ಸುದ್ದಿಗಳು

ಸಾಹಿತಿ ದೇವನೂರು ಮಾತಿಗೆ ಧ್ವನಿಗೂಡಿಸಿದ ಹಂಸಲೇಖ!

ನಾಡಿನ ದರ್ಮ ಗ್ರಂಥ ‘ಭಗವದ್ಗೀತೆಯಲ್ಲಿ ಕೆಲವು ಕ್ಯಾನ್ಸರ್‌ ಗೆಡ್ಡೆಗಳಿವೆ ಎಂದುಕನ್ನಡದ ಖ್ಯಾತ ಸಾಹಿತಿ ದೇವನೂರು ಮಹಾದೇವ ಹೇಳಿದ್ದರಲ್ಲಿ ಏನು ತಪ್ಪಿಲ್ಲ’ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರವರು ದೇವನೂರು ಅವರ ಅಭಿಪ್ರಾಯಕ್ಕೆ ತಮ್ಮ ಮಾತನ್ನು ಸೇರಿಸುವುದರ ಮೂಲಕ ಪ್ರಶ್ನಿಸಿದ್ದಾರೆ ಎಮದು ಸುದ್ದಿಯಾಗಿದೆ.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬರಗೂರು ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿ.ರಾಮಕೃಷ್ಣ (ವಿಚಾರ–ವಿಮರ್ಶೆ) ಹಾಗೂ ರೇಖಾ ಕಾಖಂಡಕಿ (ಕಾದಂಬರಿಗಾರ್ತಿ) ಅವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗೆ ಎಸ್‌.ಕೆ.ಭಗವಾನ್‌, ಸಾಹಿತ್ಯ ಕ್ಷೇತ್ರದ ಕೊಡುಗೆ ಗುರುತಿಸಿ ಬಿ.ಎಲ್‌.ವೇಣು ಅವರಿಗೆ ‘ಬರಗೂರು’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಂಸಲೇಖ, ‘ಎಲ್ಲವನ್ನೂ ವಿಮರ್ಶಿಸಿ ತೂಗುವ ಸ್ವಾತಂತ್ರ್ಯ ನಮಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ನಟಿ ಬಿ. ಸರೋಜಾದೇವಿ, ‘ನಾನು ಪತಿಯನ್ನು ಕಳೆದುಕೊಂಡಾಗ ತುಂಬಾ ಸಂಕಷ್ಟದಲ್ಲಿದ್ದೆ. ಆದರೆ, ಮಕ್ಕಳಿಗಾಗಿ ಧೈರ್ಯ ತಂದುಕೊಂಡೆ. ಬರಗೂರು ಅವರು ರಾಜಲಕ್ಷ್ಮಿ ಅವರನ್ನು ದೈಹಿಕವಾಗಿ ಕಳೆದುಕೊಂಡಿದ್ದಾರೆ. ಈ ನೋವಿನಲ್ಲಿ ಅವರು ತಮ್ಮ ಸಾಹಿತ್ಯ ಸೇವೆಯಿಂದ ವಿಮುಖರಾಗದೆ ಇನ್ನಷ್ಟು ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.

ಸಾಹಿತಿ ಬಿ.ಎಲ್‌.ವೇಣು; ‘ಇಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಕಡಿಮೆಯಾಗಿವೆ. ನಾನು ಆರಂಭದಲ್ಲಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಾಗ ಬಹುತೇಕರು ನನ್ನ ವಿರುದ್ಧ ಮಾತನಾಡಿದ್ದರು. ಇವನು ಸಿನಿಮಾ ಸಾಹಿತಿ ಎಂದು ಉಡಾಫೆಯಾಗಿ ಮೂದಲಿಸಿದ್ದರು. ಈಗ ಅವರೇ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ’ ಎಂದು ತಮ್ಮ ವೃತ್ತಿಯ ಆರಂಭದ ದಿನಗಳನ್ನು ಹಂಚಿಕೊಂಡಿದ್ದಾರೆ.

ಎಸ್‌.ಕೆ.ಭಗವಾನ್‌ ಮಾತನಾಡಿ, ‘ಒಂದು ಕಾದಂಬರಿ ಆಧಾರಿತ ಸಿನಿಮಾ ತೆಗೆಯಬೇಕಾದರೆ 10ಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದಬೇಕಾಗುತ್ತಿತ್ತು. ಇದು ನನ್ನ ಜ್ಞಾನವನ್ನು ವಿಸ್ತರಿಸುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ನಿರ್ದೇಶಕರು ಓದುವುದನ್ನೇ ಮರೆತಿದ್ದಾರೆ’ ಎಂದು ತಮ್ಮ  ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅನೇಕ ಸಿನಿಮಾ ದಿಗ್ಗಜರ ಸಮಾಗಮದಲ್ಲಿ ಅನೇಕ ವಿಚಾರಗಳನ್ನು ಅವಲೋಕಿಸುವುದರ ಜೊತೆಗೆ ಸಿನಿಮಾದೊಂದಿಗೆ ತಮ್ಮ ನಂಟನ್ನು ಮುಕ್ತವಾಗಿ ಎಲ್ಲರೂ ಹಂಚಿಕೊಂಡು ಕಾರ್ಯಕ್ರಮದಲ್ಲಿ ನೆರೆದಿರುವ ಯುವ ಪೀಳಿಗೆಗೆ ಸಿನಿಮಾದ ಕುರಿತಾದ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

Tags