ಸುದ್ದಿಗಳು

‘ಕಾಳಿದಾಸ’ ಕನ್ನಡ ಮೇಷ್ಟ್ರಾದ ನವರಸ ನಾಯಕ ಜಗ್ಗೇಶ್

ಇಂದು ಪೋಸ್ಟರ್ ಗಳು ರಿಲೀಸ್ ಆಗಿದ್ದು, ನಾಳೆ ಚಿತ್ರಕ್ಕೆ ಮುಹೂರ್ತ

ಬೆಂಗಳೂರು, ಡಿ.9: ನಟ ಜಗ್ಗೇಶ್ ಇದೀಗ ‘ತೋತಾಪುರಿ’ ಹಾಗೂ ‘ಪ್ರಿಮಿಯರ್ ಪದ್ಮಿನಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಕನ್ನಡದ ಮೇಷ್ಟ್ರಾಗಿಯೂ ಗಮನ ಸೆಳೆಯಲಿದ್ದಾರೆ.

ಹೌದು, ಅವರು ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಮೇಷ್ಟ್ರು ಕಾಳಿದಾಸನಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಭಾಷೆ, ನೆಲ, ಜಲ ವಿಚಾರಗಳು ಸೇರಿದಂತೆ, ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯ ಮಾಡುವವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ.

ಚಿತ್ರದ ಬಗ್ಗೆ

ಅಂದ ಹಾಗೆ ಜಗ್ಗೇಶ್ ಕನ್ನಡದ ಮೇಷ್ಟ್ರಾಗಿ ಅಭಿನಯಿಸುತ್ತಿದ್ದು, ಮೇಘನಾ ಗಾಂವ್ಕರ್ ಅವರಿಗೆ ಜೊತೆಯಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿವೆ. ಇನ್ನು ಚಿತ್ರಕ್ಕೆ ನಾಳೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿದೆ.

ಕವಿರಾಜ್ ನಿರ್ದೇಶನ

ಈ ಹಿಂದೆ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕವಿರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ನಿರ್ದೇಶನದ ಎರಡನೇಯ ಚಿತ್ರದ ಮೂಲಕ ಅವರು ಕನ್ನಡದ ಕಂಪನ್ನು ಹರಡಿಸಲು ಸಿದ್ದರಾಗಿದ್ದಾರೆ.

ಉದಯ್ ಫಿಲಂಸ್ ಲಾಂಛನದಲ್ಲಿ, ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎ.ವಿ ಕೃಷ್ಣಕುಮಾರ್ ಛಾಯಾಗ್ರಹಣವಿದ್ದು , ಗುರುಕಿರಣ್ ಸಂಗೀತ ಸಂಯೋಜಿಸಲಿದ್ದಾರೆ. ಇನ್ನು ಸಾಹಿತಿಯಾಗಿರುವ ನಿರ್ದೇಶಕ ಕವಿರಾಜ್ ಹಾಡನ್ನೇ ಬರೆಯಲಿ, ಕಥೆಯನ್ನೇ ಬರೆಯಲಿ ಅದರಲ್ಲೊಂದು ಸತ್ವ ಮತ್ತು ತತ್ವ ಇರುತ್ತದೆ. ಹೀಗಾಗಿ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವು ಕುತೂಹಲ ಮೂಡಿಸುತ್ತಿದೆ.

Tags