಈ ಚಿತ್ರದ ಬೆನ್ನಿಗೆ ನಿಂತಿದ್ದರು.

ಇಬ್ಬರೂ ಒಟ್ಟಿಗೆ ಅಭಿನಯಿಸಲಿ

ಪುನೀತ್ ಹಾಗೂ ಯಶ್.. ಇವರಿಬ್ಬರ ಸ್ನೇಹವನ್ನು ಕಂಡ ಪ್ರೇಕ್ಷಕರು ಹಾಗೂ ಸಿನಿಮಂದಿಯರು ಸಹ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಲಿ ಎನ್ನುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎನಿಸುತ್ತಿದೆ. ಹೌದು, ಈ ಬಗ್ಗೆ ಸ್ವತಃ ಇವರಿಬ್ಬರೂ ಮಾತನಾಡಿದ್ದಾರೆ.

ಒಟ್ಟಿಗೆ ನಟಿಸುತ್ತೇವೆ

ಪೂರ್ಣಚಂದ್ರ ತೇಜಸ್ವಿ ಬರೆದ ‘ಜುಗಾರಿ ಕ್ರಾಸ್’ ಕಾದಂಬರಿಯನ್ನು ನಿರ್ದೇಶಕ ಟಿ.ಎಸ್. ನಾಗಾಭರಣ ಈಗ ದೃಶ್ಯವಾಗಿ ಇದೇ ಹೆಸರಿನಲ್ಲಿಯೇ ತೆರೆಯ ಮೇಲೆ ತರುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು ನೆರವೇರಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಯಶ್-ಪುನೀತ್ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

“ನಾವಿಬ್ಬರೂ ಒಂದೇ ಚಿತ್ರದಲ್ಲಿ ನಟಿಸುವುದು ಇಷ್ಟ. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ನಾವು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತೇವೆ” ಎಂದು ಕೈ ಕುಲುಕುತ್ತಾ ಪುನೀತ್- ಯಶ್ ಉತ್ತರಿಸಿದರು. ಈಗಾಗಲೇ ಯಶ್ ಶಿವಣ‍್ಣನೊಂದಿಗೆ ‘ತಮಸ್ಸು’ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಪುನೀತ್ ರೊಂದಿಗೆ ನಟಿಸಬೇಕೆಂಬುದು ಎಲ್ಲರ ಆಶಯ.

ಹೀಗಾಗಿ, ನಾವಿಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಅಂದ ಹಾಗೆ ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ, ಯಾವಾಗ ಸಿನಿಮಾ ಸೆಟ್ಟೇರುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸ್ವಲ್ಪ ಸಮಯ ಕಾಯಲೇಬೇಕು.

ಕ್ಯಾಬ್ ನಲ್ಲಿ ಪ್ರಯಾಣ ಮಾಡಿದ ಪ್ರದೀಪ್ ಹಾಗೂ ಅಹಲ್ಯ

#filmnews, #kannadasuddigalu #punithrajkumar, #yash, #jugaricross #balkaninews

Tags