ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಬೆಳದಿಂಗಳ ಬಾಲೆಯ `ಬಬ್ರೂ’ವಿನದ್ದು ಥ್ರಿಲ್ಲಿಂಗ್ ಜರ್ನಿ

ರೇಟಿಂಗ್: 3.5/5

ಕಲಾವಿದರು: ಸುಮನ್ ನಗರ್ ಕರ್, ಮಹಿ ಹಿರೇಮಠ್, ಗಾನಾ ಭಟ್ ಇತರರು

ನಿರ್ಮಾಪಕ: ಸುಮನ್ ನಗರ್ ಕರ್

ನಿರ್ದೇಶಕ: ಸುಜಯ್ ರಾಮಯ್ಯ

ಕನ್ನಡ ಸಿನಿಮಾಗಳು ಹಾಲಿವುಡ್ ಮಟ್ಟದಲ್ಲಿ ಮೂಡಿ ಬರಬೇಕೆಂಬುದು ಸಿನಿಮಾ ಸೃಷ್ಟಿಕರ್ತರ ಕನಸು ಮತ್ತು ಪ್ರೇಕ್ಷಕರೆಲ್ಲರ ಸದಾಶಯ. ಇಂಥಾ ವಾತಾವರಣದಲ್ಲಿ ಇದು ಹಾಲಿವುಡ್ ಕನ್ನಡ ಸಿನಿಮಾ ಎಂಬ ಸುಳಿವಿನೊಂದಿಗೆ ಧಾವಿಸಿ ಬಂದಿದ್ದ ‘ಬಬ್ರೂ’ ಚಿತ್ರದತ್ತ ಎಲ್ಲ ವರ್ಗದ ಪ್ರೇಕ್ಷಕರ ಚಿತ್ರವೂ ನೆಟ್ಟುಕೊಂಡಿತ್ತು. ಆ ನಂತರದಲ್ಲಿ ಹಾಡು ಮತ್ತು ಟ್ರೇಲರ್ ಮೂಲಕ ‘ಬಬ್ರೂ’ ಮೇಲಿನ ಭರವಸೆಯೂ ನಿಗಿ ನಿಗಿಸಿತ್ತು. ಇದೀಗ ಈ ಚಿತ್ರ ತೆರೆ ಕಂಡಿದೆ. ಪ್ರೇಕ್ಷಕರೆಲ್ಲ ಯಾವ ರೀತಿಯಲ್ಲಿ ಕಲ್ಪಿಸಿಕೊಂಡಿದ್ದರೋ ಅದನ್ನು ಮೀರಿಸುವ ದೃಶ್ಯಾವಳಿಗಳೊಂದಿಗೆ ಪ್ರೇಕ್ಷಕರನ್ನು ಎದುರುಗೊಂಡಿದೆ.

ಇದು ಅಮೆರಿಕದಲ್ಲಿ ಚಿತ್ರೀಕರಣಗೊಂಡಿರುವುದರ ಜೊತೆಗೆ ಈವರೆಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದಂಥೇ ಅಮೆರಿಕೆಯ ಪ್ರದೇಶಗಳನ್ನು ಸೆರೆಯಾಗಿಸಿಕೊಂಡಿದೆ. ಅದರಲ್ಲಿಯೇ ಈ ಸಿನಿಮಾದ ತಾಜಾತನದ ಗುಟ್ಟು ಅಡಗಿದೆ.

ಅಂದ ಹಾಗೆ ಇದು ಹೇಳಿ ಕೇಳಿ ಅಮೆರಿಕದಲ್ಲೇ ನೆಲೆಸಿರುವವರು ಸೇರಿ ರೂಪಿಸಿರುವ ಚಿತ್ರ. ಅವರಿಗೆಲ್ಲ ಅಲ್ಲಿನ ಪ್ರತೀ ಪ್ರದೇಶಗಳೂ ಚಿರಪರಿಚಿತ. ಬೇರೆ ಸಿನಿಮಾಗಳ ಚಿತ್ರೀಕರಣವೆಂದರೆ ಒಂದಷ್ಟು ವಿಶಿಷ್ಟ ಕಟ್ಟಡಗಳನ್ನು, ಕೆಲವೇ ಕೆಲ ಪ್ರದೇಶಗಳನ್ನು ಮಾತ್ರವೇ ಸೆರೆ ಹಿಡಿಯಲಾಗುತ್ತದೆ. ಆದರೆ ಅಮೆರಿಕದಲ್ಲಿ ಕಣ್ಮನ ತಣಿಸುವ ಬೇರೆ ಪ್ರದೇಶಗಳೊಂದಿಗೆ ‘ಬಬ್ರೂ’ವಿನ ರೋಚಕ ಜರ್ನಿ ಸಾಗುತ್ತದೆ. ಕ್ರೈಂ, ಥ್ರಿಲ್ಲರ್ ಕಥೆ ಹೇಳುತ್ತಾ, ಚಿತ್ರ ವಿಚಿತ್ರವಾದ ತಿರುವುಗಳ ಮೂಲಕ ಮುಂದುವರೆಯುವ ‘ಬಬ್ರೂ’ ಜರ್ನಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ.

ಇಲ್ಲಿ ಸುಮನ್ ನಗರ್ ಕರ್ ‘ಸನಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ಮಹಿ ಹಿರೇಮಠ್ ಅರ್ಜುನ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸನಾ ಕೌಟುಂಬಿಕ ಹಿಂಸೆಯ ವಾತಾವರಣದಿಂದ ರೋಸತ್ತು ಹೋಗಿ ಒಂದು ಸುದೀರ್ಘ ಪಯಣದ ಮೂಲಕ ಮಾನಸಿಕ ತೊಳಲಾಟದಿಂದ ಪಾರುಗಾಣುವ ಯೋಜನೆ ಹಾಕಿಕೊಂಡಿರುವ ಮಹಿಳೆ. ಅರ್ಜುನ ತನ್ನ ಪ್ರೇಯಸಿಯ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಅರ್ಜೆಂಟಿನ ಮನಸ್ಥಿತಿಗೆ ವಶವಾದ ಹುಡುಗ. ಆದರೆ ಇವರಿಬ್ಬರೂ ಕೂಡಾ ಒಂದೇ ಕಾರಲ್ಲಿ ಹೊರಡುವಂಥ ಪರಿಸ್ಥಿತಿ ನಿಮಾಣವಾಗುತ್ತದೆ. ಹಾಗೆ ಅಪರಿಚಿರಿಬ್ಬರು ‘ಬಬ್ರೂ’ ಕಾರು ಹತ್ತಿ ಕೆನಡಾದ ದಿಕ್ಕಿನತ್ತ ಅಮೆರಿಕೆಯಿಂದ ಹೊರಡುತ್ತಲೇ ಈ ಕಥೆಯ ರೋಚಕ ಅಧ್ಯಾಯ ಮಗ್ಗು ಬದಲಿಸಿಕೊಳ್ಳುತ್ತದೆ.

ಹೀಗೆ ಹೊರಟ ಕಾರು ಒಂದಷ್ಟು ದೂರದಲ್ಲಿಯೇ ಪಂಕ್ಚರ್ ಆಗಿ ನಿಲ್ಲುತ್ತದೆ. ಆ ಘಳಿಗೆಯಲ್ಲಿ ಹಾಲಿವುಡ್ ನಟ ರೇ ಟೊಸ್ಟಾಡೋ ಪಾತ್ರ ಪಂಕ್ಚರ್ ಹಾಕುವ ನೆಪದಲ್ಲಿ ಆಗಮಿಸುತ್ತದೆ. ಕಡೆಗೆ ಆ ಪಾತ್ರವೂ ಕಾರು ಹತ್ತು ಸನಾ ಮತ್ತು ಅರ್ಜುನನ ಪಯಣದಲ್ಲಿ ಭಾಯಿಯಾಗುತ್ತದೆ. ಅದಾಗಿ ಒಂದಷ್ಟು ಕಾಲದಲ್ಲಿಯೇ ವಿಚಿತ್ರ ಆಸಾಮಿಯಂಥಾ ಪಾತ್ರವೊಂದು ಈ ಕಾರನ್ನು ಹಿಂಬಾಲಿಸಲಾರಂಭಿಸುತ್ತದೆ. ಆ ಪಾತ್ರಕ್ಕೂ ಒಂದು ಹುಡುಕಾಟದ ಹಿನ್ನೆಲೆಯೂ ಇರುತ್ತದೆ. ಅದು ಎಂಥಾ ಕ್ರೌರ್ಯ ಹೊಂದಿರುತ್ತದೆಂದರೆ, ತನ್ನ ಹುಡುಕಾಟದ ಹಾದಿಯಲ್ಲಿ ಯಾರೇ ಎದುರಾಗಿ ನಿಂತರೂ ಕೊಂದು ಮುಗಿಸಿ ಮುಂದೆ ಸಾಗುತ್ತದೆ. ಇಂಥಾ ವ್ಯಕ್ತಿ ಯಾಕೆ ಕಾರನ್ನು ಹಿಂಬಾಲಿಸುತ್ತದೆ? ಸನಾ ಮತ್ತು ಅರ್ಜುನರ ಹಿನ್ನೆಲೆ ಏನು? ಪಂಕ್ಚರ್ ಹಾಕುವ ನೆಪದಲ್ಲಿ ಕಾರು ಸೇರಿಕೊಂಡ ಪಾತ್ರದ ಹಿನ್ನೆಲೆ ಏನೆಂಬುದಕ್ಕೆ ಇಲ್ಲಿ ಮೈನವಿರೇಳಿಸುವಂತಹ ರೋಚಕ ವಿವರಗಳು ಸಿಗುತ್ತವೆ.

ಅದನ್ನೆಲ್ಲ ಸಿನಿಮಾ ಮಂದಿರಕ್ಕೆ ಹೋಗಿ ಕಣ್ತುಂಬಿಕೊಂಡರೆ ಅದರ ಮಜವೇ ಬೇರೆಯದ್ದಿರುತ್ತದೆ. ನಿರ್ದೇಶಕ ಸುಜಯ್ ರಾಮಯ್ಯ ಪ್ರತೀ ಫ್ರೇಮಿನಲ್ಲಿಯೂ ದೃಶ್ಯಾವಳಿಗೆ ಪೂರಕವಾದಂತೆಯೇ ತಾಜಾ ಕಥೆ ಹೇಳಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಸುಮನ್ ನಗರ್ ಕರ್, ಮಹಿ ಹಿರೇಮಠ್ ಮತ್ತು ವಿದೇಶಿ ನಟರ ನಟನೆ ಚೆಂದಗಿದೆ. ಈ ಇಡೀ ಸಿನಿಮಾದ ಒಟ್ಟಂದದಲ್ಲಿ ಛಾಯಾಗ್ರಹಣದ ಪಾತ್ರ ಹಿರಿದಾಗಿದೆ. ಸಂಗೀತವೂ ಸೇರಿದಂತೆ ಎಲ್ಲವೂ ಒಂದಕ್ಕೊಂದು ಪೂರಕವಾಗಿದ್ದುಕೊಂಡು ‘ಬಬ್ರೂ’ ಜರ್ನಿಯನ್ನು ರೋಚಕವಾಗಿಸಿವೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಾಲಿವುಡ್ ಸುಲ್ತಾನ್

#Babru #BabruMovieReview #SumanNagarkar #KannadaSuddigalu

Tags