ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ಅಳಿದು ಉಳಿದವರ’ ಅಚ್ಚಳಿಯದ ಕಥನ

ರೇಟಿಂಗ್ಸ್ : 3.5/5

ಕಲಾವಿದರು: ಅಶು ಬೇದ್ರ, ಪವನ್ ಕುಮಾರ್, ಸಂಗೀತಾ ಭಟ್, ಬಿ.ಸುರೇಶ್ ಹಾಗೂ ಇತರರು

ನಿರ್ಮಾಪಕ: ಅಶು ಬೇದ್ರ

ನಿರ್ದೇಶಕ: ಅರವಿಂದ್ ಶಾಸ್ತ್ರಿ

ಅಶು ಬೆದ್ರ ನಿರ್ಮಾಣ ಮತ್ತು ನಿರ್ದೇಶನವನ್ನು ಮಾಡಿದ್ದ ಚಿತ್ರ ‘ಅಳಿದು ಉಳಿದವರು’. ಕೆಲವು ಸಿನಿಮಾಗಳು ಶೀರ್ಷಿಕೆಯಲ್ಲಿಯೇ ಹೊಸತನದ ಘಮಲನ್ನು ಮೆತ್ತಿಕೊಂಡಿರುತ್ತವೆ. ಇಂಥಾ ಸಿನಿಮಾಗಳು ತನ್ನೊಡಲಲ್ಲಿ ಹೊಸತನ ಮತ್ತು ಪ್ರಯೋಗಾತ್ಮಕ ಗುಣಗಳನ್ನು ಬಚ್ಚಿಟ್ಟುಕೊಂಡಿರುವುದರಿಂದಾಗಿ ಪ್ರೇಕ್ಷಕರೆಲ್ಲರೂ ಅವುಗಳತ್ತ ಆಕರ್ಷಿತರಾಗುತ್ತಾರೆ.

ಇಂತಹದ್ದೇ ಗಾಢವಾದ ಕುತೂಹಲ ಮೂಡಿಸುತ್ತಾ ಆಕರ್ಷಣೆ ಹುಟ್ಟಿಸಿದ್ದ ಚಿತ್ರ ‘ಅಳಿದು ಉಳಿದವರು’. ಈ ಸಿನಿಮಾದಲ್ಲೇನೋ ಇದೆ ಎಂಬ ಅಚಲ ಭಾವನೆಯೊಂದನ್ನು ಪ್ರತೀ ಪ್ರೇಕ್ಷಕರಲ್ಲಿಯೂ ಮೂಡಿಸಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಹೊಸ ಬಗೆಯ ಕಥೆ, ವಿನೂತನ ನಿರೂಪಣೆ ಮತ್ತು ಅದಕ್ಕೆ ತಕ್ಕುದಾದ ಪಾತ್ರ ಪೋಷಣೆಯಿಂದ ಅಳಿದು ಉಳಿದವರದ್ದು ಅಚ್ಚಳಿಯದ ಕಥನವಾಗಿ ಬಿಂಬಿತವಾಗಿದೆ.

ಅಶು ಬೆದ್ರ ಈ ವರೆಗೂ ಕಿರುತೆರೆ ಮತ್ತು ಹಿರಿತೆರೆಯಲ್ಲಿಯೂ ನಾಯಕ ನಟನಾಗಿ ಮಿಂಚಿರುವವರು. ಅವರು ಈ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಇದು ಮೊದಲ ಹೆಜ್ಜೆ ಎಂದರೆ ನಂಬಲು ಕಷ್ಟವಾಗುವಂಥಾ ಪ್ರೌಢಿಮೆಯೊಂದಿಗೆ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಕಥೆಯಲ್ಲಿ ಥ್ರಿಲ್ಲಿಂಗ್ ಅಂಶಗಳಿವೆ. ಅದಕ್ಕೆ ಸಾಮಾಜಿಕ ಕಳಕಳಿಯ ಲೇಪವೂ ಇದೆ. ಆದರೆ ಯಾವ ಚೌಕಟ್ಟಿನಲ್ಲಿಯೂ ಬಂಧಿಯಾಗಿ ಕಳೆದು ಹೋಗದೆ ಹೊಸತನದಿಂದ ಕಳೆಗಟ್ಟಿಕೊಂಡಿರುವ ಈ ಚಿತ್ರ ಆ ಗುಣದಿಂದಲೇ ಪ್ರೇಕ್ಷಕರಿಗೆ ಇಷ್ಟವಾಗಿ ಗೆಲುವಿನತ್ತ ಮುನ್ನುಗ್ಗುತ್ತಿದೆ.

ಇಲ್ಲಿ ನಾಯಕ ಪ್ರಸಿದ್ಧ ವಾಹಿನಿಯೊಂದರ ಜನಪ್ರಿಯ ನಿರೂಪಕ, ವಾಸ್ತವ ಮತ್ತು ಮೂಢ ನಂಬಿಕೆಗಳನ್ನು ಮುಖಾಮುಖಿಯಾಗಿಸುವಂಥಾ ಕಾರಣ ಎಂಬ ಕಾರ್ಯಕ್ರಮದ ಮೂಲಕ ದೆವ್ವ ಇಲ್ಲ ಎಂಬುದನ್ನು ಸಾಬೀತುಗೊಳಿಸುತ್ತಾ ಮುಂದುವರೆಯುತ್ತಿರುತ್ತಾನೆ. ಹಾಗೆ ಯಶಸ್ವಿಯಾಗಿ ತೊಂಬತ್ತೊಂಬತ್ತು ಕಂತು ಮುಗಿಸಿಕೊಳ್ಳುವ ಅವನಿಗೆ ನೂರನೇ ಕಂತಿಗೆ ಅಣಿಯಾಗುವಾಗ ಮಹಾ ಸವಾಲು ಎದುರಾಗುತ್ತದೆ.

ದೆವ್ವದ ಕಾಟದ ಗುಮಾನಿಯಿಂದ ಮಾರಾಟವಾಗದೇ ಉಳಿದಿರುವ ಮನೆಯ ಮಾಲೀಕ ಅಲ್ಲಿ ದೆವ್ವ ಇಲ್ಲವೆಂದು ಸಾಬೀತು ಪಡಿಸುವಂತೆ ಸವಾಲು ಹಾಕುತ್ತಾನೆ. ಅದಕ್ಕೆ ಅಂಜದೆ ಎಂಟ್ರಿ ಕೊಟ್ಟಾಗ ಆ ಮನೆಯಲ್ಲಿ ಕಥೆ ಮತ್ತೊಂದು ದಿಕ್ಕಿನ ಹೊಸಾ ಓಘ ಪಡೆದುಕೊಳ್ಳುತ್ತದೆ. ಇಲ್ಲಿ ಮೂಢ ನಂಬಿಕೆಗಳಿಲ್ಲ. ಆದರೆ ಪ್ರತೀ ಹಂತದಲ್ಲಿಯೂ ರೋಚಕತೆ ಇದೆ. ಯಾವ ಬಿಲ್ಡಪ್ಪುಗಳೂ ಇಲ್ಲದಿದ್ದರೂ ಪ್ರತೀ ಸೀನುಗಳೂ ವಿಜೃಂಭಿಸುತ್ತವೆ.

ನಿರ್ದೇಶಕ ಅರವಿಂದ ಶಾಸ್ತ್ರಿ ಅಷ್ಟೊಂದು ಪರಿಣಾಮಕಾರಿಯಾಗಿ ಈ ಚಿತ್ರವನ್ನು ರೂಪಿಸಿದ್ದಾರೆ. ಅಶು ಬೆದ್ರ ನಟನೆಯಂತೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುವಂತಿದೆ. ಸಂಗೀತಾ ಭಟ್ ನಟನೆಯೂ ಅದರಂತೆಯೇ ಇದೆ. ಪವನ್ ಕುಮಾರ್, ಅತುಲ್ ಕುಲಕರ್ಣಿ, ಬಿ ಸುರೇಶ ಮುಂತಾದವರ ಪಾತ್ರಗಳೂ ನೆನಪಿನಲ್ಲುಳಿಯುವಂತೆ ಮೂಡಿ ಬಂದಿವೆ. ಇದೊಂದು ಅಪರೂಪದ ಅನುಭವ ತುಂಬುವಂಥಾ ಚಿತ್ರ. ಇಲ್ಲಿ ಕಥೆಯೂ ಹೊಸಾ ಜಾಡಿನದ್ದು. ಅದನ್ನು ನಿರೂಪಿಸಿರುವ ರೀತಿ ಮತ್ತು ದೃಷ್ಯ ಕಟ್ಟಿರುವ ಬಗೆಗಳೂ ಅಷ್ಟೇ ತಾಜಾತನದಿಂದ ಮೂಡಿ ಬಂದಿವೆ. ಇದು ಪ್ರತೀ ಪ್ರೇಕ್ಷಕರೂ ನೋಡಲೇ ಬೇಕಾದ ಚಿತ್ರ.

ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ವೀಕ್ಷಿಸಿದ ವಿಡಿಯೋ ಪಟ್ಟಿಯಲ್ಲಿ ರೌಡಿ ‘ಬೇಬಿ’

#AliduUlidavaru #KannadaMovie #KannadaFilmReview #KannadaSuddigalu

Tags