ಚಿತ್ರ ವಿಮರ್ಶೆಗಳುಸುದ್ದಿಗಳು

ಚರ್ಚೆಗೆ ಆಹ್ವಾನಿಸುವ ‘ಜಸ್ಟ್ ಲೈಕ್ ಅವರ್ ಪೇರೆಂಟ್ಸ್’!

ಬ್ರೆಜಿಲ್ ಸಿನಿಮಾ ‘ಜಸ್ಟ್ ಲೈಕ್ ಅವರ್ ಪೇರೆಂಟ್ಸ್’ ಸಿನಿಮಾದಲ್ಲಿ ನಾಯಕಿಗೆ ತನ್ನ 37 ನೇ ವಯಸ್ಸಿನಲ್ಲಿ ತಾಯಿ ಬಿಚ್ಚಿಟ್ಟ ಸತ್ಯ ನಾಯಕಿಯ ತಂದೆ ಬೇರೆ ಒಬ್ಬ ವ್ಯಕ್ತಿ ಎನ್ನುವ ಪ್ರಶ್ನೆಯೊಂದಿಗೆ ಶುರುವಾಗಿವ ಚಿತ್ರ! ಸಿಡಿಲಿನಂತೆ ಎರಗುವ ಕಹಿ ಸತ್ಯ ಅರಗಿಸಿಕೊಳ್ಳಲಾಗದೇ ‘ಅದಕ್ಕೇ ಇರಬೇಕು ಅಪ್ಪ ನಿನ್ನ ಬಿಟ್ಟದ್ದು’ ಎಂದು ಹಂಗಿಸುತ್ತಾಳೆ. ‘ಅದೊಂದು ಪರಾವಲಂಬಿ ತಿಗಣೆ, ನಾನೇ ಅವನನ್ನು ಬಿಟ್ಟೆ’ ಎಂದು ಅಷ್ಟೇ ವೇಗವಾಗಿ ಆಕೆ ಉತ್ತರಿಸುತ್ತಾಳೆ.
‘ಛಿ, ಇನ್ನೆಂದೂ ಆಕೆಯ ಮುಖ ನೋಡುವುದಿಲ್ಲ, ಫೋನಿನಲ್ಲೂ ಮಾತನಾಡುವುದಿಲ್ಲ’ ಎಂದು ಉಗ್ರವಾಗಿ ತಾಯಿಯ ನಡೆಯನ್ನು ಪ್ರತಿಭಟಿಸಿದವಳಿಗೆ ತನ್ನ ಕುಟುಂಬದ ಬಗ್ಗೆ, ವೃತ್ತಿ, ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಅತೀವ ಅಕ್ಕರೆ ಬೆರೆತ ಹೆಮ್ಮೆ. ಕೊನೆಗೆ ಆದದ್ದಾದರೂ ಏನು? ಏಕೆ ಹೀಗೆ ಮಾಡಿದೆ ಎಂದು ತಾಯಿಯನ್ನ ಕೇಳಲು ಹೋಗುತ್ತಾಳೆ.

‘ಕಾನ್ಫರೆನ್ಸ್ ಒಂದರಲ್ಲಿ ಭೇಟಿಯಾದವನಿಗೆ ಹುಟ್ಟಿದ್ದು ನೀನು’ ಎಂಬ ಮಾತಿಗೆ ‘ಅರೆ ಅದ್ಹೇಗೆ ಅಷ್ಟು ಸುಲಭವಾಗಿ ಹೇಳಿಬಿಟ್ಟೆ? ಯಾರವನು? ಅವನನ್ನೇ ಪ್ರೀತಿಸಿದ್ದರೆ ಇಲ್ಲೇಕೆ ನೀನು? ಅವನೆಲ್ಲಿ?’ ಎನ್ನುತ್ತಾಳೆ.
‘ಅವನೀಗ ಪ್ರಮುಖ ರಾಜಕೀಯ ಪಕ್ಷದ ಮುಖಂಡ, ಅವನ ಫೋನ್ ನಂಬರ್ ಕೂಡ ಬಳಿ ಇಲ್ಲ, ಇತ್ತೀಚೆಗೆ ಸಿಕ್ಕಾಗ ಅವನ ಇಮೇಜಿಗೆ ಧಕ್ಕೆಯಾಗುತ್ತದೆ ಎಂದು ದೂರವೇ ಉಳಿಯುವ ಮಾತು ಕೊಟ್ಟಿದ್ದೇನೆ’ ಎಂದುಬಿಡುತ್ತಾಳೆ ತಾಯಿ. ಇದನ್ನು ಒಪ್ಪಿಕೊಳ್ಳದ ಆಕೆ ತಾನು ತಂದೆ ಎಂದುಕೊಂಡು ಪ್ರೀತಿಯಿಂದ ಒಡನಾಡಿದವನನ್ನೇ ಹುಡುಕಿ ಹೊರಡುತ್ತಾಳೆ.

ಗೊಂಬೆಯಾಡಿಸುವ ಅವನ ಜೊತೆ ಈಗ ಕಲಾವಿದೆ ಮತ್ತು ಆಕೆಯ ಹರಯದ ಮಗಳು. ಅವರಿಗೆ ಹೊರೆಯಾದ ತಂದೆಯನ್ನೂ ಅವನ ಹರಯದ ಮಗಳನ್ನೂ ತನ್ನೂರಿಗೇ ಬಂದು ಇರುವಂತೆ ಹೇಳಿ, ಕೈಲಾದ ಆರ್ಥಿಕ ಸಹಾಯ ಮಾಡಿ ಪ್ರತ್ಯೇಕವಾಗಿ ಹೋಟೆಲೊಂದರಲ್ಲಿ ಇರಿಸಲು ಯೋಜಿಸುತ್ತಾಳೆ.

ತನ್ನ ಜೈವಿಕ ತಂದೆಯನ್ನೂ ಒಮ್ಮೆ ಕಂಡುಬಿಡಲು ಹೊರಡುತ್ತಾಳೆ. ಅವನ ಜೊತೆಗಿನ ಭೇಟಿ, ಮಾತು ಯಾವುದೂ ಅವಳಿಗೆ ಆಪ್ತವೆನಿಸುವುದಿಲ್ಲ. ಅವನ ಉಡುಗೊರೆಯನ್ನೂ ಧಿಕ್ಕರಿಸಿ ಬಂದುಬಿಡುತ್ತಾಳೆ.

ಇತ್ತ ನಾಯಕಿಯ ಪತಿಯೂ ತನ್ನ ವೃತ್ತಿಯ ಒಡನಾಡಿಯ ಜೊತೆ ಗುಟ್ಟಾಗಿ ಸಂಬಂಧ ಬೆಳೆಸಿರುವುದು ತಿಳಿಯುತ್ತದೆ. ಕೇಳಿದರೆ ಅವನು ಒಪ್ಪದೇ ‘ನೀ ನನ್ನ ಜೊತೆ ಆತ್ಮೀಯವಾಗಿದ್ದು ಎಷ್ಟು ಸಮಯವಾಯಿತು, ದೈಹಿಕ ಸಂಪರ್ಕ ಇಲ್ಲದೇ ಮದುವೆ ಉಳಿಯುತ್ತದೆಯೆ?’ ಎಂದೆಲ್ಲ ವಾದ ಮಾಡುತ್ತಾನೆ. ಸರಿ, ಮದುವೆಯ ಬಂಧ ಉಳಿಯಬೇಕು ಎಂದು ಈಕೆಯ ಪ್ರಯತ್ನ. ರಾಜಿಯಾಗಿ ಇಬ್ಬರೂ ಅನ್ಯೋನ್ಯವಾಗಿ ಇರುವ ಸಮಯ ನಾಯಕಿ ನಿರಾಳ. ಈ ಮಧ್ಯೆ ಕ್ಯಾನ್ಸರ್ ಕೊನೆಯ ಹಂತದಲ್ಲಿರುವ ತಾಯಿಯ ಕೊನೆಯಾಸೆಗಳನ್ನೆಲ್ಲ ಪೂರೈಸುವಷ್ಟು ಸಹನೆ.
ಹೀಗೇ ಒಂದು ದಿನ ತಂದೆಯೊಡನೆ ಇರಲು ಬಂದ ಹರಯದ ಮಗಳು ನಾಯಕಿಯ ಮನೆಗೇ ಬಂದು ಇರುವಂತಾಗುತ್ತದೆ. ಒಂದು ಬಾರಿ ಆಕೆಯ ಸ್ನೇಹಿತೆಯೊಂದಿಗೆ ಮನೆಯಲ್ಲೇ ಅತ್ಯಂತ ಆತ್ಮೀಯ ಭಂಗಿಯಲ್ಲಿರುವುದನ್ನು ಕಂಡು ಇವಳು ಸಿಡಿಮಿಡಿಗೊಳ್ಳುವುದು.
ಮಾತಿಗೆ ಮಾತು ಬೆಳೆದಾಗ ಹೀಗೆ ಕುಟುಂಬಸ್ಥರ ಮನೆಯಲ್ಲಿ ಇದೆಲ್ಲ ಸರಿಬರುವುದಿಲ್ಲ ಎಂದು ನಾಯಕಿ. ‘ಅರೆ ಏನು ಕುಟುಂಬ ಕುಟುಂಬ ಅಂತ ನೀನೊಬ್ಬಳೇ ಬಡಿದಾಡುತ್ತೀ, ಅದೆಲ್ಲ ಏನೂ ಇಲ್ಲ. ಅದೊಂದು ಚೌಕಟ್ಟೇ ಅಲ್ಲ. ಸುಮ್ಮನೆ ನೀವೆಲ್ಲ ಕುಟುಂಬ ಉಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಒಬ್ಬರಿಗೊಬ್ಬರು ಹುಸಿ ಸೋಗಿನಲ್ಲಿ ಇದ್ದೀರಿ. ಮನುಷ್ಯ ಮೂಲತಃ ಬಹುಸಾಂಗತ್ಯ ಬಯಸುವ ಜೀವಿ ಅಂತೆಲ್ಲ ಮ್ಯಾಗಜಿನ್ ಒಂದರಲ್ಲಿ ಮಾನವ ಶಾಸ್ತ್ರಜ್ಞ ಬರೆದ ಲೇಖನ ಓದಲು ಹೇಳುತ್ತಾಳೆ. ಓದಿದ ಇವಳಿಗೂ ಇರಬಹುದೇನೊ ಎನಿಸತೊಡಗುತ್ತದೆ.
ಈ ನಡುವೆ ಪತಿಯೂ ಬೇರೆಡೆ ಆಕರ್ಷಿತನಾಗಿರುವುದು ದೃಢವಾಗುತ್ತದೆ. ಈಕೆಯೂ ಅಕಸ್ಮಾತ್ ಆಗಿ ಕೆಲಸದ ನಿಮಿತ್ತ ಪರವೂರಿಗೆ ಹೋದಾಗ ತನ್ನ ಮಕ್ಕಳ ಸಹಪಾಠಿಯ ತಂದೆಯೊಡನೆ ದೈಹಿಕ ಸಂಪರ್ಕ ಸಾಧ್ಯವಾಗುತ್ತದೆ.ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ತನ್ನ ತಾಯಿ ಅಂದೆಂದೋ ಮಾಡಿದ್ದು ಸಹಜ ಎನಿಸತೊಡ

ಗುವ ಈ ‘ಜಸ್ಟ್ ಲೈಕ್ ಅವರ್ ಪೇರೆಂಟ್ಸ್’ ಸಿನಿಮಾ ನೋಡುಗರ ಮನದಲ್ಲಿ ಆಲೋಚನೆಗಳನ್ನು ಬಿತ್ತುವುದಂತೂ ನಿಜ ಜೊತೆಗೆ ಯಾರು ಸರಿ ಯಾರದು ತಪ್ಪು, ಈ ಎಲ್ಲಾ ಕಾರಣಗಳಿಗೆ ಯಾರು ಹೊಣೆಗಾರರು ಎನ್ನು ಪ್ರಶ್ನೆಗಳು ಸಮೇತ ನೋಡುಗರನ್ನು ಚರ್ಚೆಗೆ ಈ ಸಿನಿಮಾ ಆಹ್ವಾನಿಸುತ್ತದೆ ಎನ್ನಬಹುದು.

Tags

Related Articles

Leave a Reply

Your email address will not be published. Required fields are marked *