ಸುದ್ದಿಗಳು

ಹಿಂದಿಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡ ‘ಅಯೋಗ್ಯ’

ನೀನಾಸಂ ಸತೀಶ್, ರಚಿತಾ ರಾಮ್ ನಟಿಸಿರುವ ‘ಅಯೋಗ್ಯ’ ಚಿತ್ರವು ಸದಾ ಒಂದಲ್ಲಾ ಒಂದು ಕಾರಣಗಳಿಂದ ಸದ್ದು ಮಾಡುತ್ತಿತ್ತು. ಇದೀಗ ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ “ರೂ. 81 ಲಕ್ಷಗಳಿಗೆ” ಮಾರಾಟವಾಗುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ.

ಬೆಂಗಳೂರು, ಆ. 07: ‘ಅಯೋಗ್ಯ’ ಚಿತ್ರವು ಸದ್ಯ ಸೆನ್ಸಾರ್ ಅಂಗಳದಲ್ಲಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸೆನ್ಸಾರ್ ಆಗಲಿದ್ದು, ಮುಂದಿನ ವಾರವೇ ತೆರೆಗೆ ಬರಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ.

 ಡಬ್ಬಿಂಗ್ ಹಕ್ಕುಗಳು

‘ಅಯೋಗ್ಯ’ ಚಿತ್ರವು ಒಬ್ಬೊಬ್ಬ ಕಲಾವಿದರಿಂದ ಒಂದೊಂದು ಹಾಡುಗಳನ್ನು ಬಿಡುಗಡೆ ಮಾಡಿ ಸುದ್ದಿ ಮಾಡುತ್ತಿತ್ತು. ಇದೀಗ ಡಬ್ಬಿಂಗ್ ಮೂಲಕ ಸದ್ದು ಮಾಡುತ್ತಿದೆ. ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಬಾಲಿವುಡ್ ಪ್ರತಿಷ್ಠಿತ “ಇಂಕ್” ಕಂಪೆನಿಯವರು 81 ಲಕ್ಷ ರೂಪಾಯಿಗಳಿಗೆ ಖರೀಧಿಸಿದೆ. ನಟ ಸತೀಶ್ ಅವರ ಸಿನಿಪಯಣದಲ್ಲಿ ಇದು ದೊಡ್ಡ ಮೊತ್ತದ ಡಬ್ಬಿಂಗ್ ಹಕ್ಕು ಎಂಬುದು ಬಲ್ಲವರ ಮಾತು. ಹಾಗೆಯೇ ತಮಿಳು, ತೆಲುಗು ಭಾಷೆಗಳಿಗೆ ರಿಮೇಕ್ ಆಗಲಿದ್ದು, ಈ ಬಗ್ಗೆಯೂ ಮಾತುಕಥೆಗಳು ನಡೆಯುತ್ತಿವೆಯಂತೆ..

ಅಗಸ್ಟ್ 15 ರಂದು ತೆರೆಗೆ

ಎಲ್ಲವೂ ಅಂದುಕೊಂಡಂತಾದರೆ ‘ಅಯೋಗ್ಯ’ ಚಿತ್ರವು ಅಗಸ್ಟ್ 15 ರಂದು ತೆರೆಗೆ ಬರಲಿದೆ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಗುರುವಾರ ಮತ್ತು ಶುಕ್ರವಾರ ತೆರೆ ಕಾಣುವುದು ವಾಡಿಕೆ. ಆದರೆ ಈ ಚಿತ್ರವು ಬುಧವಾರ ತೆರೆಗೆ ಬರುತ್ತಿರುವುದು ವಿಶೇಷ. ಅಂದು ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ ರಜಾ ದಿನವೂ ಆಗಿರುತ್ತದೆ. ಹೀಗಾಗಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆಯೂ ಜಾಸ್ತಿಯಿರುತ್ತದೆ.

ತಾರಾಬಳಗ

ಚಿತ್ರದಲ್ಲಿ ನೀನಾಸಂ ಸತೀಶ್ ಅವರಿಗೆ ರಚಿರಾರಾಮ್ ನಾಯಕಿಯಾಗಿ ನಟಿಸಿದ್ದು, ರವಿಶಂಕರ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದು, ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ , ಪ್ರವೀಣ್ ತೆಗ್ಗಿನಮನೆ ಅವರ ಛಾಯಾಗ್ರಹಣವಿದೆ.

Tags