ಸುದ್ದಿಗಳು

ಜ್ಯೂನಿಯರ್ ನರಸಿಂಹರಾಜು ತೆಗೆದುಕೊಂಡ ಮಹತ್ವದ ನಿರ್ಧಾರ

ಜ್ಯೂನಿಯರ್ ನರಸಿಂಹರಾಜು ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಇನ್ನು ಮುಂದಿನ ದಿನಗಳಲ್ಲಿ ತಮ್ಮ ಹೆಸರಿನ ಹಿಂದಿರುವ ಜ್ಯೂನಿಯರ್ ಕಿತ್ತುಹಾಕಿ, ಅದರ ಬದಲಿಗೆ ಮೈಸೂರು ಅಂತ ಸೇರಿಸಿಕೊಳ್ಳುವುದಕ್ಕೆ ಯೋಚಿಸಿದ್ದಾರೆ. ಆದರೆ ಈಗಾಗಲೇ ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ಈಗ ಹೆಸರಲ್ಲಿ ಬದಲಾವಣೆ ಯಾಕೆ ಎಂಬ ಪ್ರಶ್ನೆಗೆ ಉತ್ತರವೂ ನೀಡಿದ್ದಾರೆ.

“ನಾನು ಚಿತ್ರರಂಗಕ್ಕೆ ಬಂದ ಸಂದರ್ಭದಲ್ಲಿ ಇದ್ದಿದ್ದೇ ಮೂರು ಜ್ಯೂನಿಯರ್ ಗಳು. ಒಬ್ಬರು ಜ್ಯೂನಿಯರ್ ರೇವತಿ, ಇನ್ನೊಬ್ಬರು ಜ್ಯೂನಿಯರ್ ಮೆಹಮೂದ್ ಮತ್ತು ನಾನು. ಈಗ ಸಾಕಷ್ಟು ಜ್ಯೂನಿಯರ್ ಗಳಿದ್ದಾರೆ. ಒಬ್ಬೊಬ್ಬ ಕಲಾವಿದರ ಮೂರು, ನಾಲ್ಕು ಜ್ಯೂನಿಯರ್ ಗಳಿದ್ದಾರೆ. ಕನ್ನಡದಲ್ಲೇ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಹೀಗೆ ಹಲವು ಕಲಾವಿದರಿಗೆ ಹಲವು ಜ್ಯೂನಿಯರ್ಗಳಿದ್ದಾರೆ. ಹಾಗಾಗಿ ಗೊಂದಲ ಬೇಡ. ಹೀಗಾಗಿ ಮೈಸೂರು ನರಸಿಂಹರಾಜು’ ಅಂತ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ಹೇಳುತ್ತಾರೆ.

ಮೈಸೂರಿನ ಗುರುಸ್ವಾಮಿ, ಜ್ಯೂನಿಯರ್ ನರಸಿಂಹರಾಜು ಆಗಿದ್ದು ಹೇಗೆ ಎಂದರೆ, ಹಾಸ್ಯಪ್ರಜ್ಞೆ ನನ್ನಲ್ಲಿ ಸಹಜವಾಗಿಯೇ ಮೂಡಿತು. 40 ವರ್ಷಗಳ ಹಿಂದೆ ಕಾಲೇಜು ಸ್ಟೂಡೆಂಟ್ ಆಗಿದ್ದಾಗ ಅವರ ದಂತಪಂಕ್ತಿಗಳನ್ನು ನೋಡಿ, ಕಾಲೇಜಿನವರೆಲ್ಲಾ ಜ್ಯೂನಿಯರ್ ನರಸಿಂಹರಾಜು ಅಂತ ಕರೆಯುತ್ತಿದ್ದರಂತೆ. ಅದೇ ಹೆಸರಿನಿಂದ ಚಿತ್ರರಂಗಕ್ಕೆ ಬಂದ ಅವರು, 1979ರಲ್ಲಿ ಬಿಡುಗಡೆಯಾದ “ಪಕ್ಕಾ ಕಳ್ಳ’ ಎಂಬ ಚಿತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು.

ವಿಶೇಷವೆಂದರೆ, ಆ ಚಿತ್ರದಲ್ಲಿ ಅವರು ಅಭಿನಯಿಸಿದ್ದು, ನರಸಿಂಹರಾಜು ಅವರ ಮಗನ ಪಾತ್ರದಲ್ಲೇ. ಆ ಚಿತ್ರದ ನಂತರ “ಮಲ್ಲಿಗೆ ಸಂಪಿಗೆ’, “ಗಂಡುಗಲಿ ರಾಮ’, “ಲೀಡರ್ ವಿಶ್ವನಾಥ್’, “ರಂಗನಾಯಕಿ’, “ತಾಯಿಯ ಮಡಿಲಲ್ಲಿ’ ಹೀಗೆ ಒಂದರ ಹಿಂದೊಂದು ಚಿತ್ರದಲ್ಲಿ ನಟಿಸುತ್ತಾ ಹೋದ ಅವರು, ಇದುವರೆಗೂ 580ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಂದೊಮ್ಮೆ ದೆಹಲಿಗೆ ಹೋದಾಗ ಜಸ್ಪಾಲ್ ಭಟ್ಟಿಯ ಕಾಮಿಡಿ ಸ್ಕೂಲ್ ಗೆ ಹೋಗಿದ್ದರಂತೆ. ಯಾಕೆ ಕನ್ನಡಿಗರನ್ನೂ ಹಾಗೆ ನಗಿಸಬಾರದು ಎಂದು, ಎರಡು ವರ್ಷ ಒಂದಿಷ್ಟು ಸಂಶೋಧನೆ ಮಾಡಿ, ತಮ್ಮದೇ ತಂಡ ಕಟ್ಟಿದ್ದಾರೆ. ಆ ತಂಡದ ಮೂಲಕ ರಾಜ್ಯಾದ್ಯಂತ ಸುಮಾರು 900 ಕಾರ್ಯಕ್ರಮಗಳನ್ನು ಕೊಟ್ಟಿದ್ದಾರಂತೆ ನರಸಿಂಹರಾಜು.

Tags

Related Articles

Leave a Reply

Your email address will not be published. Required fields are marked *